ಉಡುಪಿ(ಆ.29): ಚಿಟ್ಟೆಗಳನ್ನು ‘ರೆಕ್ಕೆಗಳಿರುವ ಆಭರಣಗಳು’ ಎಂದು ಕರೆಯುತ್ತಾರೆ. ಇಂತಹ ಅಪೂರ್ವವಾದ ಜೀವಿ ಚಿಟ್ಟೆಗಳು ‘ಸುತ್ತಲಿನ ವಾತಾವರಣದಲ್ಲಾಗುವ ಬದಲಾವಣೆಯ ಸೂಚಕ’ (ಇಂಡಿಕೇಟರ್‌)ಗಳು ಎನ್ನುತ್ತಾರೆ ಪರಿಸರ ತಜ್ಞರು.

ಅಂತಹ ಚಿಟ್ಟೆಗಳ ಸಂಖ್ಯೆ ಇಂದು ಕ್ಷೀಣಿಸುತ್ತಿದೆ. ಅಂದರೆ ಅಲ್ಲಿನ ಪರಿಸರ ನಾಶವಾಗುತ್ತಿದೆ ಎಂದರ್ಥ. ಆದ್ದರಿಂದ ಚಿಟ್ಟೆಗಳ ರಕ್ಷಣೆಗಾಗಿ, ಅವುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ‘ಬೆಳುವಾಯಿ ಬಟರ್‌ ಫ್ಲೈ ಮೀಟ್‌ - 2019’ ಎಂಬ ವಿಶಿಷ್ಟಕಾರ್ಯಕ್ರಮ ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬೆಳುವಾಯಿಯಲ್ಲಿ 7.35 ಎಕ್ರೆ ಪ್ರದೇಶದಲ್ಲಿ ನೂರಾರು ಚಿಟ್ಟೆಗಳ ಅವಾಸವಾಗಿರುವ ಅತ್ಯಪೂರ್ವವಾದ ಚಿಟ್ಟೆಪಾರ್ಕನ್ನು ಆರಂಭಿಸಿರುವ ಸಮ್ಮಿಲನ್‌ ಶೆಟ್ಟಿಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದು. ಸೆ.20ರಿಂದ 22ರವರೆಗೆ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ‘ಭಾರತದ ಚಿಟ್ಟೆಗಳ ಪಿತಾಮಹ’ ಎಂದೇ ಕರೆಯಲ್ಪಡುವ ಇಸಾಕ್‌ ಕೆಹಿಮ್ಕರ್‌ ಅವರೊಂದಿಗೆ ದೇಶದ ಖ್ಯಾತ ಚಿಟ್ಟೆತಜ್ಞರು ಬಂದು ಮಾಹಿತಿ ನೀಡಲಿದ್ದಾರೆ. ಸಮ್ಮಿಲನ್‌ ಶೆಟ್ಟಿಅವರ ನಿರ್ಮಿಸಿರುವ ಲೈಫ್‌ ಆಫ್‌ ಬಟರ್‌ ಫ್ಲೈಸ್‌ ಎಂಬ ಸಾಕ್ಷ್ಯಚಿತ್ರ ಕೂಡ ಸಾರ್ವಜನಿಕವಾಗಿ ಬಿಡುಗಡೆಗೊಳ್ಳಲಿದೆ.

ಕನ್ನಡ ಧ್ವಜ ಬಣ್ಣದ ಪಾತರಗಿತ್ತಿಗೆ ‘ರಾಜ್ಯ ಚಿಟ್ಟೆ’ ಗೌರವ!

ಒಟ್ಟು 30 ಮಂದಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಅವಕಾಶವಿದೆ. ಇದರಲ್ಲಿ ಕೇವಲ ಉಪನ್ಯಾಸ ಮಾತ್ರವಲ್ಲ, ತಜ್ಞರ ಜೊತೆಗೆ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಮಾಳ ಮತ್ತು ದುರ್ಗಾ ಗ್ರಾಮಗಳಲ್ಲಿ ಚಿಟ್ಟೆಗಳೊಂದಿಗೆ ನಡಿಗೆ (ಬಟರ್‌ ಫ್ಲೈ ವಾಕ್‌)ಯ ಮೂಲಕ ಪ್ರತ್ಯಕ್ಷ ಅನುಭವ ಕೂಡ ನೀಡಲಾಗುತ್ತಿದೆ. ಜೊತೆಗೆ ಚಿಟ್ಟೆಗಳ ಫೋಟೋಗ್ರಫಿಗೂ ಅವಕಾಶ ಇದೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ಖ್ಯಾತ ಚಿಟ್ಟೆತಜ್ಞ ಅಶೋಕ್‌ ಸೇನ್‌ ಗುಪ್ತ, ಡಾ.ಕಲೇಶ್‌ ಸದಾಸಿವನ್‌, ಡಾ.ಮಿಲಿಂದ್‌ ಭಾಕ್ರೆ, ಹನೀಶ್‌ ಕೆ.ಎಂ. ಅವರೂ ಆಗಮಿಸಲಿದ್ದಾರೆ. ಅವರ ಜ್ಞಾನವನ್ನು ಹಂಚಿಕೊಳ್ಳುವುದರ ಜೊತೆಗೆ ಅವರೊಂದಿಗೆ ಕ್ಷೇತ್ರ ಅನುಭವ ಪಡೆಯುವ ಸದವಕಾಶ ಆಸಕ್ತರಿಗೆ ದೊರೆಯಲಿದೆ.

ಚಿಟ್ಟೆಗಳು ಜೀವ ಪ್ರಪಂಚದ ಕೊಂಡಿ:

ಒಂದೂರಲ್ಲಿರುವ ಚಿಟ್ಟೆಗಳನ್ನು ನೋಡಿ ಆ ಊರಿನ ಪರಿಸರ, ವಾತಾವರಣ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅವು ಜೀವ ಪ್ರಪಂಚದ ಅನಿವಾರ್ಯ ಕೊಂಡಿಗಳಾಗಿವೆ. ಆದ್ದರಿಂದ ಅವುಗಳ ರಕ್ಷಣೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಚಿಟ್ಟೆಗಳ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಅದಕ್ಕಾಗಿ ಈ ಶಿಬಿರ ಆಯೋಜಿಸಲಾಗಿದೆ. ಪರಿಣಾಮಕಾರಿಯಾಗಿ ಆಯೋಜಿಸುವ ಉದ್ದೇಶದಿಂದ ಕೇವಲ 30 ಮಂದಿಗೆ ಮಾತ್ರ ಅವಕಾಶ ಮಿತಿಗೊಳಿಸಲಾಗಿದೆ ಎಂದು ಚಿಟ್ಟೆಪಾರ್ಕಿನ ರೂವಾರಿ ಸಮ್ಮಿಲನ್‌ ಶೆಟ್ಟಿ ಹೇಳಿದರು.