ಕಾರವಾರ [ಡಿ.10]: ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿದ್ದು, 15 ರಲ್ಲಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಉಪ ಚುನಾವಣೆಯಲ್ಲಿ ಗೆದ್ದವರಿಗೆ ಉಡುಗೊರೆ ಸಿಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. 

ಕಾರವಾರದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಗೆದ್ದವರಿಗೆ ಉಡುಗೊರೆ ಇರುವಂತೆ, ಸೋತವರಿಗೆ ಏನು ಮಾಡಬೇಕು ಎಂದು ಪಕ್ಷ ನಿರ್ಧಾರ ಮಾಡಲಿದೆ ಎಂದಿದ್ದಾರೆ. 

ಚುನಾವಣೆಯಲ್ಲಿ ಹದಿನೈದಕ್ಕೆ‌ ಹದಿನೈದು ಸ್ಥಾನ ಗೆಲ್ಲುತ್ತೇವೆ ಎನ್ನುವ ನಿರೀಕ್ಷೆ ಇತ್ತು. ಹನ್ನೆರಡು ಸ್ಥಾನದಲ್ಲಿ ಗೆಲುವನ್ನು ಸಾಧಿಸುತ್ತೇವೆ ಎಂದು ಖಚಿತವಿತ್ತು. ಅದರಂತೆ ಗೆಲುವನ್ನ ಪಡೆದಿದ್ದೇವೆ. ಸೋಲಿನ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿರುವುದು ಒಳ್ಳೆಯ ನಿರ್ಧಾರ.  ಸೋಲಿನ ಹೊಣೆ ಹೊತ್ತು ರಾಜೀನಾಮೆ‌ ಕೊಡುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆ ಎಂದರು. 

ಇನ್ನು ಚುನಾವಣೆ ನಂತರ ಯಡಿಯೂರಪ್ಪ ರಾಜೀನಾಮೆ‌ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಗುಂಡೂರಾವ್ ಅವರೇ ಹೇಳಿದ್ದರು. ಆದರೆ ಸೋಲು ಅವರನ್ನೇ ಸುತ್ತಿಕೊಂಡು ರಾಜೀನಾಮೆ ಕೊಡುವಂತಾಗಿದೆ ಎಂದರು. 

ನೂತನ ಶಾಸಕರಿಗೆ ಸಚಿವ ಸಂಪುಟದಲ್ಲಿ ಮಣೆ, ಉಳಿದವರಿಗೆ ಬೇರೆ ಹೊಣೆ?..

ಇನ್ನು ಸೋತವರ ಕೈ ಸರ್ಕಾರ ಹಿಡಿಯಲಿದೆ ಎನ್ನುವ ಪ್ರಶ್ನೆಗೆ ಈ ಬಗ್ಗೆ ತಮಗೆ ಗೊತ್ತಿಲ್ಲವೆಂದು ಹೇಳಿದ ಅಶ್ವತ್ಥ್ ನಾರಾಯಣ್ , ರಮೇಶ್ ಜಾರಕಿಹೊಳಿ ಡಿಸಿಎಂ‌ ಹುದ್ದೆಗೆ ಲಾಭಿ ನಡೆಸಿದ್ದಾರೆ ಎನ್ನುವ ಬಗ್ಗೆಯೂ ಮಾತನಾಡಿ ಇದರಲ್ಲಿ ತಪ್ಪಿಲ್ಲ. ರಾಜಕೀಯದಲ್ಲಿ ಎಲ್ಲರಿಗೂ ಹೆಚ್ಚಿನ ಸ್ಥಾನ ಮಾನ‌ ಬೇಕು. ಈ ನಿಟ್ಟಿನಲ್ಲಿ ಅವರು ಸ್ಥಾನ ಬಯಸೋದು ತಪ್ಪಿಲ್ಲ ಎಂದರು. 

ಬಿಜೆಪಿಗೆ 2-3 ಕ್ಷೇತ್ರ ಕೈತಪ್ಪಿ ಹೋಗಿದೆ. ಜನರು ಬಹಳಷ್ಟು ಪ್ರಬುದ್ಧತೆಯಿಂದ  ಮತ ಹಾಕಿದ್ದಾರೆ. 12 ಸ್ಥಾನ ನೀಡುವ ಮೂಲಕ ಜನರು ಯಡಿಯೂರಪ್ಪನವರ ಕೈ ಬಲಪಡಿಸಿದ್ದಾರೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದರು.