ಸರ್ಕಾರ EWS ಜಾರಿ ಮಾಡದಿದ್ರೆ ಹೈಕೋರ್ಟ್‌ನಲ್ಲಿ ದಾವೆ: ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ
ಬ್ರಾಹ್ಮಣರು ಸಂಘಟಿತರಾಗುವುದು ಅನಿವಾರ್ಯ. ಕೇಂದ್ರ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡ್ಲ್ಯೂಎಸ್) ನೀಡಿರುವ ಶೇ. 10ರಷ್ಟುಮೀಸಲಾತಿಯನ್ನು ಚುನಾವಣೆ ಘೋಷಣೆಗೂ ಮುನ್ನ ರಾಜ್ಯ ಸರ್ಕಾರ ಜಾರಿಗೊಳಿಸದಿದ್ದರೆ ಹೈಕೋರ್ಚ್‌ದಲ್ಲಿ ದಾವೆ ಹೂಡಲಾಗುವುದು ಎಂದು ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ’ದ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಹಾವೇರಿ (ಫೆ.26) : ಬ್ರಾಹ್ಮಣರು ಸಂಘಟಿತರಾಗುವುದು ಅನಿವಾರ್ಯ. ಕೇಂದ್ರ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡ್ಲ್ಯೂಎಸ್) ನೀಡಿರುವ ಶೇ. 10ರಷ್ಟುಮೀಸಲಾತಿಯನ್ನು ಚುನಾವಣೆ ಘೋಷಣೆಗೂ ಮುನ್ನ ರಾಜ್ಯ ಸರ್ಕಾರ ಜಾರಿಗೊಳಿಸದಿದ್ದರೆ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು ಎಂದು ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ’ದ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ಶ್ರೀಕ್ಷೇತ್ರ ಆನಂದವನದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜ ಶನಿವಾರ ಆಯೋಜಿಸಿದ್ದ ಜಿಲ್ಲಾ ಪ್ರಥಮ ಬ್ರಾಹ್ಮಣ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು
ಬಿಜೆಪಿಯಿಂದ ಬ್ರಾಹ್ಮಣರಿಗೆ ಮೋಸ: ಶಾಸಕ ರವೀಂದ್ರ ಶ್ರೀಕಂಠಯ್ಯ.
ಸಂವಿಧಾನಾತ್ಮಕವಾಗಿ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10ರಷ್ಟುಮೀಸಲಾತಿ(Reservation) ಕೊಟ್ಟಿದೆ. ಇದನ್ನು ಸುಪ್ರೀಂಕೋರ್ಟ್(Supreme court) ಸಹ ಎತ್ತಿ ಹಿಡಿದಿದೆ. ಆದರೂ ರಾಜ್ಯ ಸರ್ಕಾರ ಮೀಸಲಾತಿ ಕೊಟ್ಟಿಲ್ಲ. ಬ್ರಾಹ್ಮಣರಿಗೆ ಅನುಕೂಲ ಮಾಡಿಕೊಟ್ಟರೆ ಬೇರೆ ಸಮುದಾಯದವರು ಮುನಿಸಿಕೊಳ್ಳುತ್ತಾರೆ ಎಂಬ ಕಾರಣದಿಂದ ಜಾರಿಗೊಳಿಸುತ್ತಿಲ್ಲ. ಒಂದೆರಡು ವಾರಗಳಲ್ಲಿ ರಾಜ್ಯದಲ್ಲೂ ಇಡಬ್ಲ್ಯೂಎಸ್(Implementation of EWS) ಜಾರಿಗೊಳಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ ಎಂದರು.
ನಮಗೆ ಯಾರೂ ಸಹಾಯ ಮಾಡಲ್ಲ, ನಮಗೆ ನಾವೇ ಸಹಾಯ ಮಾಡಿಕೊಳ್ಳಬೇಕು ಎಂಬ ಭಾವನೆ ಸಮಾಜ ಬಾಂಧವರಲ್ಲಿ ಮೂಡಿದೆ. ನಮ್ಮಲ್ಲಿ ಒಗ್ಗಟ್ಟಿಲ್ಲ, ಅದನ್ನು ರಾಜಕೀಯ ಶಕ್ತಿಗಳು ದುರುಪಯೋಗ ಪಡೆಸಿಕೊಳ್ಳುತ್ತಿವೆ. ಕೆಲ ರಾಜಕೀಯ ಪಕ್ಷಗಳು ನಮ್ಮ ಸಮುದಾಯ ಕಡೆಗಣಿಸುತ್ತಿವೆ. ಒಂದು ಪಕ್ಷ ಬ್ರಾಹ್ಮಣರು ತಮಗೆ ಮತ ಹಾಕಲ್ಲ ಎಂದು ತಿಳಿದುಕೊಂಡಿದ್ದರೆ, ಮತ್ತೊಂದು ಪಕ್ಷ ಹೇಗಿದ್ದರೂ ತಮಗೇ ಮತ ಹಾಕುತ್ತಾರೆ ಎಂದು ನಮ್ಮನ್ನು ನಿರ್ಲಕ್ಷಿಸುತ್ತಿದೆ. ನಾವೆಲ್ಲ ಒಗಟ್ಟಿನ ಮೂಲಕ ಪಾಠ ಕಲಿಸಬೇಕು ಎಂದರು.
ವೇದ ಉಪನಿಷತ್ತುಗಳ ಬಗ್ಗೆ ತಿರಸ್ಕಾರ ಮನೋಭಾವ ಬೇಡ. ಬ್ರಾಹ್ಮಣರಿಂದಲೇ ಜಾತಿ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ ಎಂಬುದು ತಪ್ಪು ಅಭಿಪ್ರಾಯ. ಸನಾತನ ಧರ್ಮ(Sanatana dharma)ವನ್ನು ಟೀಕಿಸುತ್ತ ಬ್ರಾಹ್ಮಣ(Brahmin community)ರನ್ನು ಅವಹೇಳನ ಮಾಡುವ ಪ್ರವೃತ್ತಿ ಕಾಣುತ್ತಿದ್ದೇವೆ. ತಿಳಿವಳಿಕೆ ಇಲ್ಲದವರು ತಮ್ಮ ಅಜ್ಞಾನದಿಂದ ಹೀಗೆಲ್ಲ ಹೇಳುತ್ತಿರುತ್ತಾರೆ. ವೈದಿಕ ಮಾರ್ಗಕ್ಕೆ ಅಡೆತಡೆ ಮಾಡುವ ರಾಕ್ಷಸರು ಸದಾ ಇರುತ್ತಾರೆ. ನಾವು ಸಂಘಟಿತರಾದಾಗಲೇ ನಮಗೆ ಬೆಲೆ ಸಿಗುತ್ತದೆ ಎಂದ ಅವರು ಹೇಳಿದರು.
ಬ್ರಾಹ್ಮಣ ಸಮುದಾಯ ಸಂಘಟನೆ ವಿಷಯದಲ್ಲಿ ಉದಾಸೀನ ತೋರುತ್ತಿದೆ. ನಮ್ಮ ಪಾಡಿಗೆ ನಮ್ಮ ಜೀವನ ಎಂಬ ತೃಪ್ತ ಭಾವನೆಯಲ್ಲಿದ್ದೇವೆ. ಒಳಪಂಗಡಗಳ ಬಗ್ಗೆ ಪರಸ್ಪರರಲ್ಲಿ ಟೀಕೆ ಸಲ್ಲದು. ನಾವು ಯಾವ ಪರಂಪರೆಯಲ್ಲಿ ಜನ್ಮ ತಾಳಿದ್ದೇವೋ ಅದನ್ನೇ ಅನುಸರಿಸಿಕೊಂಡು ಮುಂದೆ ಹೋಗೋಣ. ಹೊರಗಡೆ ನಮ್ಮ ಒಗ್ಗಟ್ಟು ಪ್ರದರ್ಶಿಸೋಣ ಎಂದರು.
ದಿಕ್ಸೂಚಿ ಭಾಷಣ ಮಾಡಿದ ರಾಜೀವ ಗಾಂಧಿ ಆರೋಗ್ಯ ವಿವಿ ವಿಶ್ರಾಂತ ನಿರ್ದೇಶಕ ಡಾ. ಕೆ.ಪಿ. ಪುತ್ತುರಾಯ, ರಾಜ್ಯದಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದರೂ ಅಲ್ಪಸಂಖ್ಯಾತರಿಗೆ ಸಿಗುವ ಸ್ಥಾನಮಾನ ನಮಗೆ ಸಿಗುತ್ತಿಲ್ಲ. ಬ್ರಾಹ್ಮಣರ ಸಂಸ್ಕಾರ ಇಡೀ ಸಮಾಜದ ಮೇಲೆ ಪ್ರಭಾವ ಬೀರಬೇಕು. ಒಂದು ಕಾಲದಲ್ಲಿ ಪೂಜ್ಯರಾಗಿದ್ದವರು ಇಂದು ತ್ಯಾಜ್ಯವಾಗಿದ್ದಾರೆ. ವಿಪ್ರರ ಬಗ್ಗೆ ಅನೇಕರಿಗೆ ದ್ವೇಷ, ಆಕ್ರೋಶವಿದೆ. ಬ್ರಾಹ್ಮಣರ ಹಿತಾಸಕ್ತಿಗೆ ವಿರುದ್ಧವಾದ ಸರ್ಕಾರದ ನೀತಿ, ಬ್ರಾಹ್ಮಣೇತರರು ನಮ್ಮನ್ನು ನೋಡುವ ರೀತಿ, ನಾವೇ ಹುಟ್ಟುಹಾಕಿಕೊಂಡ ಸಮಸ್ಯೆ ಇವುಗಳಿಂದ ಸಮಾಜಕ್ಕೆ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ರಾಘವೇಂದ್ರ ಭಟ್ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಗಳ ಹೆಸರಿನಲ್ಲಿ ಹಿಂದೂ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಹಾಳು ಮಾಡುವ ಹುನ್ನಾರ ನಡೆದಿದೆ. ಸರ್ಕಾರ ವಿಧಿಸಿರುವ 5 ಮಾನದಂಡಗಳ ಅಡಿಯಲ್ಲಿ ಬರುವ ಅರ್ಹರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಇಡ್ಲ್ಯೂಎಸ್ ಪ್ರಮಾಣ ಪತ್ರ ಪಡೆದು ಅಭಿವೃದ್ಧಿ ಮಂಡಳಿಯಿಂದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವಸಂತ ಮೊಕ್ತಾಲಿ ಅಧ್ಯಕ್ಷತೆ ವಹಿಸಿದ್ದರು. ಅಗಡಿ ಆನಂದವನದ ಶ್ರೀಗುರುದತ್ತ ಚಕ್ರವರ್ತಿ ಸಾನ್ನಿಧ್ಯ ವಹಿಸಿದ್ದರು. ವಿಜಯ ನಾಡಜೋಶಿ, ಪ್ರಮೋದ ಮುನವಳ್ಳಿ, ಲಲಿತಾ ದೇಶಪಾಂಡೆ, ಜಿ.ಎಲ್. ನಾಡಗೇರ, ಉಮೇಶ ವಿಶ್ವರೂಪ, ಪಾರ್ವತಿಬಾಯಿ ಕಾಶಿಕರ ಇದ್ದರು. ಇದೇ ವೇಳೆ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪ್ರಕಾಶ ಜೋಶಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲೂಕಾಧ್ಯಕ್ಷ ಎಂ.ಆರ್. ಪಾಟೀಲ ಸ್ವಾಗತಿಸಿದರು. ಪ್ರಭಾಕರರಾವ್ ಮಂಗಳೂರು ಪ್ರಾಸ್ತಾವಿಕ ಮಾತನಾಡಿದರು. ದತ್ತಾತ್ರೇಯ ಕಳ್ಳಿಹಾಳ ನಿರೂಪಿಸಿದರು. ಸುರೇಶ ಕಡಕೋಳ ವಂದಿಸಿದರು. ಹನುಮಂತನಾಯಕ ಬದಾಮಿ ನಿರ್ಣಯ ಮಂಡಿಸಿದರು.
ಬ್ರಾಹ್ಮಣರು ಇಲ್ಲದಿದ್ದರೆ ಹಿಂದುತ್ವ ಉಳಿಯಲು ಸಾಧ್ಯವಿಲ್ಲ: ಸುಬ್ಬರಾಯ ಹೆಗ್ಗಡೆ
ಮೂರು ನಿರ್ಣಯ ಅಂಗೀಕಾರ
- ಬ್ರಾಹ್ಮಣರು ಹಾಗೂ ಬ್ರಾಹ್ಮಣ ಸಮಾಜವನ್ನು ಅವಮಾನಿಸುವುದಕ್ಕೆ ಖಂಡನೆ
- ಇಡಬ್ಲ್ಯೂಎಸ್ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕು
- ಝಾನ್ಸಿರಾಣಿ ಲಕ್ಷ್ಮೀಬಾಯಿ ಜಯಂತಿಯನ್ನು ಕೇಂದ್ರ ಸರ್ಕಾರದಿಂದ ಆಚರಿಸಬೇಕು