ಪುತ್ತೂರು(ಆ.01): ಅಣ್ಣನೋರ್ವ ತನ್ನ ತಂಗಿಗೆ ಬಿಸಿನೀರು ಎರಚಿ ಗಾಯಗೊಳಿಸಿದ ಘಟನೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಶೇವಿರೆ ಎಂಬಲ್ಲಿ ನಡೆದಿದ್ದು, ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಶೇವಿರೆ ನಿವಾಸಿ ನಾರಾಯಣ ನಾಯ್ಕ ಎಂಬವರ ಪುತ್ರಿ ಪವಿತ್ರಾ(22) ಗಾಯಗೊಂಡವರು. ಆಕೆಯ ಅಣ್ಣ ರಮೇಶ ಎಂಬಾತ ಬಿಸಿ ನೀರು ಎರಚಿ ಗಾಯಗೊಳಿಸಿದ ಆರೋಪಿ. ರಮೇಶ್‌ ತನ್ನ ತಂದೆ ತಾಯಿಯ ಜೊತೆಗೆ ಪ್ರತಿದಿನ ಜಗಳ ನಡೆಸುತ್ತಿದ್ದ.

ಕೇರಳದ ಆತ್ಯಾಚಾರಿ ಆರೋಪಿ ಶವ ಕೋಟ ಬೀಚಲ್ಲಿ ಪತ್ತೆ

ಬುಧವಾರ ಈ ಬಗ್ಗೆ ಪ್ರಶ್ನಿಸಿದ ತಂಗಿ ಪವಿತ್ರಾ ಅವರ ಮೇಲೆ ಬಚ್ಚಲು ಮನೆಯಲ್ಲಿ ಸ್ನಾನಕ್ಕೆಂದು ಇರಿಸಿದ್ದ ಬಿಸಿ ನೀರನ್ನು ಎರಚಿದ್ದ. ಇದರಿಂದ ಪವಿತ್ರಾ ಅವರ ಮುಖ, ಕೈ, ಕಾಲುಗಳಲ್ಲಿ ಸುಟ್ಟಗಾಯವಾಗಿದೆ. ಗಾಯಾಳು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವಿತ್ರಾ ಅವರು ನೀಡಿದ ದೂರಿನಂತೆ ಆರೋಪಿ ರಮೇಶ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.