ಮಸ್ಕಿ(ಏ.05): ಉಪ ಚುನಾವಣೆ ವೇಳೆ ಪಕ್ಷದಲ್ಲಿ ಕೇವಲ ವಿಜಯೇಂದ್ರ ಹಾಗೂ ಮತ್ತಿತರಿಗೆ ಮಾತ್ರ ಚುನಾವಣಾ ಪ್ರಚಾರದ ಉಸ್ತುವಾರಿ ನೀಡುತ್ತಾರೆ ಎಂಬ ಯತ್ನಾಳ್‌ ಹೇಳಿಕೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಯೋಗ್ಯತೆ ಇದ್ದವರಿಗೆ ಉಸ್ತುವಾರಿ ಕೊಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ತಾಲೂಕಿನ ತಲೇಖಾನ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯೋಗ್ಯತೆ ಇದ್ದವರಿಗೆ ಮಾತ್ರ ಉಸ್ತುವಾರಿ ಕೊಡುತ್ತಾರೆ ಅಂದ ಮಾತ್ರಕ್ಕೆ ಯತ್ನಾಳ ಅವರಿಗೆ ಯೋಗ್ಯತೆ ಇಲ್ಲಾ ಅಂತಲ್ಲ. ಯತ್ನಾಳ್‌ ದೊಡ್ಡ ಲೀಡರ್‌, ಅವರ ಬಗ್ಗೆ ನಾವ್ಯಾರೂ ಪ್ರಶ್ನೆ ಮಾಡಲ್ಲ ಎಂದು ತಿಳಿಸಿದ್ದಾರೆ.

ವಿಜಯೇಂದ್ರ ಬೆಳೀಬೇಡ ಅನ್ನೋದಕ್ಕೆ ನೀವ್ಯಾರು?: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಶ್ರೀರಾಮುಲು

ನಮ್ಮ ರಾಜ್ಯಾಧ್ಯಕ್ಷರು ಯಾವ ಕ್ಷೇತ್ರಕ್ಕೆ ಯಾರಿಗೆ ಉಸ್ತುವಾರಿ ಕೊಡಬೇಕು ಅಂತ ನಿರ್ಧಾರ ಮಾಡುತ್ತಾರೆ. ಇದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಿರ್ಧಾರ ಅಲ್ಲ. ಸುಮ್ಮನೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದರು.

ಯತ್ನಾಳ್‌ ಹಿರಿಯರು. ಅವರು ಯಾವ ಕ್ಷೇತ್ರದಲ್ಲಿ ಬೇಕಾದರೂ ಪ್ರಚಾರ ಮಾಡಬಹುದು. ಕಾರ್ಯಕರ್ತರು ಅವರನ್ನು ಸ್ವಾಗತಿಸುತ್ತಾರೆ. ಅವರಿಗೆ ಯಾರೂ ನಿರ್ಬಂಧ ಹಾಕಿಲ್ಲ. ಮಸ್ಕಿ ಕ್ಷೇತ್ರದಲ್ಲಿ ವಿಜಯೇಂದ್ರ ಮುಖ್ಯ ಅಲ್ಲ, ಕಾರ್ಯಕರ್ತರು ಮುಖ್ಯ. ಇಲ್ಲಿ ಕಾರ್ಯಕರ್ತರೇ ಚುನಾವಣೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.