ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗಲಿದೆ: ವಿಜಯೇಂದ್ರ
ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಪ್ರತಾಪಗೌಡ ಪಾಟೀಲರೇ ಪ್ರಮುಖ ಕಾರಣ| ಪಾಟೀಲರು ಮೊದಲ ಹೆಜ್ಜೆ ಇಟ್ಟು ಶಾಸಕ ಸ್ಥಾನ ತ್ಯಾಗ ಮಾಡಿರುವುದು ಎಂದಿಗೂ ಬಿಜೆಪಿ ಮರೆಯುವುದಿಲ್ಲ| ರೈತರ, ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಎಲ್ಲ ವರ್ಗದ ಅಭಿವೃದ್ಧಿಗೆ ಶ್ರಮಿಸುವ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಬೆಂಬಲಿಸಿ ಅಭಿವೃದ್ಧಿಗೆ ಸಹಕರಿಸಬೇಕು: ವಿಜಯೇಂದ್ರ|
ಸಿಂಧನೂರು(ಏ.08): ಪ್ರತಾಪಗೌಡ ಪಾಟೀಲರು ಹಣಕ್ಕಾಗಿ ಮಾರಾಟವಾಗಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪಿಸುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ಅವರಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆಂಬ ಭಯ ಮೂಡಿದೆ. ರಾಜ್ಯದಲ್ಲಿ ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಮಸ್ಕಿ ಉಪಚುನಾವಣೆ ನಿಮಿತ್ತ ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ಬುಧವಾರ ನಡೆದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಪ್ರತಾಪಗೌಡ ಪಾಟೀಲರೇ ಪ್ರಮುಖ ಕಾರಣ. ಅವರು ಮೊದಲ ಹೆಜ್ಜೆ ಇಟ್ಟು ಶಾಸಕ ಸ್ಥಾನ ತ್ಯಾಗ ಮಾಡಿರುವುದು ಎಂದಿಗೂ ಬಿಜೆಪಿ ಮರೆಯುವುದಿಲ್ಲ ಎಂದು ಹೇಳಿದರು.
'ಕುರುಬ ಸಮಾಜಕ್ಕೆ ಸಿದ್ದರಾಮಯ್ಯ ಕೊಡುಗೆ ಶೂನ್ಯ'
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಬಂದಿದ್ದರೂ ಕಾಂಗ್ರೆಸ್-ಜೆಡಿಎಸ್ ಅಪಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಆಡಳಿತ ಪಕ್ಷದಲ್ಲಿದ್ದ 17 ಶಾಸಕರು ವಿಶ್ವಾಸ ಕಳೆದುಕೊಂಡು ರಾಜೀನಾಮೆ ನೀಡುವ ಮೂಲಕ ಯಡಿಯೂರಪ್ಪರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಆದ್ದರಿಂದ ಪ್ರತಾಪಗೌಡ ಪಾಟೀಲ್ ಅವರನ್ನು ಐತಿಹಾಸಿಕವಾಗಿ ಗೆಲ್ಲಿಸಬೇಕು. ರೈತರ, ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಎಲ್ಲ ವರ್ಗದ ಅಭಿವೃದ್ಧಿಗೆ ಶ್ರಮಿಸುವ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಬೆಂಬಲಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ, ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಬೇಕು. ಪ್ರತಾಪಗೌಡ ಪಾಟೀಲ್‌ಗೆ ಮತ ಹಾಕಿ ಗೆಲ್ಲಿಸಬೇಕು. ಅವರು ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಹೃದಯವಂತರು ಎಂದರು.
ಸುರಪುರ ಶಾಸಕ ರಾಜೂಗೌಡ ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರಗೆ ವಿಜಯೇಂದ್ರ ಮೇಲೆ ಲವ್ ಆದ್ದಂತೆ ಕಾಣುತ್ತಿದೆ. ಆದ್ದರಿಂದ ಪ್ರಚಾರಕ್ಕೆ ಹೋದಲೆಲ್ಲ ವಿಜಯೇಂದ್ರ ಅವರನ್ನು ನೆನಸಿಕೊಳ್ಳುತ್ತಿದ್ದಾರೆ. ವಿಜಯೇಂದ್ರ ಅವರು ಕನಸಿನಲ್ಲಿ ಬರಬೇಡ ಎಂಬ ಯಂತ್ರವನ್ನು ಕಾಂಗ್ರೆಸ್‌ನವರು ಕಟ್ಟಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು. ಜಿಪಂ ಸದಸ್ಯ ಅಮರೇಗೌಡ ವಿರುಪಾಪುರ, ಸಂಸದ ಸಂಗಣ್ಣ ಕರಡಿ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಮುಖಂಡರಾದ ರವಿಕುಮಾರ, ಪ್ರಸನ್ನ ಪಾಟೀಲ್, ವಿಶ್ವನಾಥ ತೋರಣದಿನ್ನಿ, ಶಿವುಪುತ್ರಪ್ಪ ಅರಳಹಳ್ಳಿ ಇದ್ದರು.