ರಾಯಚೂರು(ಏ.04): ಬಿ.ವೈ. ವಿಜಯೇಂದ್ರ ಬೆಳೆಯುವ ವ್ಯಕ್ತಿಯಾಗಿದ್ದಾರೆ. ವಿಜಯೇಂದ್ರ ಮುಖ್ಯಮಂತ್ರಿ ಬಿ.ಎಸ್‌.  ಯಡಿಯೂರಪ್ಪನವರ ಮಗನಾಗಿದ್ದಾರೆ. ವಿಜಯೇಂದ್ರ ತಂದೆಯ ಸುಖ ಬಯಸುವುದರಲ್ಲಿ  ತಪ್ಪೇನಿದೆ?, ಸಿಎಂ ಅವರ ಮಗನಾಗಿ ಪಕ್ಷಕ್ಕೋಸರ ಈ ರೀತಿ ಕೆಲಸ ಮಾಡುವುದು ತಪ್ಪೇನಿದೆ. ವಿಜಯೇಂದ್ರ ಬಂದ ತಕ್ಷಣವೇ ಸೋಲಿನ ಹತಾಸೆ ನಿಮಗೆ ಶುರುವಾಗಿದೆ. ಹೀಗಾಗಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸವನ್ನ ಮಾಡಬೇಡಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಗೆ ಸಚಿವ ಬಿ. ಶ್ರೀ ರಾಮುಲು ಕಿಡಿಕಾರಿದ್ದಾರೆ.

ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಮಸ್ಕಿ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಈಗ ಮಂತ್ರಿಗಳಾಗಿದ್ದೇವೆ. ನಮಗೆ ಏನು ಗೌರವ ಸಿಗುತ್ತೋ ಅದಕ್ಕಿಂತ ಸ್ವಲ್ಪ ಜಾಸ್ತಿ ಗೌರವ ವಿಜಯೇಂದ್ರಗೆ ಸಿಗಬಹುದು. ಯಾಕೆಂದರೆ ಅವರು ಮುಖ್ಯಮಂತ್ರಿ ಮಗ ಆಗಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ ಅಲ್ವಾ?. ಮುಖ್ಯಮಂತ್ರಿ ಮಕ್ಕಳು ಬಂದಾಗ ನಾವು ಗೌರವ ಕೊಡಬೇಕಾಗುತ್ತೆ. ಆದ್ರೆ ನೀವು ಕುಣಿಯಲು ಆಗದೇ ನೆಲವೇ ಡೋಂಕು ಅಂದ್ರೆ ನಾವು ಏನು ಮಾಡಕ್ಕೆ ಆಗಲ್ಲ. ರಾಜಕಾರಣದಲ್ಲಿ ಯುವಕರು ಹರಿಯುವ ನೀರಿನಂತೆ. ನಾವು ಮುದುಕರು ಆಗುತ್ತಾ ಹೋಗುತ್ತೇವೆ. ಯುವಕರು ರಾಜಕಾರಣಕ್ಕೆ ಬರಬೇಕು. ವಿಜಯೇಂದ್ರ ಬೆಳೆಯುತ್ತಿದ್ದಾನೆ ಬೆಳೆಯಲಿ ಬಿಡಿ. ಆ ಭಗವಂತನ ಆಶೀರ್ವಾದ ಎಲ್ಲಿಯವರೆ ಸಿಗುತ್ತೆ ಅಲ್ಲಿಯವರೆಗೆ ಬೆಳೆಯಲಿ. ಅವರ ಬೆಳವಣಿಗೆ ಬೇಡ ಎನ್ನಲು ನೀವು ಯಾರು?. ಎಲ್ಲಾ ಕಡೆ ವಿಜಯೇಂದ್ರ ಹೋದ ಕಡೆ ಸಿಳ್ಳೆ ಹಾಕುವುದು, ಕೇಕೆ ಹಾಕುವುದು ನೋಡಿ ಸಂತೋಷ ಪಡಬೇಕು ಹೊರತು ಅಸೂಯೆ ಪಡಬಾರದು ಎಂದು ಹೇಳಿದ್ದಾರೆ. 

ಮಸ್ಕಿ ಕ್ಷೇತ್ರಕ್ಕೆ ನೀರು ತರೋದೇ ಬಿಜೆಪಿ ಸರ್ಕಾರದ ಆದ್ಯತೆ: ವಿಜಯೇಂದ್ರ

ಕಾಂಗ್ರೆಸ್ - ಬಿಜೆಪಿ ನಾಯಕ ಮಧ್ಯೆ ವಾಗ್ವಾದ 

ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಏತನ್ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ವಾಗ್ವಾದ ಅರಂಭವಾಗಿದೆ. ಯಡಿಯೂರಪ್ಪ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ 2 ಕೆಜಿ ಅಕ್ಕಿ ಕಡಿತ ಮಾಡಿದ ವಿಚಾರದ ಬಗ್ಗೆ ಬಿಎಸ್‌ವೈ ಯಾರ ಮನೆಯಿಂದ ದುಡ್ಡು ತರಲ್ಲ ಎಂದು ಏಕವಚನದಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್‌ ನೀಡಿದ ಸುರಪುರ ಶಾಸಕ ರಾಜುಗೌಡ, ಸಿದ್ದರಾಮಯ್ಯಗೆ ರಾಯಚೂರಿನ ಬಿಸಿಲು ಜಾಸ್ತಿ ಹತ್ತಿದಂತೆ ಕಾಣುತ್ತೆ, ಸಿದ್ದರಾಮಯ್ಯ ಸಾಹೇಬರು ಯಡಿಯೂರಪ್ಪ ಬಗ್ಗೆ ಏಕವಚನದಲ್ಲಿ ಮಾತನಾಡಲು ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಸಾಹೇಬರೇ ನಾವು ಯಾರು ಅಪ್ಪನ ಮನೆಯಿಂದ ಅಕ್ಕಿ ತರಲ್ಲ, ಜನರ ಟ್ಯಾಕ್ಸ್‌‌ನ ದುಡ್ಡಿನಿಂದಲ್ಲೇ ಅಕ್ಕಿ ತರುತ್ತೇವೆ. ನಿಮ್ಮ ಬಳಿ ಒಂದು‌ ಮನವಿ ಮಾಡುತ್ತೇನೆ. ನಿಮ್ಮಗಿಂತ ಮೊದಲು ಯಡಿಯೂರಪ್ಪ ಸಿಎಂ ಆಗಿದ್ದಾರೆ. ಬಿಎಸ್‌ವೈ ಸಿಎಂ ಆದ ಬಳಿಕವೇ ಸಿದ್ದರಾಮಯ್ಯ ಅವರೇ ನೀವು ಸಿಎಂ ಆಗಿದ್ರಿ, ನೀವು ಸಮಾಜದಲ್ಲಿ ಹಿರಿಯರು. ನಿಮ್ಮ ನೋಡಿ ನಾವು ರಾಜಕೀಯ ಕಲಿಯಬೇಕು.. ನೀವು ಯಡಿಯೂರಪ್ಪವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ರೆ, ನಮ್ಮಂತ ಹುಡುಗರು ಏನು ಮಾಡಬೇಕು. ನೀವೇ ಯೋಚನೆ ಮಾಡಿ ಸಾಹೇಬರೇ ಎಂದು ಹೇಳಿದ್ದಾರೆ. 

ರಾಜಕೀಯಕ್ಕೆ ನಾವು ಬಂದ ಮೇಲೆ ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ ಆಗುತ್ತದೆ. ಹಿರಿಯರಿಗೆ ಗೌರವ ಕೊಟ್ಟು ಮಾತನಾಡುವ ಕೆಲಸ ನಾವು ಮಾಡಬೇಕಾಗುತ್ತದೆ. ನಾವು ನಿಮಗೆ ಏಕವಚನದಲ್ಲಿ ಎಂದೂ ಸಹ ಮಾತನಾಡಿಲ್ಲ, ಇಂದಿಗೂ ಸಹ ನಾವು ನಿಮಗೆ ಸಿದ್ದರಾಮಯ್ಯ ಸಾಹೇಬರೇ ಎನ್ನುತ್ತೇವೆ. ಬಿಎಸ್‌ವೈ ಬಗ್ಗೆ ಏಕವಚನದಿಂದ ಮಾತನಾಡಿದ್ದರಿಂದ ನಮ್ಮ ಮನಸ್ಸಿಗೆ ಬಹಳ ನೋವು ಆಗುತ್ತದೆ ಎಂದು ಶಾಸಕ ರಾಜುಗೌಡ ತಿಳಿಸಿದ್ದಾರೆ.