30ವರ್ಷ ಬಳಿಕ ಮುಳುಗಿದ ಸೇತುವೆ ಮೇಲೆ ಹರಿಯುತ್ತಿದೆ 5 ಅಡಿ ನೀರು..!
ಶಿವಮೊಗ್ಗದ ಹೊಸನಗರ ತಾಲೂಕಿನಾದ್ಯಂತ ಕುಂಭದ್ರೋಣ ಮಳೆಯಾಗುತ್ತಿದ್ದು, ತಾಲೂಕಿನ ಹೊಸಮನೆ -ಚಿಕ್ಕಮಣತಿ ರಸ್ತೆಯ ಸೇತುವೆಯು ಸುಮಾರು 30 ವರ್ಷಗಳ ಬಳಿಕೆ ಮುಳುಗಿದೆ. ಸೇತುವೆ ಮೇಲೆ 5 ಅಡಿ ನೀರು ಇದ್ದು ಸಂಚಾರ ಮಾಡದಂತೆ ಗ್ರಾಮಸ್ಥರಲ್ಲಿ ತಾಲೂಕು ಆಡಳಿತ ಮನವಿ ಮಾಡಿದೆ.
ಶಿವಮೊಗ್ಗ(ಆ.07): ಹೊಸನಗರ ತಾಲೂಕಿನಾದ್ಯಂತ ಕುಂಭದ್ರೋಣ ಮಳೆಯಾಗುತ್ತಿದೆ. ಶರಾವತಿ, ಶರ್ಮನಾವತಿ, ವಾರಾಹಿ, ಕುಮದ್ವತಿ, ಚಕ್ರಾ ಸಾವೆಹಕ್ಕಲು ಹಾಗೂ ಅದರ ಉಪನದಿಗಳ ಮಟ್ಟಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ತಾಲೂಕಿನ ಹೊಸಮನೆ -ಚಿಕ್ಕಮಣತಿ ರಸ್ತೆಯ ಸೇತುವೆಯು ಸುಮಾರು 30 ವರ್ಷಗಳ ಬಳಿಕೆ ಮುಳುಗಿರುವ ಪ್ರಕರಣ ವರದಿ ಆಗಿದೆ. ಸೇತುವೆ ಮೇಲೆ 5 ಅಡಿ ನೀರು ಇದ್ದು ಸಂಚಾರ ಮಾಡದಂತೆ ಗ್ರಾಮಸ್ಥರಲ್ಲಿ ತಾಲೂಕು ಆಡಳಿತ ಮನವಿ ಮಾಡಿದೆ.
ಹರಿದ್ರಾವತಿ ಗ್ರಾಪಂನಲ್ಲಿ ಹರಿಯುವ ಶರಾವತಿ ಉಪನದಿ ನದಿ ಹೊಳೆ ಪ್ರಮಾಣ ಹೆಚ್ಚಾಗಿದ್ದು ವ್ಯಾಪ್ತಿಯಲ್ಲಿ ಬರುವ ದೇವರಹೊನ್ನೆಕೊಪ್ಪ, ಹರಿದ್ರಾವತಿ, ಆಲಗೇರಿಮಂಡ್ರಿ, ಎಚ್.ಹುಣಸವಳ್ಳಿ, ಬಾಣಿಗ, ಬಿಲಗೋಡಿ, ಅಮಚಿ, ಹೀಲಗೋಡು ಗ್ರಾಮಗಳಲ್ಲಿ ಅತಿಯಾದ ಮಳೆಯಿಂದ ರೈತರ ಜಮೀನಿಗೆ ಹಾನಿ ಉಂಟಾಗಿದ್ದು ಎಂದು ಗ್ರಾ.ಪಂ. ಅಧ್ಯಕ್ಷ ವಾಟಗೋಡು ಸುರೇಶ ತಿಳಿಸಿದ್ದಾರೆ.
ಕೊಚ್ಚಿಕೊಂಡು ಹೋದ ತಡೆಗೋಡೆ:
ಪಟ್ಟಣದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಮಳೆಯಿಂದಾಗಿ ತಡೆಗೋಡೆ ಕೊಚ್ಚಿಕೊಂಡು ಹೋಗಿದೆ. ಸುಮಾರು .23 ಲಕ್ಷದ ಕಾಮಗಾರಿಯಲ್ಲಿ ಆದ ಕಳಪೆಯ ಕಾರಣ ತಡೆಗೋಡೆ ಸಂಪೂರ್ಣ ಧ್ವಂಸವಾಗಿದೆ. ಕೂಡಲೆ ತಡೆಗೋಡೆ ಮರುನಿರ್ಮಾಣ ಆಗಬೇಕು ಹಾಗೂ ಕಳಪೆ ಕಾಮಗಾರಿಯ ಕುರಿತಂತೆ ತನಿಖೆ ನಡೆಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ಸಿಂಥಿಯಾ ಸೇರಾವೊ ಮನವಿ ಮಾಡಿದ್ದಾರೆ.
ಮಳೆ ಮಾಹಿತಿ: ಹೊಸನಗರ ಪಟ್ಟಣ 165 ಮಿ.ಮೀ, ಮಾಣಿ ಅಣೆಕಟ್ಟು 214 ಮಿ.ಮೀ, ಯಡೂರು-245 ಮಿ.ಮೀ, ಹುಲಿಕಲ್ 288 ಮಿ.ಮೀ, ಮಾಸ್ತಿಕಟ್ಟೆ268 ಮಿ.ಮೀ. ಮಳೆಯಾಗಿದೆ.
ಮಾಣಿ ಪಿಕ್ ಅಪ್ ಅಣೆಕಟ್ಟಿನಿ 3 ಕ್ರೆಸ್ಟ್ ಗೇಟಿನಿಂದ ಸುಮಾರು 4 ಸಾವಿರ ಕ್ಯುಸೆಕ್ಸ್ ನೀರನ್ನು ಹೊರ ಹಾಕಲಾಗಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ ತಿಳಿಸಿದೆ.