'ಸ್ವಾಭಿಮಾನಕ್ಕೆ ಧಕ್ಕೆಯಾಗಿ ಕೈ ಮುಖಂಡ ಬಿಜೆಪಿಗೆ'
ಕಾಂಗ್ರೆಸ್ ಪಕ್ಷದಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಹಲವರುತಮ್ಮ ಹಳೆ ಪಕ್ಷ ತೊರೆದು ಬಿಜೆಪಿ ಬಂದರು ಎಂದು ಮುಖಂಡರೋರ್ವರು ಹೇಳಿದ್ದಾರೆ. ಅಲ್ಲದೇ ಕೈ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಸ್ಕಿ (ಏ.08): ಪ್ರತಾಪ್‌ಗೌಡ ಪಾಟೀಲ್ ಸೇರಿದಂತೆ 17 ಜನ ಶಾಸಕರು ಯಾರು ಮಾರಾಟವಾಗಿಲ್ಲ. ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ಸ್ವಾಭಿಮಾನಕ್ಕಾಗಿ ಧಕ್ಕೆಯಾಗಿದ್ದರಿಂದ ಕಾಂಗ್ರೆಸ್, ಜೆಡಿಎಸ್‌ನಿಂದ ಬಿಜೆಪಿಗೆ ಬಂದಿದ್ದಾರೆ. ಅವರ ತ್ಯಾಗದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರನ್ನು ಪಕ್ಷ ಕೈ ಬಿಡುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಮಸ್ಕಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೂ ಕೂಡ ಒಂದು ಕಾಲದಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದವರು. ಅವರು ಕೂಡ ಪಕ್ಷಾಂತರಿಗಳೇ ಎನ್ನುವುದನ್ನು ಮರೆಯಬಾರದು ಎಂದು ತಿಳಿಸಿದರು.
'ಇನ್ನೂ 10 ವರ್ಷ ಕಾಂಗ್ರೆಸ್ ಅಧಿಕಾರ ಹಿಡಿಯಲ್ಲ' ...
ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಈಗಾಗಲೇ ನಾನು ಸಂಚಾರ ಮಾಡಿ ಬಂದಿದ್ದೇನೆ. ಎಲ್ಲ ಕಡೆಗೂ ಬಿಜೆಪಿ ಅಭ್ಯರ್ಥಿಗಳ ಪರವಾದ ಅಲೆಯಿದೆ. ಮಸ್ಕಿಯಲ್ಲೂ ಎರಡ್ಮೂರು ದಿನಗಳಿಂದ ನಿರಂತರ ಪ್ರಚಾರ ಮಾಡುತ್ತಿದ್ದು, ಎಲ್ಲ ಕಡೆಗೂ ಉತ್ತಮ ಸ್ಪಂದನೆ ಇದೆ ಎಂದು ತಿಳಿಸಿದರು.
ಯತ್ನಾಳ್‌ಗೆ ತಲೆ ಕೆಟ್ಟುಹೋಗಿದೆ: ವಿಜಯೇಂದ್ರ ಸರ್ಕಾರದ ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಬಸನಗೌಡ ಯತ್ನಾಳ್‌ಗೆ ತಲೆಕೆಟ್ಟು ಹೋಗಿದ್ದು, ಬೆಳಗಾದರೆ ಸಾಕು ಯಡಿಯೂರಪ್ಪ ಅವರ ವಿರುದ್ಧ ಮಾತನಾಡುವುದೇ ಅವರ ಕೆಲಸವಾಗಿದೆ. ಅವರ ಬಗ್ಗೆ ಮಾತನಾಡಿದರೆ ನನಗೆ ತಲೆ ಕೆಟ್ಟು ಹೋಗಲಿದೆ. ಹೀಗಾಗಿ ಅವರ ಬಗ್ಗೆ ಮಾತನಾಡುವುದನ್ನೇ ನಾವು ಕೈ ಬಿಟ್ಟಿದ್ದೇವೆ ಎಂದು ಹೇಳಿದರು.