ಮಡಿಕೇರಿ (ಆ.16): ಕೊಡಗು ಜಿಲ್ಲೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಸಾಲಿನ ಗಜಗಿರಿ ಗುಡ್ಡ ಕುಸಿದು ಕಣ್ಮರೆಯಾಗಿದ್ದವರ ಶೋಧಕ್ಕೆ ಕಳೆದ ಹತ್ತು ದಿನಗಳಿಂದಲೂ ಕಾರ್ಯಾಚರಣೆ ನಡೆಯುತ್ತಿದೆ.

 ಶನಿವಾರ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಮೃತದೇಹವು ಸಹಾಯಕ ಅರ್ಚಕ ರವಿಕಿರಣ್‌ ಅವರದ್ದು ಎಂದು ದೃಢಪಟ್ಟಿದೆ. ಭೂಕುಸಿತದಲ್ಲಿ ಕಣ್ಮರೆಯಾಗಿದ್ದ ಐದು ಮಂದಿಯಲ್ಲಿ, ಈ ಹಿಂದೆ ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣಾಚಾರ್‌ ಸೇರಿ ಇಬ್ಬರ ಶವ ಪತ್ತೆಯಾಗಿತ್ತು.

ಮತ್ತೆ ರಾಜ್ಯದಲ್ಲಿ ಭಾರಿ ಮಳೆ : ಎಷ್ಟು ದಿನ ಅಲರ್ಟ್ ? ..

 ಶನಿವಾರ ಮಧ್ಯಾಹ್ನ ಕಾರ್ಯಾಚರಣೆ ವೇಳೆ ನಾಗತೀರ್ಥ ಎನ್ನುವ ಸ್ಥಳದಲ್ಲಿ ಸಂಪೂರ್ಣ ಕೊಳೆತು ಹೋಗಿದ್ದ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಶವ ದೊರೆತಿದೆ. ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಪತ್ನಿ ಶಾಂತಾ ಹಾಗೂ ಮಂಗಳೂರು ಮೂಲದ ಮತ್ತೋರ್ವ ಸಹಾಯಕ ಅರ್ಚಕ ಶ್ರೀನಿವಾಸ್‌ ಪತ್ತೆಯಾಗಬೇಕಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅರಣ್ಯ ಇಲಾಖೆ ಹಾಗೂ ಪೊಲೀಸರಿಂದ ಭಾನುವಾರವೂ ಕಾರ್ಯಾಚರಣೆ ಮುಂದುವರಿಯಲಿದೆ.