ಮಂಡ್ಯ (ಆ.25): ಕೊರೋನಾ ಸೃಷ್ಟಿಸಿದ ಸಂಕಷ್ಟ ಪರಿಸ್ಥಿತಿಯಿಂದ ವಿಶ್ವಮಾನ್ಯತೆ ಗಳಿಸಿರುವ ಕೃಷ್ಣರಾಜಸಾಗರ ಜಲಾಶಯ ಬೃಂದಾವನದ ಬಾಗಿಲು ಮುಚ್ಚಿ ಐದು ತಿಂಗಳಾಗಿದೆ. ಪ್ರತಿ ತಿಂಗಳು ರು. 1.05 ಕೋಟಿಯಂತೆ ಇಲ್ಲಿಯವರೆಗೆ 5.25 ಕೋಟಿ ರು. ನಷ್ಟವಾಗಿದೆ. ಇದರ ನಡುವೆಯೂ ಬೃಂದಾವನ ಪ್ರವೇಶಕ್ಕೆ ಸರ್ಕಾರ ಇನ್ನೂ ಗ್ರೀನ್‌ ಸಿಗ್ನಲ್‌ ಕೊಟ್ಟಿಲ್ಲ.

ನಿತ್ಯವೂ ಸಾವಿರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕೆಆರ್‌ಎಸ್‌ನೊಳಗೆ ಈಗ ನೀರವ ಮೌನ ಆವರಿಸಿದೆ. ಪ್ರವಾಸಿಗರಿಲ್ಲದೆ ಬೃಂದಾವನದ ಕಾರಂಜಿಗಳು ಚಿಮ್ಮುತ್ತಿಲ್ಲ, ವಿದ್ಯುದ್ದೀಪಗಳು ಮಿನುಗುತ್ತಿಲ್ಲ. ಸಂಗೀತ ಕಾರಂಜಿಯಲ್ಲಿ ನೃತ್ಯದ ಸೊಬಗಿಲ್ಲ. ಬೋಟಿಂಗ್‌ ಪಾಯಿಂಟ್‌ನಲ್ಲಿ ಬೋಟ್‌ಗಳು ಓಡುತ್ತಿಲ್ಲ, ಜನಜಂಗುಳಿ, ಮಕ್ಕಳ ಕಲರವವಿಲ್ಲದೆ ಇಡೀ ಬೃಂದಾವನ ಬಿಕೋ ಎನ್ನುತ್ತಿದೆ.ಕೃಷ್ಣರಾಜಸಾಗರ ಜಲಾಶಯ ಜಲಧಾರೆಯಿಂದ ಮೈದುಂಬಿರುವ ಆಕರ್ಷಣೀಯ ನೋಟವನ್ನು ಕಣ್ತುಂಬಿಕೊಳ್ಳುವುದರಿಂದ ಈ ಬಾರಿ ಪ್ರವಾಸಿಗರು ವಂಚಿತರಾಗಿದ್ದಾರೆ.

ಈ ಬಾರಿ ಹೇಗಿರಲಿದೆ ದಸರಾ ಆಚರಣೆ ?...

ಕೊರೋನಾ ಕಾರಣದಿಂದ ಮಾ.20ರಿಂದ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಪ್ರವೇಶವನ್ನು ನಿಷೇಧಿಸಿದೆ. ಅಲ್ಲಿಂದ ಇಲ್ಲಿಯವರೆಗೂ ಬೃಂದಾವನ ಮುಚ್ಚಿದ ಸ್ಥಿತಿಯಲ್ಲೇ ಇದೆ. ಪ್ರವಾಸಿಗರನ್ನೇ ನಂಬಿಕೊಂಡು ಬೃಂದಾವನ ಪ್ರವೇಶ ದ್ವಾರ ಮತ್ತು ಒಳಭಾಗದಲ್ಲಿ ನೂರಾರು ಜನರು ಅಂಗಡಿಗಳನ್ನು ತೆರೆದು ಬದುಕನ್ನು ಕಟ್ಟಿಕೊಂಡಿದ್ದರು. ಐದು ತಿಂಗಳಿಂದ ಬೃಂದಾವನ ಮುಚ್ಚಿರುವುದರಿಂದ ಅಂಗಡಿಗಳ ಬಾಗಿಲು ಬಂದ್‌ ಆಗಿವೆ. ಹೀಗಾಗಿ ವ್ಯಾಪಾರಸ್ಥರ ಬದುಕು ಸಂಕಷ್ಟಕ್ಕೆ ಸಿಲುಕಿದೆ.