Asianet Suvarna News Asianet Suvarna News

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಜೊರಾಯ್ತು ಅಕ್ಕಲಕೋಟೆ ಗಡಿ ಕನ್ನಡಿಗರ ಗುಟುರು..!

ನಾವು ಕರ್ನಾಟಕ ಸೇರುತ್ತೇವೆ, ಅಧಿಕೃತ ಪರವಾನಿಗೆ ಕೊಡುಂತೆ ಕೋರಿ ಸೊಲ್ಲಾಪುರ ಡಿಸಿಗೆ ಮನವಿ ಸಲ್ಲಿಕೆ

Border Kannadigas Request to Join Karnataka grg
Author
First Published Dec 8, 2022, 10:00 PM IST

ಶೇಷಮೂರ್ತಿ ಅವಧಾನಿ

ಕಲಬುರಗಿ(ಡಿ.08): ಇದುವರೆಗೂ ಕನ್ನಡ ಬಾವುಟ ಹಿಡಿದು ಜಯ ಕರ್ನಾಟಕ ಘೋಷಣೆ ಹಾಕುತ್ತ ಸುದ್ದಿಯಲ್ಲಿದ್ದ ಅಕ್ಕಲಕೋಟೆ ತಾಲೂಕಿನ ಗಡಿ ಕನ್ನಡಿಗರು ಇದೀಗ ಕರುನಾಡ ಸೇರುವ ತಮ್ಮ ಬೇಡಿಕೆಗೆ ಅಧಿಕೃತ ರೂಪ ನೀಡಿದ್ದಾರೆ.
ನಾವು ಕರ್ನಾಟಕ ಸೇರೋ ಬಗ್ಗೆ ಇದುವರೆಗೂ ಮಾತನ್ನಾಡಿದ್ದೆವು, ಇದೀಗ ಕೃತಿಯಲ್ಲಿ, ಅದೂ ಲಿಖಿತವಾಗಿಯೇ ಮುಂದಡಿ ಇಡುತ್ತಿದ್ದೇವೆಂದು ಗುಟುರು ಹಾಕಿರುವ ಗಡಿ ಕನ್ನಡಿಗರು ಸೊಲ್ಲಾಪುರ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಸೇರುತ್ತೇವೆ, ಪರವಾನಿಗೆ ಕೋಡಿ ಎಂದು ಆಗ್ರಹಿಸಿದ್ದಾರೆ.

ಅಕ್ಕಲಕೋಟೆ ತಾಲೂಕಿನ ಆಳಗೆ, ಆಳಗೆ, ಶೇಗಾಂವ, ಕಲ್ಲಕರ್ಜಾಳ, ಧಾರಸಂಗ, ಕೆಗಾಂವ, ದೇವಿಕವಟಾ, ಶಾವಳ, ಹಿಳ್ಳಿ, ಅಂದೇವಾಡಿ, ಪಾನ್‌ ಮಂಗರುಳ ಹಾಗೂ ಕೋರ್ಸೆಗಾಂವ ಗ್ರಾಮ ಪಂಚಾಯ್ತಿಯವರು ತಮ್ಮ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆಸಿ ಕರ್ನಾಟಕ ಸೇರುತ್ತೇವೆಂದು ತಾವು ಅಂಗೀಕರಿಸಿರುವ ಠರಾವು ಪತ್ರ ಸಮೇತ ಸೊಲ್ಲಾಪುರ ಜಿಲ್ಲಾಧಿಕಾರಿಗಳಿಗೆ ಕೋರಿಕೆ ಪತ್ರ ಸಲ್ಲಿಸಿದ್ದಾರೆ.

ಕಲಬುರಗಿ: ಮಹಾರಾಷ್ಟ್ರ ಗಡಿಯಲ್ಲಿ ಕರ್ನಾಟಕಕ್ಕೆ ಸೇರುವ ಕೂಗು ನಿಲ್ತಿಲ್ಲ..!

ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೂ ಏಳೂವರೆ ದಶಕಗಳು ಉರುಲಿದರೂ ನಮಗಿನ್ನೂ ಕುಡಿಯಲು ಶುದ್ಧ ನೀರಿಲ್ಲ, ನಡೆದಾಡಲು ಕುಳಿ ರಹಿತ ರಸ್ತೆ ಭಾಗ್‌ ನೀಡಿಲ್ಲ, ವಿದ್ಯುಚ್ಚಕ್ತಿ ಸವಲತ್ತೂ ಮರೀಚಿಕೆ. ಯಾವ ಪುರುಷಾರ್ಥಕ್ಕಾಗಿ ನಾವು ಮಹಾರಾಷ್ಟ್ರದ ಜೊತೆಗಿರಬೇಕು. ಕನ್ನಡ ಭಾಷಿಕರೇ ಹೆಚ್ಚಾಗಿದ್ದೇವೆಂದು ನಮ್ಮನ್ನೆಲ್ಲ ನೀವು ಕಡೆಗಣಿಸುತ್ತಿದ್ದೀರಿ, ನಮ್ಮನ್ನು ಮಲತಾಯಿ ಧೋರಣೆಯಲ್ಲಿ ನೋಡುತ್ತಿದ್ದೀರಿ ಎಂದು ತಮ್ಮ ಗೋಳು, ಯಾತನೆಗೆಲ್ಲ ಮಹಾರಾಷ್ಟ್ರ ಸರ್ಕಾರವನ್ನೇ ಹೊಣೆಯಾಗಿಸಿ ಇದೇ ಮೊದಲ ಬಾರಿಗೆ ತಾವಿರುವ ಜಿಲ್ಲೆ ಸೊಲ್ಲಾಪುರದ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದಾರೆ.

ಮೂಲ ಸವಲತ್ತುಗಳು ಮಹಾರಾಷ್ಟ್ರ ಗಡಿಯಲ್ಲಿರುವ ನಮಗೆ ಇಂದಿಗೂ ಮರೀಚಿಕೆ, ಆದರೆ ಕರುನಾಡಿನ ಗಡಿ ಹಳ್ಳಿಗಳಲ್ಲಿ ಪರವಾಗಿಲ್ಲ ಎಂಬಂತೆ ಸವಲತ್ತುಗಳು ಲಭ್ಯವಿವೆ. ನಮ್ಮನ್ನು ಮಹಾರಾಷ್ಟ್ರ ಸರ್ಕಾರ ಕಡೆಗಣಿಸುತ್ತಿದೆ ಎಂದು ಹೇಳಲು ನೂರಾರು ಕಾರಣಗಳಿವೆ. ಇವೆಲ್ಲದರಿಂದ ನಮಗೆ ನೋವಾಇದೆ. ಗಡಿಯಲ್ಲಿ ಕನ್ನಡಿಗರೇ ಹೆಚ್ಚಾಗಿರುವ ನಮ್ಮ ಭಾಗವನ್ನು ಮಹಾರಾಷ್ಟ್ರ ಅಲಕ್ಷಿಸುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ ನೀತಿ ಅನುಸರಿಸುತ್ತಿದೆ. ಇರಿಂ ನಾವು ರೋಸಿ ಹೋಗಿದ್ದೇವೆ. ಇದೀಗ ಕರ್ನಾಟಕ ಸೇರುವುದೇ ನಮಗಿರುವ ಏಕೈಕ ಮಾರ್ಗ ಅಂತ ಆಳಗೆ ಗ್ರಾಪಂ ಸರಪಂಚ್‌ ಸುಗಲಾಬಾಯಿ ಮಹಾಂತೇಶ ಹತ್ತೂರೆ ಹೇಳಿದ್ದಾರೆ. 

ಕರ್ನಾಟಕ ಹಾಗೂ ಮಹಾರಾಷ್ಟ್ರ ಸೀಮಾದಾಗ ಇರೋ ನಮ್ಮಂತಹ ನೂರಾರು ಹಳ್ಳಿಗಳಲ್ಲಿ ಕನ್ನಡ ಭಾಷಿಕರೆ ಹೆಚ್ಚು. ಇದು ಅರಿತೇ ಮಹಾರಾಷ್ಟ್ರ ಸರ್ಕಾರ ನಮ್ಮ ಭಾಗದಲ್ಲಿ ಮೂಲ ಸುವಿಧಾ ಕೊಡುತ್ತಿಲ್ಲ. ಅಭಿವೃದ್ಧಿಗೂ ಗಮನ ಹರಿಸುತ್ತಿಲ್ಲ. ಇನ್ನೆಷ್ಟುದಿನ ನಾವು ಸುಮ್ಮನಿರೋದು? ನಾವು ಕನ್ನಡಿರು, ಕರ್ನಾಟಕ ಸೇರುತ್ತೇವೆ, ಅನುಮತಿ ಕೊಡ ಎಂದು ಸೊಲ್ಲಾಪುರ ಡಿಸಿ ಯವರಿಗೆ ಪತ್ರ ಕೊಟ್ಟಿದ್ದೇವೆ. ಆಳಗೆ ಸೇರದಂತೆ 11 ಪಂಚಾಯ್ತಿಯರ ಠರಾವು ಪತ್ರಗಳನ್ನು ಜೊತೆಗೇ ಲಗತ್ತಿಸಿದ್ದೇವೆ ಅಂತ ಅಕ್ಕಲಕೋಟೆಯ ಆಳಗೆ ಗ್ರಾಪಂ ಉಪ ಸರಪಂಚ್‌ ಮಾಲನ ಕಮಲಸಾಬ್‌ ಮುತ್ತಾ ತಿಳಿಸಿದ್ದಾರೆ. 
 

Follow Us:
Download App:
  • android
  • ios