ಬೆಳಗಾವಿಯಿಂದ 400 ಬಸ್‌, ಮಹಾರಾಷ್ಟ್ರದಿಂದ 58 ಬಸ್‌ ಸಂಚಾರಕ್ಕೆ ತಡೆ| ಕೊಲ್ಲಾಪುರದಲ್ಲಿ ಶಿವಸೇನೆ ಪಂಡಾಟಿಕೆ ಮತ್ತೆ ಆರಂಭ| ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳ ಕನ್ನಡ ಬೋರ್ಡ್‌ಗಳಿಗೆ ಕಪ್ಪು ಮಸಿ ಬಳಿದ ಶಿವಸೇನೆ| ಶಿವಸೇನೆ ಬ್ಯಾನ್‌ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ| 

ಬೆಳಗಾವಿ(ಮಾ.14): ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಕಪ್ಪು ಮಸಿ ಬಳಿದಿದ್ದ ಶಿವಸೇನೆ ಕಿಡಿಗೇಡಿಗಳು ಕೊಲ್ಲಾಪುರದಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗಳ ಮೇಲೆ ಕಲ್ಲು ತೂರಿದ್ದಾರೆ. ಇದರಿಂದಾಗಿ ಬೆಳಗಾವಿ- ಮಹಾರಾಷ್ಟ್ರ ನಡುವಿನ ಬಸ್‌ ಸಂಚಾರ ಶನಿವಾರ ಸ್ಥಗಿತಗೊಂಡಿದೆ. ಆದರೆ, ವಿಜಯಪುರ ಜಿಲ್ಲೆಯಿಂದ ನಿರಾತಂಕವಾಗಿ ಮಹಾರಾಷ್ಟ್ರದ ಗಡಿ ಭಾಗಗಳಿಗೆ ಬಸ್ಸುಗಳು ಸಂಚಾರ ನಡೆಸಿವೆ.

ಕರ್ನಾಟಕದಿಂದ ಬೆಳಗಾವಿ ಮಾರ್ಗವಾಗಿ ನಿತ್ಯ ಮಹಾರಾಷ್ಟ್ರಕ್ಕೆ ಸುಮಾರು 400 ಬಸ್‌ಗಳು ಸಂಚರಿಸಿದರೆ, ಮಹಾರಾಷ್ಟ್ರದಿಂದ ಬೆಳಗಾವಿಗೆ 58 ಬಸ್‌ಗಳು ಬರುತ್ತಿದ್ದವು. ಆದರೆ, ಮುಂಜಾಗ್ರತಾ ಕ್ರಮವಾಗಿ ಉಭಯ ರಾಜ್ಯಗಳ ಸಾರಿಗೆ ಸಂಸ್ಥೆಯ ಕೊಲ್ಲಾಪುರ ಮತ್ತು ಬೆಳಗಾವಿನ ನಡುವಿನ ಬಸ್‌ ಸೇವೆಯನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಪ್ರಯಾಸ ಪಡಬೇಕಾಯಿತು. ಭಾನುವಾರ ಕೊಲ್ಲಾಪುರದಲ್ಲಿನ ಪರಿಸ್ಥಿತಿ ಕಂಡು ಬಸ್‌ ಸಂಚಾರದ ನಡೆಸುವ ಕುರಿತು ಬೆಳಗಾವಿ ಸಾರಿಗೆ ಇಲಾಖೆ ಅಧಿಕಾರಿಗಳು ತೀರ್ಮಾನಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗಾವಿಯಲ್ಲಿ ಶಿವಸೇನೆ ಏಟಿಗೆ ಕನ್ನಡಿಗರು ಎದುರೇಟು..!

ಶಿವಸೇನೆ ಬ್ಯಾನ್‌ ಮಾಡಿ:

ಕೊಲ್ಹಾಪುರದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳ ಕನ್ನಡ ಬೋರ್ಡ್‌ಗಳಿಗೆ ಕಪ್ಪು ಮಸಿ ಬಳಿದಿರುವ ಶಿವಸೇನೆ ಪುಂಡರ ಕೃತ್ಯ ಖಂಡಿಸಿ ಶಿವಸೇನೆ ಬ್ಯಾನ್‌ ಮಾಡುವಂತೆ ಆಗ್ರಹಿಸಿ ಶನಿವಾರ ನಗರದ ಚನ್ನಮ್ಮ ವೃತ್ತದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮರಾಠಿ ಫಲಕ ಅಳವಡಿಕೆಗೆ ಅವಕಾಶ ನೀಡಿ:

ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ಮರಾಠಿ ಫಲಕ ಅಳವಡಿಸಲು ಅವಕಾಶ ನೀಡುವಂತೆ ನಗರ ಪೊಲೀಸ್‌ ಆಯುಕ್ತರ ಡಾ.ತ್ಯಾಗರಾಜನ್‌ಗೆ ಮನವಿ ಸಲ್ಲಿಸಿವೆ. ಆದರೆ, ಫಲಕದ ಅಳವಡಿಕೆ ವಿಚಾರ ಪಾಲಿಕೆ ವ್ಯಾಪ್ತಿಗೆ ಬರುತ್ತದೆ ಎಂಬ ಪೊಲೀಸ್‌ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.