Asianet Suvarna News Asianet Suvarna News

ಬಿಎಸ್‌ವೈ ಆಪ್ತ ಪುಟ್ಟಸ್ವಾಮಿ ಸದ್ಯದಲ್ಲೇ ಮಠಾಧೀಶ.. ಸನ್ಯಾಸ ದೀಕ್ಷೆ


*ಬಿಎಸ್‌ವೈ ಆಪ್ತ ಪುಟ್ಟಸ್ವಾಮಿ  ಸದ್ಯದಲ್ಲೇ ಮಠಾಧೀಶ

* ಹಾಲಿ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿರುವ ಪುಟ್ಟಸ್ವಾಮಿ

* ತೈಲೇಶ್ವರ ಗಾಣಿಗರ ಮಠದ ಪ್ರಥಮ ಪೀಠಾಧಿಪತಿಯಾಗಲು ಒಪ್ಪಿಗೆ

* ಮೇ 6ರಂದು ಸನ್ಯಾಸತ್ವ ದೀಕ್ಷೆ, ಮೇ 15ರಂದು ಪಟ್ಟಾಭಿಷೇಕ

* 82ನೇ ವಯಸ್ಸಿನಲ್ಲಿ ಅಚ್ಚರಿಯ ನಿರ್ಧಾರ ಕೈಗೊಂಡ ಮಾಜಿ ಸಚಿವ

BS Yediyurappa aide BJP senior leader BJ Puttaswamy quits politics to became Swamiji mah
Author
Bengaluru, First Published Apr 6, 2022, 3:22 AM IST

 ಬೆಂಗಳೂರು(ಏ.06) ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರ ಪರಮಾಪ್ತರಾದ ಬಿಜೆಪಿ ಮಾಜಿ ಸಚಿವ ಹಾಗೂ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ(BJ Puttaswamy) ಅವರು ಇನ್ನು ಮುಂದೆ ಪೂರ್ಣಾನಂದ ಪುರಿ ಸ್ವಾಮೀಜಿ..!

ಹೌದು. ಪುಟ್ಟಸ್ವಾಮಿ ಅವರು ಖಾದಿ ತೊರೆದು ಕಾವಿ ತೊಡಲಿದ್ದಾರೆ. ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿಯ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಥಮ (Swamiji) ಪೀಠಾಧಿಪತಿಗಳಾಗಲಿದ್ದಾರೆ. ಬರುವ ಮೇ 6ರಂದು ಸನ್ಯಾಸತ್ವದ ದೀಕ್ಷೆ ಪಡೆಯಲಿದ್ದು, ಮೇ 15ರಂದು ಪೀಠಾಧಿಪತಿಯ ಪಟ್ಟಾಭಿಷೇಕ ನೆರವೇರಲಿದೆ.

ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ಎಸ್‌.ಎಂ.ಕೃಷ್ಣ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಸ್ವತಃ ಪುಟ್ಟಸ್ವಾಮಿ ಅವರೇ ತೆರಳಿ ಆಹ್ವಾನ ನೀಡಿದ್ದಾರೆ. ಶೀಘ್ರದಲ್ಲೇ ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿದ್ದಾರೆ. 82 ವರ್ಷ ವಯಸ್ಸಿನಲ್ಲಿ ಸ್ವಾಮೀಜಿಯಾಗುತ್ತಿರುವುದು ಕೂಡ ವಿಶೇಷ.

ಏಕಾಏಕಿ ತೀರ್ಮಾನವಲ್ಲ: ಈ ಕುರಿತು ಮಂಗಳವಾರ ರಾತ್ರಿ ‘ಕನ್ನಡಪ್ರಭ’ದ ಜತೆ ಮಾತನಾಡಿದ ಪುಟ್ಟಸ್ವಾಮಿ, ‘ಇದು ಏಕಾಏಕಿ ಕೈಗೊಂಡ ತೀರ್ಮಾನವಲ್ಲ. ಜೀವಮಾನದಲ್ಲಿ ಜ್ಞಾನ ಬಂದ ಮೇಲೆ ಗಾಣಿಗ ಸಮಾಜಕ್ಕೆ ಏನಾದರೂ ಮಾಡಬೇಕು ಮತ್ತು ಶಾಶ್ವತವಾದ ಸಂಸ್ಥೆಯೊಂದನ್ನು ಕಟ್ಟಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು. 1972ರಲ್ಲಿ ಗಾಣಿಗ ಸಮುದಾಯದ ಒಳಪಂಗಡಗಳನ್ನು ಒಗ್ಗೂಡಿಸಿ ಸಂಘ ಸ್ಥಾಪಿಸಿ ಅಧ್ಯಕ್ಷನಾಗಿದ್ದೆ. ಎಲ್ಲರಲ್ಲಿಯೂ ಸಾಮರಸ್ಯ ಮೂಡಿಸಿದ್ದೆ. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ರಾಜಕೀಯ ಕಾರ್ಯದರ್ಶಿಯಾಗಿದ್ದ ವೇಳೆ ಅವರ ಬಳಿ ಒಂದು ರು. ಆದಾಯ ಬರುವಂತಹದ್ದು ಏನನ್ನೂ ಪಡೆದಿಲ್ಲ. ಯಾವುದಕ್ಕೂ ಆಸೆ ಪಟ್ಟಿಲ್ಲ. ಜನಾಂಗಕ್ಕೆ ಸಂಸ್ಥೆಯೊಂದನ್ನು ಕಟ್ಟಲು ಜಮೀನು ನೀಡುವಂತೆ ಕೇಳಿದ್ದೆ’ ಎಂದರು.

ರಾಜರಾಜೇಶ್ವರಿ ಶ್ರೀಗಳ ಆಜ್ಞೆ ಆಗಿದೆ ‘ಯಡಿಯೂರಪ್ಪ ಅವರ ಕಾಲದಲ್ಲಿ 8 ಎಕರೆ ಜಮೀನು ಮತ್ತು 5 ಕೋಟಿ ರು. ನೀಡಿದ್ದರು. ನ್ಯಾಯವಾಗಿ ದುಡಿದ ಹಣ ಮತ್ತು ಜನಾಂಗದವರಿಂದ ಭಿಕ್ಷೆ ಬೇಡಿ ಸಂಸ್ಥೆ ನಿರ್ಮಾಣ ಮಾಡಿದ್ದೇನೆ. ಗುರುಪೀಠ ನಿರ್ಮಿಸಿ 2016ರಲ್ಲಿ ಉದ್ಘಾಟನೆ ಮಾಡಲಾಯಿತಾದರೂ ಸಮರ್ಪಕವಾಗಿ ಪ್ರಾರಂಭಿಸಿಲ್ಲ. ಜನಾಂಗದ 3-4 ಮಂದಿಯನ್ನು ಸನ್ಯಾಸತ್ವ ತರಬೇತಿ ಪಡೆಯಲು ಮುರುಘರಾಜೇಂದ್ರ ಮಠ, ಸಿದ್ಧಗಂಗಾ ಮಠ ಮತ್ತು ರಾಜರಾಜೇಶ್ವರಿ ನಗರದ ಮಠದಲ್ಲಿ ಬಿಟ್ಟಿದ್ದೆವು. ಆದರೆ, ಅದು ಯಶಸ್ವಿಯಾಗಲಿಲ್ಲ. ಕಳೆದ 4-5 ತಿಂಗಳ ಹಿಂದೆ ರಾಜರಾಜೇಶ್ವರಿ ನಗರದ ಮಠದ ಜಯೇಂದ್ರ ಸ್ವಾಮೀಜಿ ಅವರು ಮಠದಲ್ಲಿ ಯಾಗ ಮಾಡಿದ್ದರು. ನನ್ನನ್ನು ಕರೆದಿದ್ದರಿಂದ ಅಲ್ಲಿಗೆ ಹೋಗಿದ್ದೆ. ಅವರೇ ಆದೇಶ ನೀಡಿದ್ದರಿಂದ ನಾನು ಮೊದಲ ಪೀಠಾಧಿಪತಿಗೆ ನೇಮಕವಾಗಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದರು.

‘ಮೊದಲ ಪೀಠಾಧಿಪತಿಗೆ ಆಯ್ಕೆ ಮಾಡಲು ಯಾರೋ ಹುಡುಗರನ್ನು ಕಳುಹಿಸಿದ್ದೀರಿ. ಆದರೆ, ಅದಕ್ಕೆ ತ್ಯಾಗ ಮಾಡಬೇಕು ಮತ್ತು ದೇವಿ ಕೃಪೆ ಇರಬೇಕು. ಎರಡೂ ಇಲ್ಲದಿದ್ದರೆ ಪೀಠಾಧಿಪತಿಯಾಗಲು ಅರ್ಹತೆ ಇರಲ್ಲ’ ಎಂದು ಹೇಳಿದ ಸ್ವಾಮೀಜಿ ಅವರು, ‘ಜಪ ಮಾಡುವಾಗ ದೇವಕೃಪೆಯಿಂದ ನಿಮ್ಮ ಹೆಸರು ಬಂದಿದೆ. ನೀವೇ ಮೊದಲ ಪೀಠಾಧಿಪತಿಯಾಗಿ. ನಂತರ ಬೇಕಾದರೆ ಬೇರೆಯವರಿಗೆ ತರಬೇತಿ ನೀಡಿ ಅವರನ್ನು ಮಾಡಬಹುದು ಎಂದು ತಿಳಿಸಿದರು. ಮೊದಲಿನಿಂದಲೂ ಜನಾಂಗಕ್ಕೆ ಕೆಲಸ ಮಾಡುವ ಆಸೆ ಇದೆ. ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಹೀಗಾಗಿ ಪೀಠಾಧಿಪತಿಯಾಗಲು ಒಪ್ಪಿಗೆ ನೀಡಿದೆ’ ಎಂದು ನುಡಿದರು.

 

 

 


 

Follow Us:
Download App:
  • android
  • ios