Asianet Suvarna News Asianet Suvarna News

ಬಸ್‌ ಸಿಗದೆ ಹಬ್ಬಕ್ಕೆ ಊರಿಗೆ ಹೊರಟವರು ಕಂಗಾಲು : ನಿಲ್ದಾಣಗಳಲ್ಲಿ ಫುಲ್ ಜಾಮ್

ಸಾವಿರಾರು ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಆಗಮಿಸಿದ್ದು ಬಸ್ಸುಗಳಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಯಿತು.  ಬಸ್‌ ನಿಲ್ದಾಣಗಳಲ್ಲಿ ಭಾರಿ ಕನದಟ್ಟಣೆಯಾಯಿತು. 

Buses Not Available in Bengaluru publics Suffers snr
Author
Bengaluru, First Published Apr 11, 2021, 7:16 AM IST

ಬೆಂಗಳೂರು (ಏ.11):  ಯುಗಾದಿ ಹಬ್ಬ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಶನಿವಾರ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿತು.

ಕಳೆದ ಮೂರು ದಿನಗಳಿಗಿಂತ ಶನಿವಾರ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಿತ್ತು. ದಂಪತಿ, ವಿದ್ಯಾರ್ಥಿಗಳು, ಕಾರ್ಮಿಕರು, ವೃದ್ಧರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಬಸ್‌ ನಿಲ್ದಾಣಗಳಿಗೆ ಬಂದಿದ್ದರು. ತಮಗೆ ಬೇಕಾದ ಮಾರ್ಗ, ಸ್ಥಳಗಳಿಗೆ ಖಾಸಗಿ ಬಸ್‌ಗಳು ಸಿಗದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಸಾರಿಗೆ ನಿಗಮಗಳು ಕೆಲ ಬಸ್‌ ಕಾರ್ಯಾಚರಣೆ ಮಾಡಿದ್ದರಿಂದ ಕೆಲ ಪ್ರಯಾಣಿಕರು ಈ ಬಸ್‌ಗಳಲ್ಲಿ ಊರು ಸೇರಿಕೊಂಡರು. ಕೆಲ ಪ್ರಯಾಣಿಕರು ಊರುಗಳಿಗೆ ನೇರ ಸಂಪರ್ಕ ಕಲ್ಪಿಸುವ ಬಸ್‌ಗಳು ಇಲ್ಲದ ಪರಿಣಾಮ ಸಮೀಪದ ಊರುಗಳಿಗೆ, ಸಮೀಪದ ಸ್ಥಳಗಳಿಗೆ ತೆರಳುವ ಖಾಸಗಿ ಬಸ್‌ಗಳನ್ನು ಹಿಡಿದು ಪ್ರಯಾಣಿಸಿದರು.

ಬಸ್‌ ಇಲ್ಲ, ಊರಿಗೆ ಹೋಗಲಾರದೇ ಕೊಪ್ಪಳ ಬಸ್‌ಸ್ಟ್ಯಾಂಡ್‌ನಲ್ಲಿ ವೃದ್ದೆಯರ ಪರದಾಟ ...

ಬೆಂಗಳೂರಿನ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣ, ಕೆ.ಆರ್‌.ಪುರ, ಯಶವಂತಪುರ ಬಸ್‌ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬಂದರು. ಕೆಲವರು ಖಾಸಗಿ ಬಸ್‌, ಮ್ಯಾಕ್ಸಿ ಕ್ಯಾಬ್‌ ಸಹವಾಸಕ್ಕೆ ಹೋಗದೆ ಖಾಸಗಿ ಟ್ಯಾಕ್ಸಿಗಳನ್ನು ಬಾಡಿಗೆ ಪಡೆದು ಕುಟುಂಬ ಸಮೇತ ಊರುಗಳತ್ತ ಪ್ರಯಾಣ ಬೆಳೆಸಿದರು. ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರ ದುಬಾರಿ ಎಂಬ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದ ಕೆಲ ಕಾರ್ಮಿಕರು ನಗರದ ಹೊರವಲಯ ನೆಲಮಂಗಲದ ಟೋಲ್‌ ಕೇಂದ್ರದ ಬಳಿ ಸರಕು ಸಾಗಣೆ ವಾಹನಗಳನ್ನು ಹಿಡಿದು ಊರುಗಳತ್ತ ತೆರಳಿದರು. ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಪ್ರಯಾಣ ಮುಂದೂಡಿದ್ದವರು ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಅನಿವಾರ್ಯತೆ ಎದುರಾದ್ದರಿಂದ ತ್ರಾಸಪಟ್ಟು ಪ್ರಯಾಣಿಸಬೇಕಾಯಿತು.

Follow Us:
Download App:
  • android
  • ios