Asianet Suvarna News Asianet Suvarna News

Bengaluru: ರಾತ್ರೋ ರಾತ್ರಿ ನಾಪತ್ತೆಯಾದ ಬಸ್‌ ನಿಲ್ದಾಣ: ಪೊಲೀಸ್‌ ಠಾಣೆಗೆ ದೂರು..!

4ನೇ ಎ ಕ್ರಾಸ್, 7ನೇ ಮೇನ್, 1ನೇ ಬ್ಲಾಕ್, ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ 1990 ರಿಂದಲೂ ಹಿರಿಯ ನಾಗರಿಕರು ಬಳಸುತ್ತಿದ್ದ ಬಸ್ ತಂಗುದಾಣ ಈಗ ರಾತ್ರೋರಾತ್ರಿ ಕಣ್ಮರೆಯಾಗಿದೆ. ವಾಣಿಜ್ಯ ಕಟ್ಟಡವೊಂದು ಬರುತ್ತಿರುವ ಹಿನ್ನೆಲೆ ಅವರೇ ಬಸ್ ನಿಲ್ದಾಣವನ್ನು ತೆಗೆದಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

bus shelter in bengaluru disappears overnight residents blame bbmp building owners ash
Author
First Published Mar 22, 2023, 6:28 PM IST

ಬೆಂಗಳೂರು (ಮಾರ್ಚ್‌ 22, 2023): ಬೆಂಗಳೂರಿನಲ್ಲಿ ರಾತ್ರೋರಾತ್ರಿ ಬಸ್ ನಿಲ್ದಾಣವೊಂದು ನಾಪತ್ತೆಯಾಗಿದೆ. ಕಲ್ಯಾಣ್‌ ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ 1990 ರಿಂದ ಅಸ್ತಿತ್ವದಲ್ಲಿದ್ದ ಬಸ್ ಶೆಲ್ಟರ್ ಮಾರ್ಚ್ 10 ರಂದು ಬೆಳಗ್ಗೆ ಕಣ್ಮರೆಯಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಬೆಂಗಳೂರಿನ ಬಸ್ ನಿಲ್ದಾಣಗಳಿಗೆ ಸಾಮಾನ್ಯವಾಗಿ ಸರಿಯಾದ ನಿರ್ವಹಣೆಯೇ ಇರಲ್ಲ. ಇವುಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವುದರಿಂದ ಈ ಸೌಲಭ್ಯಗಳು ರಸ್ತೆ ಸಾರಿಗೆ ನಿಗಮಗಳ ಮಾಲೀಕತ್ವದ ಕೊರತೆಯಿಂದ ಬಳಲುತ್ತಿವೆ. ಆದರೀಗ, ಬಸ್ ನಿಲ್ದಾಣಗಳೇ ಸಂಪೂರ್ಣವಾಗಿ ಕಣ್ಮರೆಯಾಗುತ್ತಿವೆ.

4ನೇ ಎ ಕ್ರಾಸ್, 7ನೇ ಮೇನ್, 1ನೇ ಬ್ಲಾಕ್, ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ 1990 ರಿಂದಲೂ ಹಿರಿಯ ನಾಗರಿಕರು ಬಳಸುತ್ತಿದ್ದ ಬಸ್ ತಂಗುದಾಣ ಈಗ ರಾತ್ರೋರಾತ್ರಿ ಕಣ್ಮರೆಯಾಗಿದೆ. ವಾಣಿಜ್ಯ ಕಟ್ಟಡವೊಂದು ಬರುತ್ತಿರುವ ಹಿನ್ನೆಲೆ ಅವರೇ ಬಸ್ ನಿಲ್ದಾಣವನ್ನು ತೆಗೆದಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಕಲ್ಯಾಣ ನಗರದಲ್ಲಿ ಲೇಔಟ್ ರಚನೆಯಾದಾಗ ಲಯನ್ಸ್ ಕ್ಲಬ್ ಕೊಡುಗೆಯಾಗಿ ಬಸ್ ನಿಲ್ದಾಣವನ್ನು ನೀಡಿತ್ತು. ಈ ಶೆಲ್ಟರ್ ಅನ್ನು ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಬಸ್‌ಗಾಗಿ ಕಾಯಲು ಬಳಸುತ್ತಿದ್ದರು. ಹೊಸ ವಾಣಿಜ್ಯ ಕಟ್ಟಡಕ್ಕೆ ದಾರಿ ಮಾಡಿಕೊಡಲು ಮಾರ್ಚ್ 9 ರಂದು ಬಸ್ ತಂಗುದಾಣವನ್ನು ತೆಗೆದುಹಾಕಲಾಗಿದೆ ಎಂದು ಪ್ರದೇಶದ ನಿವಾಸಿ ಕ್ರಿಸ್ಟೋಫರ್ ಕ್ರೂಜ್ ಹೇಳಿದ್ದಾರೆ.

ಇದನ್ನು ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ: ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..!

1990 ರಲ್ಲಿ, ಇಬ್ಬರು ಸ್ನೇಹಿತರು ಬಸ್ ನಿಲ್ದಾಣವನ್ನು ನಿರ್ಮಿಸಲು ಅಗತ್ಯವಾದ ಹಣವನ್ನು ದೇಣಿಗೆ ನೀಡಿದ್ದರು. ಕಳೆದ 33 ವರ್ಷಗಳಿಂದ ಇಲ್ಲಿನ ಜನರು ಬಿಸಿಲು, ಮಳೆಗೆ ಬಸ್‌ ನಿಲ್ದಾಣದ ಆಶ್ರಯ ಪಡೆದಿದ್ದರು. ಆದರೆ, ಯಾರೋ ರಾತ್ರೋರಾತ್ರಿ ಬಸ್ ನಿಲ್ದಾಣವನ್ನು ನಾಶ ಮಾಡಿದ್ದಾರೆ. ಈ ವಿಚಾರವಾಗಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ; ಘಟನೆಯ ಬಗ್ಗೆ ಹೊಯ್ಸಳ ಪೊಲೀಸರು ಸಹ ವಿಚಾರಿಸಿದ್ದಾರೆ ಎಂದು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ಮಹೇಶ್ವರಪ್ಪ ತಿಳಿಸಿದರು.

ನಗರದಲ್ಲಿ ಸುಮಾರು 3,000 ಬಸ್ ಶೆಲ್ಟರ್‌ಗಳಿವೆ. ಕೆಲವೊಮ್ಮೆ, ಮೆಟ್ರೋ ಕೆಲಸ ಅಥವಾ ಯಾವುದೇ ಇತರ ಸಿವಿಲ್ ಕೆಲಸಕ್ಕೆ ಬಸ್‌ ಶೆಲ್ಟರ್‌ ಸ್ಥಳಾಂತರ ಮಾಡಲಾಗುತ್ತದೆ. ಈ ಹಿನ್ನೆಲೆ ಸ್ಥಳ ಪರಿಶೀಲನೆಯ ನಂತರ ಬಿಬಿಎಂಪಿ ಸ್ಥಳಾಂತರಕ್ಕೆ ಆದೇಶ ನೀಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ನಮಗೆ ಸಾಧ್ಯವಾಗುತ್ತದೆ ಎಂದು ನಾಗರಿಕ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು, ಉತ್ತಮ ಸಾರ್ವಜನಿಕ ಸಾರಿಗೆ ಮೂಲಸೌಕರ್ಯಕ್ಕೆ ಆಗ್ರಹಿಸುವ ಜನರು ಬಸ್ ನಿಲ್ದಾಣಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರಿ ಭದ್ರತಾ ಲೋಪ: ಮಾನವ ದೋಷ ಎಂದು ಸಮರ್ಥಿಸಿಕೊಂಡ ಅಧಿಕಾರಿಗಳು

ನಗರದಲ್ಲಿ ಬಸ್ ನಿಲ್ದಾಣಗಳ ಮಾಲೀಕತ್ವದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಬಿಬಿಎಂಪಿ ಬಸ್ ನಿಲ್ದಾಣಗಳ ಮಾಲೀಕತ್ವ ಹೊಂದಿದೆ, ಬಸ್‌ಗಳಲ್ಲ. ಅಂತಹ ಸಂದರ್ಭಗಳಲ್ಲಿ ಕಾಣೆಯಾದ ಬಸ್ ನಿಲ್ದಾಣಗಳ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಬಿಬಿಎಂಪಿ ಅನ್ನು ಪ್ರಶ್ನಿಸಬೇಕಾಗಿದೆ. ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲು ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿದಾಗ, ಮೆಟ್ರೋ ನಿಲ್ದಾಣಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಬಸ್ ನಿಲ್ದಾಣಗಳಿಗೆ ನೀಡಬೇಕು ಎಂದು ನಾವು ಗೌರವಾನ್ವಿತ ಅಧಿಕಾರಿಗಳನ್ನು ವಿನಂತಿಸುತ್ತೇವೆ ಎಂದು ವಿಶ್ವ ಸಂಪನ್ಮೂಲ ಸಂಸ್ಥೆ ಸಹವರ್ತಿ ಶ್ರೀನಿವಾಸ ಅಲ್ಲಾವಿಲಿ ಹೇಳಿದರು.

ಇದನ್ನೂ ಓದಿ: ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರ: ಇನ್ನೂ 5 ದಿನ ಮಳೆ..!

Follow Us:
Download App:
  • android
  • ios