ಹೂವಿನಹಡಗಲಿ: ಇಲ್ಲಿನ ಶ್ರೀಮತಿ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು(Soppina Kalamma Girls Government Pre-Graduate College) ಪ್ರವೇಶ ಪಡೆಯಲು ವಿದ್ಯಾರ್ಥಿನಿಯರು ದುಂಬಾಲು ಬಿದ್ದಿದ್ದಾರೆ. 565 ಬಾಲಕಿಯರು ದಾಖಲಾಗಿದ್ದಾರೆ.
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಇಲ್ಲಿನ ಶ್ರೀಮತಿ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು(Soppina Kalamma Girls Government Pre-Graduate College) ಪ್ರವೇಶ ಪಡೆಯಲು ವಿದ್ಯಾರ್ಥಿನಿಯರು ದುಂಬಾಲು ಬಿದ್ದಿದ್ದಾರೆ. 565 ಬಾಲಕಿಯರು ದಾಖಲಾಗಿದ್ದಾರೆ.
ಈಗ ಶೌಚಕ್ಕೆ ಸರದಿ ಸಾಲು ನಿಲ್ಲುವ ಸ್ಥಿತಿ, ಪಾಠಕ್ಕೆ ಕೇವಲ 6 ಕೊಠಡಿಗಳು.
ಸರ್ಕಾರಿ ಕಾಲೇಜು ಎಂದು ಮೂಗು ಮುರಿಯುವ ಈ ವೇಳೆ ಕಳೆದ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ. 77ರಷ್ಟು ಫಲಿತಾಂಶ ಪಡೆದು, ಖಾಸಗಿ ಕಾಲೇಜುಗಳಿಗೆ ಸಡ್ಡು ಹೊಡೆದಿದೆ. ವಾಣಿಜ್ಯ ವಿಭಾಗ ಶೇ. 94, ವಿಜ್ಞಾನ ವಿಭಾಗ ಶೇ. 81.2, ಕಲಾ ವಿಭಾಗ ಶೇ. 67ರಷ್ಟು ಫಲಿತಾಂಶ ಪಡೆದು, 12 ವಿದ್ಯಾರ್ಥಿನಿಯರು ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಕಳೆದ 5 ವರ್ಷದಲ್ಲಿ ದಾಖಲಾತಿ ಸಂಖ್ಯೆ ಏರುತ್ತಲೇ ಇದೆ. ಇಂತಹ ಸರ್ಕಾರಿ ಕಾಲೇಜು ತಾಲೂಕು ಕೇಂದ್ರದಲ್ಲಿದೆ.
ಪ್ರವೇಶಕ್ಕೆ ದುಂಬಾಲು:
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಗೆ 320, ದ್ವಿತೀಯ ಪಿಯುಗೆ 245 ಸೇರಿ ಒಟ್ಟು 565 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಈ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿಗೆ ಮೂಲಭೂತ ಸೌಲಭ್ಯಗಳ ಕೊರತೆ ಮಧ್ಯೆ ಉತ್ತಮ ಫಲಿತಾಂಶ ಬಂದ ಕಾರಣ ಕೊಪ್ಪಳ, ಮುಂಡರಗಿ, ಸಂಡೂರು, ರಾಣಿಬೆನ್ನೂರು, ಶಿರಹಟ್ಟಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲೂಕುಗಳಿಂದ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ದುಂಬಾಲು ಬಿದ್ದಿದ್ದಾರೆ.
ಕಾಲೇಜಿನ ಒಂದೇ ಕೋಣೆಯಲ್ಲಿರುವ 4 ಶೌಚಾಲಯ ಸಾಲುತ್ತಿಲ್ಲ. ವಿದ್ಯಾರ್ಥಿನಿಯರು ಸರದಿ ಸಾಲಿನಲ್ಲಿ ನಿಲುತ್ತಾರೆ. ಇನ್ನು ಉಪನ್ಯಾಸಕರು, ಉಪನ್ಯಾಸಕಿಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲ.
ಕಾಲೇಜಿನಲ್ಲಿ ಪಾಠ ಕೇಳಲು ಕೇವಲ 6 ಕೋಣೆಗಳಿವೆ. ವಿಭಾಗವಾರು ಪಾಠ ಮಾಡಲು ಕೋಣೆಗಳ ಕೊರತೆ ಕಾಡುತ್ತಿದೆ. ಒಂದು ಕೋಣೆಯಲ್ಲಿ 80 ವಿದ್ಯಾರ್ಥಿನಿಯರು ಮಾತ್ರ ಕುಳಿತುಕೊಳ್ಳಲು ಸಾಮರ್ಥ್ಯವಿರುವ ಸೂರಿನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಕ್ಕಟ್ಟಾಗಿ ಕುಳಿತು ಪಾಠ ಕೇಳುವ ಸ್ಥಿತಿ ಇದೆ.
16 ಜನ ಉಪನ್ಯಾಸಕರಲ್ಲಿ 6ಜನ ಅತಿಥಿ ಉಪನ್ಯಾಸಕರಿದ್ದಾರೆ. ಪ್ರಾಚಾರ್ಯರ ಹುದ್ದೆಯೇ ಖಾಲಿ. ಕಲಾ, ವಾಣಿಜ್ಯ, ವಿಜ್ಞಾನ, ಶಿಕ್ಷಣ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳಿವೆ.
ಶಾಸಕ ಕೃಷ್ಣ ನಾಯ್ಕ ಈ ಸರ್ಕಾರಿ ಕಾಲೇಜು ಅಭಿವೃದ್ಧಿಗಾಗಿ, ವಿಶೇಷ ಕಾಳಜಿ ವಹಿಸಿ ತಮ್ಮ ಅನುದಾನದಲ್ಲಿ ಪೀಠೋಪಕರಣ, ಹವಾ ನಿಯಂತ್ರಿತ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಆಸನಗಳ ವ್ಯವಸ್ಥೆ ಮಾಡಿದ್ದಾರೆ.
ಆಟದ ಮೈದಾನ ಮಾತ್ರ ಅಭಿವೃದ್ಧಿ ಅರೆಬರೆಯಾಗಿದೆ.
ತಾಲೂಕಿನಲ್ಲೇ ಏಕೈಕ ಸರ್ಕಾರಿ ಬಾಲಕಿಯರ ಕಾಲೇಜಿಗೆ ಇನ್ನು 6 ಕೊಠಡಿ, ಹೈಟೆಕ್ ಶೌಚಾಲಯ, ಸಭಾಂಗಣ ವ್ಯವಸ್ಥೆ ಮಾಡಬೇಕಿದೆ. ಮಳೆ ಸುರಿದರೆ ಶಾಲಾ ಆವರಣದ ನೀರು ಹೊರಗೆ ಹೋಗಲು ಜಾಗವೇ ಇಲ್ಲ. ಹಾಗಾಗಿ ಆವರಣ ಕೆರೆಯಂತಾಗುತ್ತದೆ.
ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದರಿಂದ ವಿವಿಧ ತಾಲೂಕುಗಳ ವಿದ್ಯಾರ್ಥಿನಿಯರು ಪ್ರವೇಶಕ್ಕೆ ದುಂಬಾಲು ಬಿದ್ದಿದ್ದಾರೆ. ಪ್ರಥಮ, ದ್ವಿತೀಯ ಪಿಯುಸಿ ಸೇರಿ 565 ವಿದ್ಯಾರ್ಥಿನಿಯರು ಇದ್ದಾರೆ. ಕೋಣೆಗಳ ಕೊರತೆ ಹಾಗೂ ಶೌಚಾಲಯದ ಕೊರತೆ ಕಾಡುತ್ತಿದೆ. ಈ ಕುರಿತು ಶಾಸಕರ ಗಮನಕ್ಕೆ ತಂದಿದ್ದೇವೆ ಎನ್ನುತ್ತಾರೆ ಎಸ್‌ಕೆಜಿಜಿ ಕಾಲೇಜು ಪ್ರಭಾರ ಪ್ರಾಚಾರ್ಯ ಎ. ಕೊಟ್ರಗೌಡ.


