ರಾಣಿಬೆನ್ನೂರು(ಫೆ.09):  ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ರಾಣಿಬೆನ್ನೂರು ಹುಲಿ ಎಂದು ಹೆಸರು ಗಳಿಸಿದ್ದ ನಗರದ ಕೊಬ್ಬರಿ ಹೋರಿಯೊಂದು ಸೋಮವಾರ ಅನಾರೋಗ್ಯ ಹಿನ್ನಲೆಯಲ್ಲಿ ಮೃತಪಟ್ಟಿದ್ದರಿಂದ ಸ್ಥಳೀಯ ಜನರು ಕಂಬನಿ ಮಿಡಿದಿದ್ದಾರೆ. 

ನಗರದ ಕುರುಬಗೇರಿಯ ನಿವಾಸಿ ದೇವಮರಿಯಪ್ಪ ಗುದಿಗೇರ ಎಂಬುವವರಿಗೆ ಸೇರಿದ ಹೋರಿಯು ರಾಜ್ಯ ಸೇರಿದಂತೆ ಹೊರ ರಾಜ್ಯದಲ್ಲಿ ಕೂಡ ಹೆಸರು ಮಾಡಿತ್ತು. ಈ ಹೋರಿ ಸುಮಾರು 17ವರ್ಷದಿಂದ ವಿವಿಧ ಕಡೆ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿತ್ತು. ಈ ಹೋರಿ ನೋಡುವ ಸಲುವಾಗಿ ಹೋರಿ ಸ್ಪರ್ಧೆಗೆ ಜನರು ಬರುತ್ತಿದ್ದರು.

ರಾಣಿಬೆನ್ನೂರು ಹುಲಿ ಹೋರಿ ವಿವಿಧ ಕಡೆ ನಡೆದ ಸ್ಪರ್ಧೆಗಳಲ್ಲಿ 17 ಬೈಕ್‌, 25 ತೊಲೆ ಬಂಗಾರ, ಎರಡು ಎತ್ತಿನ ಬಂಡಿ, 10 ಫ್ರಿಜ್‌, 25 ಗಾಡ್ರೇಜ್‌, 10 ಟಿವಿ, ಒಂದು ಕೆಜಿ ಬೆಳ್ಳಿಯನ್ನು ಬಹುಮಾನವಾಗಿ ಪಡೆದಿತ್ತು. ಈ ಹೋರಿ ದೇವಮರಿಯಪ್ಪ ತಮಿಳುನಾಡಿನಿಂದ ಹತ್ತು ವರ್ಷದ ಹಿಂದೆ 62 ಸಾವಿರಕ್ಕೆ ತೆಗೆದುಕೊಂಡು ಬಂದಿದ್ದರು. ಇದರ ವಿಶೇಷತೆ ನೋಡಿ ತಮಿಳುನಾಡಿನವರೇ 1.5 ಕೋಟಿ ಹಾಗೂ ಐದು ಎಕರೆ ಜಮೀನು ನೀಡುತ್ತೇವೆ ಎಂದು ಜನರು ಮುಂದೆ ಬಂದಿದ್ದರು.

ಇಳಿ​ವ​ಯ​ಸ್ಸಲ್ಲಿ ನೋಡಿಕೊಳ್ಳದ ಮಕ್ಕಳಿಂದ ಆಸ್ತಿ ಹಿಂಪಡೆದ ತಂದೆ-ತಾಯಿ..!

ಸಾಮಾಜಿಕ ಜಾಣದಲ್ಲಿ ಪ್ರಸಿದ್ಧಿ:

ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದ್ದ ರಾಣಿಬೆನ್ನೂರು ಹುಲಿ ಹೋರಿಗೆ ಸಾಮಾಜಿಕ ತಾಣಗಳಲ್ಲಿ ಇದರ ಕುರಿತು ವಿಶೇಷ ಹಾಡುಗಳನ್ನು ಸೃಷ್ಟಿಸುವ ಜತೆಗೆ ಅನೇಕ ಅಭಿಮಾನಿಗಳನ್ನು ಹೊಂದಿತ್ತು. ಜಿಲ್ಲೆಯ ಸುತ್ತಮುತ್ತಲಿನ ಜನರು ತಮ್ಮ ಖಾತೆಗಳಲ್ಲಿ ಇದರ ವಿಡೀಯೋ ಹಾಕುವ ಮೂಲಕ ಕಂಬನಿ ಮಿಡಿಯುತ್ತಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಹೋರಿ ಮಾಲೀಕ ದೇವಮರಿಯಪ್ಪ ಮಾತನಾಡಿ, ಮನೆ ಮಗನಂತೆ ಹೋರಿಯನ್ನು ನೋಡಿಕೊಂಡಿದ್ದೇವೆ. ಕೊಬ್ಬರಿ ಹೋರಿಯಲ್ಲಿ ಶೆಡ್ಡು ಹೊಡೆದು ಹಬ್ಬ ಮಾಡುತ್ತಿತ್ತು. ಇದು ಯಾರ ಕೈಗೂ ಸಿಕ್ಕಿರಲಿಲ್ಲ. ಇತ್ತೀಚಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ಮೃತಪಟ್ಟಿದೆ ಎಂದರು.

ಗಣ್ಯರ ಸಂತಾಪ:

ಶಾಸಕ ಅರುಣಕುಮಾರ ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಸೇರಿದಂತೆ ಸೇರಿ ಹಲವು ಗಣ್ಯರು ಹೋರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.