Karnataka Bhavan: ಶ್ರೀಶೈಲದಲ್ಲಿ ಕರ್ನಾಟಕ ಭವನ,  ಕುರಿ, ಮೇಕೆ ಸಾವಿಗೆ ಅಧಿಕ ಪರಿಹಾರ

* ಕುರಿ ಸಾವಿಗೆ ಹೆಚ್ಚು ಪರಿಹಾರ
* ಸಚಿವ ಪ್ರಭು ಚವ್ಹಾಣ್‌ ಭರವಸೆ
* ಶ್ರೀಶೈಲದಲ್ಲಿ ಕರ್ನಾಟಕ  ಭವನ ನಿರ್ಮಾಣ: ಜೊಲ್ಲೆ

Build Karnataka Bhavan in Srisailam says Minister Shashikala Jolle mah

ಬೆಂಗಳೂರು(ಫೆ. 22)   ಅನ್ಯ ಕಾರಣಗಳಿಂದಾಗಿ ಕುರಿ, ಮೇಕೆಗಳು ಸಾವನ್ನಪಿದಾಗ ಸಾಕಾಣಿಕೆದಾರರಿಗೆ ನೀಡುತ್ತಿರುವ ಪರಿಹಾರವನ್ನು ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavarj Bommai) ಅವರಿಗೆ ಮನವಿ ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ (Prabhu Chauhan) ಹೇಳಿದ್ದಾರೆ. ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ (JDS) ಸದಸ್ಯ ಬಂಡೆಪ್ಪ ಕಾಶೆಂಪೂರ ಪ್ರಶ್ನೆಗೆ ಉತ್ತರಿಸಿದ ಅವರು, ಕುರಿ, ಮೇಕೆಗಳು ಮೃತಪಟ್ಟಾಗ ಪ್ರಸ್ತುತ ಸಾಕಾಣಿಕೆದಾರರಿಗೆ ನೀಡುತ್ತಿರುವ ಪರಿಹಾರ ಮೊತ್ತವು ಸಾಕಾಗುವುದಿಲ್ಲ ಎಂಬುದು ಸದಸ್ಯರ ಒತ್ತಾಯವಾಗಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು. ಅಲ್ಲದೇ, ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಶೆಂಪೂರ, ಸದ್ಯಕ್ಕೆ ಮರಿ ಕುರಿ, ಮೇಕೆಗಳು ಸಾವನ್ನಪ್ಪಿದರೆ ಎರಡೂವರೆ ಸಾವಿರ ರು., ದೊಡ್ಡ ಕುರಿ, ಮೇಕೆ ಸಾವನ್ನಪ್ಪಿದರೆ ಐದು ಸಾವಿರ ರು. ಪರಿಹಾರವನ್ನು ಸಾಕಾಣಿಕೆದಾರರಿಗೆ ನೀಡಲಾಗುತ್ತಿದೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ಪರಿಹಾರ ಮೊತ್ತವನ್ನು 10 ಸಾವಿರ ರು.ಗೆ ಹೆಚ್ಚಿಸಬೇಕು. ಅಲ್ಲದೇ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಕುರಿ, ಮೇಕೆ ಸಾಕಾಣಿಕೆಗೆ ಒದಗಿಸುತ್ತಿರುವ ಸಹಾಯಧನದ ಮೊತ್ತವನ್ನು 75 ಸಾವಿರ ರು.ಗೆ ಹೆಚ್ಚಿಸಬೇಕು. ಗಡಿಭಾಗದಲ್ಲಿನ ತೆಲಂಗಾಣದಲ್ಲಿ ಕುರಿ, ಮೇಕೆ ಸಾಕಾಣಿಗೆ ಶೇ.90ರಷ್ಟುಸಬ್ಸಿಡಿ ನಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಗಮನಹರಿಸಬೇಕು ಎಂದರು.

ಶ್ರೀಶೈಲದಲ್ಲಿ ಕರ್ನಾಟಕ  ಭವನ ನಿರ್ಮಾಣ:  ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ರಾಜ್ಯದ ಭಕ್ತರಿಗೆ ಅನುಕೂಲವಾಗಲು ಅಲ್ಲಿರುವ ‘ಕರ್ನಾಟಕ ಭವನ’ ನಿವೇಶನದಲ್ಲಿ ಅಂಗಡಿ ಮತ್ತು ವಸತಿ ಗೃಹ ಇರುವ ಹೊಸ ಕಟ್ಟಡವನ್ನು ನಿರ್ಮಿಸಲಾಗುವುದು. ಈ ಬಗ್ಗೆ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯಿಂದ ತಯಾರಿಸಲಾಗುತ್ತಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಬಿಜೆಪಿ ಬಸವರಾಜ ಮತ್ತಿಮುಡ ಪರವಾಗಿ ಪಿ.ರಾಜೀವ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಈಗಾಗಲೇ ಇರುವ ಭವನಗಳ ನವೀಕರಣಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗುವುದು. ಶ್ರೀಶೈಲಂನ ಶ್ರೀಭ್ರಮರಾಂಭ ಸ್ವಾಮಿ ದೇವಾಲಯದ ಬಳಿ 300*300 ಅಡಿ ಜಾಗದಲ್ಲಿ ಛತ್ರವನ್ನು ನಿರ್ಮಿಸಲಾಗಿದೆ. ನೆಲಮಹಡಿ ಮತ್ತು ಒಂದನೇ ಮಹಡಿಯಲ್ಲಿ 16 ಕೊಠಡಿಗಳು, ಮತ್ತೊಂದು ಕಟ್ಟಡದಲ್ಲಿ 8 ಕೊಠಡಿಗಳು ಮತ್ತು ಭೋಜನ ಶಾಲೆ ಇದೆ. ಕರ್ನಾಟಕ ಭವನ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ದುರಸ್ತಿ ಕಾಮಗಾರಿಗಳನ್ನು ಅವಶ್ಯಕತೆಗನುಗುಣವಾಗಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದಿಂದ ತೆರಳುವ ಭಕ್ತರಿಗೆ ಊಟ, ವಸತಿ ಮತ್ತು ವಾಸ್ತವ್ಯಕ್ಕೆ ತೊಂದರೆಯಾಗುತ್ತದೆ. ಇದನ್ನು ನವೀಕರಣ ಮಾಡುವ ಕೆಲಸವೂ ಸಹ ಮುಂದುವರಿದಿದೆ. ರಾಜ್ಯದ ಛತ್ರದ ಆವರಣದಲ್ಲಿ ಹೊಸದಾಗಿ ಕರ್ನಾಟಕ ಭವನ ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. 3.24 ಕೋಟಿ ರು. ಮಂಜೂರಾತಿ ನೀಡಿದ್ದು, ಮೊದಲ ಹಂತದಲ್ಲಿ ಸರ್ಕಾರ 1 ಕೋಟಿ ರು. ಅನುದಾನವನ್ನು ರಾಯಚೂರು ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.

ರಾಜ್ಯಪಾಲರು ಭಾಷಣದಲ್ಲಿ  ಹೇಳಿದ ಪ್ರಮುಖ ಅಂಶ

ಜೆಡಿಎಸ್ ಪ್ರತಿಭಟನೆ:  ಆಡಳಿತ ಪಕ್ಷದ ಅಸಮರ್ಥತೆ ಮತ್ತು ಅಧಿಕೃತ ಪ್ರತಿಪಕ್ಷದ ಪ್ರತಿಷ್ಠೆಯಿಂದ ವಿಧಾನಮಂಡಲ ಕಲಾಪ ಸಮರ್ಪಕವಾಗಿ ನಡೆಯದೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಆರೋಪಿಸಿ ಜೆಡಿಎಸ್‌ ಸದಸ್ಯರು ಪ್ರತಿಭಟನೆ ನಡೆಸಿದರು.

ಸೋಮವಾರ ವಿಧಾನಸೌಧ ಮತ್ತು ವಿಕಾಸಸೌಧ ನಡುವೆ ಇರುವ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ವಿಧಾನಸಭೆ ಮತ್ತು ಪರಿಷತ್‌ ಸದಸ್ಯರು ಪ್ರತಿಭಟನೆ ನಡೆಸಿ, ಎರಡೂ ರಾಷ್ಟ್ರೀಯ ಪಕ್ಷಗಳು ಸದನದ ಸಮಯವನ್ನು ಹಾಳು ಮಾಡುತ್ತಿದೆ. ಅತ್ಯಂತ ಪ್ರಮುಖ ಚರ್ಚೆಗೆ ವೇದಿಕೆಯಾಗಬೇಕಾದ ಸದನಗಳ ಕಲಾಪಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಧರಣಿ ನಡೆಸುತ್ತಿರುವ ಕಾಂಗ್ರೆಸ್‌ ಮತ್ತು ಧರಣಿ ತಡೆಯದೆ ಬಿಜೆಪಿ ಕಲಾಪವನ್ನು ಹಾಳು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತುಕತೆ ಮೂಲಕ ಮನವೊಲಿಸಬೇಕು. ಇಲ್ಲವೇ ಸದನದಿಂದ ಹೊರಹಾಕುವ ತೀರ್ಮಾನ ಕೈಗೊಳ್ಳಬೇಕು. ಅತ್ಯಂತ ಮಹತ್ವದ ಚರ್ಚೆಗಳು ಮತ್ತು ಸಮಸ್ಯೆಗಳ ಮೇಲೆ ವಿಚಾರ ವಿನಿಮಯ ಆಗಬೇಕಿದೆ. ಇದಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯನ್ನು ಮುಂದಿಟ್ಟು ಸದನವನ್ನು ಹಾಳು ಮಾಡುತ್ತಿವೆ. ಜನರ ಸಮಸ್ಯೆಗಳನ್ನು ಚರ್ಚೆ ಮಾಡಲು ರಾಷ್ಟ್ರೀಯ ಪಕ್ಷಗಳಿಗೆ ಆಸಕ್ತಿ ಇಲ್ಲ. ಬೆಳಗಾವಿಯಲ್ಲಿಯೂ ಸದನ ಸರಿಯಾಗಿ ನಡೆಸಲಿಲ್ಲ. ಜನರ ಹಣ ವೃಥಾ ಪೋಲಾಗುತ್ತಾ ಇದೆ. ಕೋವಿಡ್‌ ಸಮಯದಲ್ಲಿ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎಂದು ಹೇಳಿದರು.

 

Latest Videos
Follow Us:
Download App:
  • android
  • ios