ಕುಡುಕನಿಗೆ ₹10 ಲಕ್ಷ ಸಿಕ್ಕ ಕೇಸ್: ಹತ್ತಲ್ಲ, ಮೂರೂವರೆ ಲಕ್ಷ ಎಂದ ಕಮಿಷನರ್
ಕುಡುಕನಿಗೆ ರಸ್ತೆಯಲ್ಲಿ 10 ಲಕ್ಷ ರೂಪಾಯಿ ಸಿಕ್ಕಿದ ಎನ್ನಲಾದ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ಹತ್ತು ಲಕ್ಷ ಅಲ್ಲ, ಮೂರುವರೆ ಲಕ್ಷ ಎಂದು ಮಾಹಿತಿ ನೀಡಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಡಿ.7): ಕುಡುಕನಿಗೆ ರಸ್ತೆಯಲ್ಲಿ 10 ಲಕ್ಷ ರೂಪಾಯಿ ಸಿಕ್ಕಿದ ಎನ್ನಲಾದ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ಹತ್ತು ಲಕ್ಷ ಅಲ್ಲ, ಮೂರುವರೆ ಲಕ್ಷ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಹಣ ಕಳೆದುಕೊಂಡವರಿದ್ದರೆ ತಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ. ಈ ಬಗ್ಗೆ ಮಾತನಾಡಿದ ಕಮಿಷನರ್ ಶಶಿಕುಮಾರ್, ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪ್ವೆಲ್ ನಲ್ಲಿ ಘಟನೆ ನಡೆದಿದೆ. ಹಣ ಸಿಕ್ಕಿದ ಶಿವರಾಜ್ ಗಾಡಿ ಕ್ಲೀನ್, ಮೆಕಾನಿಕ್ ಕೆಲಸ ಮಾಡಿಕೊಂಡಿದ್ದರು. ಕುಡಿದು ಮಲಗೋದು ಆತನ ದಿನ ನಿತ್ಯದ ಕೆಲಸವಾಗಿದೆ. ನ.26 ರಂದು ಬಾಕ್ಸ್ ಮತ್ತು ಕವರ್ ನಲ್ಲಿ ಶಿವರಾಜ್ ಗೆ ಹಣ ಸಿಕ್ಕಿದೆ. ಸ್ಪಷ್ಟವಾಗಿ ಅದರಲ್ಲಿ ಎಷ್ಟು ಹಣ ಇತ್ತು ಅಂತ ಅತನಿಗೆ ಗೊತ್ತಿಲ್ಲ. ಹಣ ಸಿಕ್ಕಿದ ಸಂದರ್ಭದಲ್ಲಿ ಶಿವರಾಜ್, ತುಕರಾಮ್ ಎಂಬುವವರಿಗೆ 50 ಸಾವಿರ ಆರು ಕಟ್ಟು ಹಣ ನೀಡಿದ್ದಾನೆ. ಅಂದರೆ ತುಕರಾಮ್ ಗೆ ಮೂರು ಲಕ್ಷ ರೂಪಾಯಿ ನೀಡಿದ್ದಾನೆ. ಆ ಹಣದಲ್ಲಿ ತುಕರಾಮ್ 500 ರೂಪಾಯಿ ಮಾತ್ರ ಉಪಯೋಗಿಸಿದ್ದಾನೆ. ಮಾಧ್ಯಮಗಳಲ್ಲಿ ಹಣ ಸಿಕ್ಕಿದ ವಿಚಾರ ಗೊತ್ತಾಗಿ ತುಕರಾಮ್ ಆ ಹಣವನ್ನು ಮತ್ತೆ ಠಾಣೆಗೆ ನೀಡಿದ್ದಾರೆ ಎಂದು ತಿಳಿಸಿದರು.
ತುಕರಾಮ್ ಮತ್ತು ಆತನ ಮನೆಯವರು 2 ಲಕ್ಷದ 99 ಸಾವಿರದ 500 ರೂಪಾಯಿ ನೀಡಿದ್ದಾರೆ. ಶಿವರಾಜ್ ನೀಡಿದ ಹಣದಲ್ಲಿ 500 ರೂಪಾಯಿಯನ್ನು ತುಕರಾಮ್ ಖರ್ಚು ಮಾಡಿದ್ದಾರೆ. ಪೊಲೀಸರು ಆ ದಿನ ಶಿವರಾಜ್ ನನ್ನು ಪರಿಶೀಲನೆ ಮಾಡಿದಾಗ 49,500 ರೂಪಾಯಿ ಹಣ ಸಿಕ್ಕಿದೆ. ಸದ್ಯ ಮೂರೂವರೆ ಲಕ್ಷ ರೂಪಾಯಿ ಹಣವನ್ನು ಸುಪರ್ದಿಗೆ ಪಡೆದಿದ್ದೇವೆ. ಘಟನಾ ಸ್ಥಳದ ಸಿಸಿ ಟಿವಿ ಫೂಟೇಜ್ ನ್ನು ಪರಿಶೀಲನೆ ಮಾಡುತ್ತಿದ್ದೇವೆ. ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ಬಂದು ತಮ್ಮದೇ ಹಣ ಅಂತಾ ಸಾಬೀತು ಮಾಡಬೇಕು. ಶಿವರಾಜ್ ನಿಂದ ಹಣ ಎತ್ತಿಕೊಂಡು ಹೋದವರು ಇದ್ದಲ್ಲಿ ಠಾಣೆಗೆ ಬಂದು ಹಣ ಕೊಡಬೇಕು. ಶಿವರಾಜ್ ಮತ್ತು ತುಕರಾಮ್ ಮೇಲೆ ಪ್ರಕರಣ ದಾಖಲಾಗೋದಿಲ್ಲ. ಯಾರಾದರೂ ಕೊಂಡು ಹೋಗಿ ಮತ್ತೆ ಕೊಡದಿದ್ದರೂ ಪ್ರಕರಣ ದಾಖಲು ಮಾಡುತ್ತೇವೆ. ಪೊಲೀಸರು ಆ ದಿನ ಡೈರಿ ಎಂಟ್ರಿ ಮಾಡಿಕೊಂಡಿದ್ದಾರೆ ಅಷ್ಟೇ. ವಾರಸುದಾರರು ಬಂದ ಸಂದರ್ಭದಲ್ಲಿ ಹಿಂದಿರುಗಿಸಬಹುದು. ಯಾರಾದರೂ ಬಂದ್ರೆ ಅಲ್ಲೇ ಕೊಡೋಣ ಅಂತಾ ಪೊಲೀಸರು ಠಾಣೆಯಲ್ಲಿ ಹಣ ಇಟ್ಟಿದ್ದಾರೆ.
Mangaluru Moral Policing; ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ, ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಥಳಿತ
ಹೀಗಾಗಿ ಹಣ ಕಳೆದುಕೊಂಡವರು ಇದ್ದರೆ ಮುಂದೆ ಬನ್ನಿ. ಪೊಲೀಸರು ತಡವಾಗಿ ಪ್ರಕರಣ ದಾಖಲು ಮಾಡಿದ ಬಗ್ಗೆ ವರದಿ ತರಿಸುತ್ತೇನೆ. ಈ ವಿಚಾರದಲ್ಲಿ 75KP ಆಕ್ಟ್ ನಡಿ ವಾರಸುದಾರರಿಲ್ಲದ ಹಣದ ಪ್ರಕರಣ ಮಾಡಿದ್ದೇವೆ ಎಂದು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಕುಡುಕನಿಗೆ ಲಕ್ಷ ಲಕ್ಷ ಸಿಕ್ಕಿದ್ದು ಹೇಗೆ?
ಮಂಗಳೂರಿನ ಪಂಪ್ವೆಲ್ ಬಳಿ ಕುಡುಕನಿಗೆ ರಸ್ತೆ ಬದಿ 10 ಲಕ್ಷ ರೂಪಾಯಿ ಹಣ ಸಿಕ್ಕಿದೆ ಎಂಬ ಸುದ್ದಿ ಹರಿದಾಡಿತ್ತು. ನ.26ರಂದು ಪಂಪ್ವೆಲ್ ಬಳಿ ಶಿವರಾಜ್ ಎಂಬುವವರಿಗೆ ಹತ್ತು ಲಕ್ಷ ರೂಪಾಯಿಯ ನೋಟಿನ ಕಟ್ಟು ಸಿಕ್ಕಿದ್ದು, ಐನೂರು ಮತ್ತು ಎರಡು ಸಾವಿರ ಮುಖಬೆಲೆಯ ಹತ್ತು ಲಕ್ಷ ರೂಪಾಯಿ ಇತ್ತು ಎನ್ನಲಾಗಿತ್ತು. ಆದರೆ ಅತಿಯಾದ ಮದ್ಯಸೇವನೆಯ ಚಟ ಹೊಂದಿದ್ದ ಶಿವರಾಜ್, ಅದೇ ನೋಟಿನ ಕಟ್ಟಿನಲ್ಲಿ ಒಂದು ಸಾವಿರ ರೂಪಾಯಿ ಬಳಸಿ ಮತ್ತೆ ಕುಡಿದಿದ್ದ. ಕುಡಿದ ಬಳಿಕ ಬಾರ್ ಮುಂಭಾಗ ಬಿದ್ದಿದ್ದ. ಅಲ್ಲದೇ ಜೊತೆಗಿದ್ದ ತುಕಾರಾಮ್ ಎಂಬಾತನಿಗೂ ನೋಟಿನ ಕಟ್ಟು ನೀಡಿದ್ದ. ಆದರೆ ಈ ವಿಚಾರ ಸ್ಥಳೀಯರ ಮೂಲಕ ತಿಳಿದು ಸ್ಥಳಕ್ಕೆ ಆಗಮಿಸಿದ ಕಂಕನಾಡಿ ಪೊಲೀಸರು ಹಣದ ಜೊತೆ ಶಿವರಾಜರನ್ನ ಠಾಣೆಗೆ ಕರೆದುಕೊಂಡು ಹೋಗಿದ್ದರು. ಮೂರು ದಿನದ ಬಳಿಕ ಠಾಣೆಯಿಂದ ಶಿವರಾಜ್ ನನ್ನು ಬಿಟ್ಟ ಪೊಲೀಸರು, ಘಟನೆ ನಡೆದು ವಾರ ಕಳೆದರೂ ಹಣದ ಬಗ್ಗೆ ಪ್ರಕರಣ ದಾಖಲಿಸಿರಲಿಲ್ಲ. ಅಲ್ಲದೇ ಈವರೆಗೆ ಹಣದ ವಾರಸುದಾರರೂ ಪೊಲೀಸ್ ದೂರು ನೀಡಿಲ್ಲ.
Mangaluru: ಭದ್ರತೆ ಲೋಪಕ್ಕಾಗಿ ಜಾಗತಿಕವಾಗಿ ನಿಷೇಧಿಸ್ಪಟ್ಟ ಚೀನಾ ಕಂಪನಿ ಸಿಸಿ ಕ್ಯಾಮರಾ ಮಂಗಳೂರಲ್ಲಿ ಅಳವಡಿಕೆ
ಹೀಗಾಗಿ ವಿಚಾರ ಬಹಿರಂಗವಾಗಿ ಹತ್ತು ಲಕ್ಷ ಎಂಬ ಸುದ್ದಿ ಮಂಗಳೂರಿನಾದ್ಯಂತ ಹಬ್ಬಿತ್ತು. ಇದೀಗ ವಿಚಾರ ಹಬ್ಬುತ್ತಲೇ ಪೊಲೀಸರ ಮೇಲೆ ಹತ್ತು ಲಕ್ಷ ಗುಳುಂ ಮಾಡಿದ ಅನುಮಾನ ಎದ್ದಿದೆ. ಆದರೆ ಪೊಲೀಸರ ವಿರುದ್ಧ ಆರೋಪದ ಬೆನ್ನಲ್ಲೇ ಮಾಹಿತಿ ಪಡೆದ ಮಂಗಳೂರು ಕಮಿಷನರ್ ಶಶಿಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹತ್ತಲ್ಲ ಮೂರೂವರೆ ಲಕ್ಷ ಅಂತ ಸ್ಪಷ್ಟಪಡಿಸಿದ್ದಾರೆ.