ಚಿತ್ರದುರ್ಗ, [ಸೆ.05]:  ಮಾಜಿ ಸಚಿವ ಡಿ.ಕೆ.‌ಶಿವಕುಮಾರ್ ಅವರ ವಿಚಾರದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡಿಲ್ಲ, ಕಾನೂನು ಹೋರಾಟದಲ್ಲಿ ಅವರಿಗೆ ಒಳ್ಳೆಯದಾಗಲಿ ಎಂದು ಶಿವಮೊಗ್ಗ ಸಂಸದ ಬಿ‌.ವೈ. ರಾಘವೇಂದ್ರ ಹೇಳಿದರು.

ಚಿತ್ರದುರ್ಗ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಅವರು, ಯಾವುದೇ ವ್ಯಕ್ತಿಗೆ ನೋವಾದಾಗ ಹೀಗೆ ಆರೋಪ ಮಾಡುವುದು ಸಾಮಾನ್ಯ. ಆದರೆ, ಅವರಿಗೆ ಕಾನೂನು ಹೋರಾಟದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸಿದರು.

ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ನಾವು ದ್ವೇಷ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಬಿಐ, ಇಡಿ, ಐಟಿ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿವೆ. ಈ ವಿಚಾರದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.

ಇಂದಿರಾಗಾಂಧಿ ಕಾಲದಲ್ಲಿ ಬಹುದೊಡ್ಡ ಪಕ್ಷವಾಗಿ ಮೂರನೇ ಎರಡರಷ್ಟು ಬಹುಮತ ಹೊಂದಿದ್ದ ಕಾಂಗ್ರೆಸ್ ಈಗ ಹೀನಾಯ ಸ್ಥಿತಿ ತಲುಪಿದೆ. ಕಾಂಗ್ರೆಸ್ ಪಕ್ಷಕ್ಕೆ ದೇಶಾದ್ಯಂತ ವಿರೋಧ ಪಕ್ಷದ ಸ್ಥಾನಮಾನ ಕೂಡಾ ಸಿಗುತ್ತಿಲ್ಲ. ಹೀಗಾಗಿ ಯಾವುದೇ ಚುನಾವಣೆ ಗೆಲ್ಲಲು ಡಿಕೆಶಿ ಅವರನ್ನು ಅರೆಸ್ಟ್ ಮಾಡಿಸುವ ಕೆಲಸ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಹೊಸದುರ್ಗ ಪಿಎಸ್ಐ ವರ್ಗಾವಣೆ ವಿಚಾರದಲ್ಲಿ ರಾಘವೇಂದ್ರ ಅವರು ಹಸ್ತಕ್ಷೇಪ‌ಮಾಡುತ್ತಿದ್ದಾರೆ ಎಂಬ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ತಪ್ಪು ತಿಳುವಳಿಕೆಯಿಂದ ಮಾತನಾಡಿದ್ದಾರೆ. ನಾವು ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಈ ಬಗ್ಗೆ ಶಾಸಕರ ಜತೆ ಮಾತಾನಾಡಿದ್ದೇನೆ. ಈಗ ಎಲ್ಲವೂ ಸರಿಯಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.