ಮದುಮಗಳಿಗೆ ಕೊರೋನಾ ಸೋಂಕು: ಮತ್ತಿಮನೆ ಸೀಲ್‌ಡೌನ್
ಕೊರೋನಾ ವಾರಿಯರ್ಸ್, ಸಾಮಾನ್ಯ ಜನರ ಬಳಿಕ ಇದೀಗ ಮದುವಣಗಿತ್ತಿಗು ಕೊರೋನಾ ಸೋಂಕು ಅಟಕಾಯಿಸಿಕೊಂಡಿದೆ. ಮದುವೆಯಲ್ಲಿ ಸುಮಾರು 200 ಜನರು ಭಾಗವಹಿಸಿರುವ ಸಾಧ್ಯತೆ ಇದ್ದು, ಈಗಾಗಲೇ 80 ಜನರ ಪಟ್ಟಿಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಹೊಸನಗರ(ಜು.08): ಕೇವಲ 10 ದಿನದ ಹಿಂದೆ ಮದುವೆಯಾಗಿ ಬಂದಿದ್ದ 25 ವರ್ಷದ ಮಹಿಳೆಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿ ಮತ್ತಿಮನೆಯ ಸೋಂಕಿತ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಹಸೀಲ್ದಾರ್ ರಾಜೀವ್ ತಿಳಿಸಿದ್ದಾರೆ. ಮತ್ತಿಮನೆಗೆ ಭೇಟಿ ನೀಡಿದ ರಾಜೀವ್ ಅವರು ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು.
ಈ ಮಹಿಳೆಯ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕಲಾಗುತ್ತಿದೆ. ಮದುವೆಯಲ್ಲಿ ಸುಮಾರು 200 ಜನರು ಭಾಗವಹಿಸಿರುವ ಸಾಧ್ಯತೆ ಇದ್ದು, ಈಗಾಗಲೇ 80 ಜನರ ಪಟ್ಟಿಮಾಡಲಾಗಿದೆ. ಪ್ರಾಥಮಿಕ ಸಂಪರ್ಕದ ನಿಯಮಗಳನ್ನು ಆಧರಿಸಿ ಅವರಿಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಮೂರು ದಿನದ ಹಿಂದೆ ಸೋಂಕಿತ ಮಹಿಳೆ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಭಾನುವಾರು ವರದಿ ಬಂದಿದ್ದು ಕೊರೊನಾ ಸೋಂಕು ದೃಢವಾಗಿದೆ. ಭಾನುವಾರ ರಾತ್ರಿಯೇ ಸೋಂಕಿತ ಮಹಿಳೆಯನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದೆ. ಸೋಂಕು ದೃಢವಾಗುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ತಾಲೂಕು ಆಡಳಿತ ಮತ್ತಿಮನೆಯ ಸೋಂಕಿತರ ಮನೆಯ ಸುತ್ತ ಬ್ಯಾರಿಕೇಡ್ ಹಾಕಿ ಪ್ರವೇಶ ನಿರ್ಬಂಧಿಸಿ ಎಂದು ವಿವರಿಸಿದರು.
ದ.ಕ.: ಮುಂದುವರಿದ ಸಾವು, ಸೋಂಕಿನ ಭರಾಟೆ, ಓರ್ವ ಸಾವು 99 ಮಂದಿ ಗುಣಮುಖ
ಇದಕ್ಕೂ ಮುನ್ನ ಅರಮನೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಥಳೀಯ ಆಡಳಿತ ಸಿಬ್ಬಂದಿಗಳ ಸಭೆ ನಡೆಯಿತು. ತಾಪಂ ಇಒ ಸಿ.ಆರ್.ಪ್ರವೀಣ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಸುರೇಶ್, ಸೋಂಕು ಹರಡದಂತೆ ಕೈಗೊಂಡಿರುವ ಕ್ರಮಗಳ ಕುರಿತು ಸಮಾಲೋಚಿಸಿದರು. ಚರ್ಚಿಸಿದರು.
10 ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಗೆ ಜುಲೈ 5 ರಂದು ಸೋಂಕು ದೃಢವಾಗಿದ್ದು, ಹಿಂದಿನ 14 ದಿನಗಳ ಟ್ರಾವೆಲ್ ಹಿಸ್ಟರಿಯನ್ನು ಕಲೆಹಾಕಿ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಮೈಕ್ ಪ್ರಚಾರದ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಸಹ ತಿಳಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಕೆ.ವಿ.ಸುಬ್ರಹ್ಮಣ್ಯ, ಪಿಡಿಒ ಪರಮೇಶ್ವರ್, ಪಿಎಸ್‌ಐ ಸಿ.ಆರ್.ಕೊಪ್ಪದ್ ಕಂದಾಯ ನಿರೀಕ್ಷಕ ಲೋಹಿತ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಇದ್ದರು.