ಬೆಂಗಳೂರು(ಡಿ.06): ದಕ್ಷಿಣ ಭಾರತದಲ್ಲಿ ಬಿಜೆಪಿ ಬೆಳವಣಿಗೆಗೆ ಹೈದರಾಬಾದ್‌ ಚುನಾವಣೆ ಪೂರಕವಾಗಲಿದೆ ಎಂದು ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್‌ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಈ ಮೂಲಕ ಮುಂಬರುವ ದಿನಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತುಮಿಳುನಾಡಿನಲ್ಲೂ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಭರವಸೆಯನ್ನು ಮೂಡಿಸಿದೆ ಎಂದರು.

ಹೈದರಾಬಾದ್‌ ಪಾಲಿಕೆ ಚುನಾವಣೆ: 4 ರಿಂದ 48 ಕ್ಕೇರಿದ ಬಿಜೆಪಿ; ಕೇಸರಿ ಪಡೆ ಕಮಾಲ್ ಸೀಕ್ರೆಟ್..!

ಚುನಾವಣೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ಹೈದರಾಬಾದ್‌ನಲ್ಲಿ ಮನೆ ಮನೆಗೂ ತೆರಳಿ ಜನರ ಸಮಸ್ಯೆ ಆಲಿಸಿ, ಪರಿಹಾರ ಕಲ್ಪಿಸಲಾಯಿತು. ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ ಉತ್ತಮ ಆಡಳಿತಕ್ಕೆ ಮನಸೋತ ಅಲ್ಲಿನ ಮಂದಿ ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಕಾರಣಕರ್ತರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟದಲ್ಲಿ ಹಗಲಿರುಳು ಶ್ರಮಿಸಿದರು. ಬಿಜೆಪಿ ಪಕ್ಷದ ಮೇಲಿನ ನಂಬಿಕೆ ಹಾಗೂ ಆಡಳಿತ ಪಕ್ಷ ಟಿಆರ್‌ಎಸ್‌ ವಿರುದ್ಧದ ಅಲೆ ಜನರನ್ನು ಯೋಚನೆ ಮಾಡುವಂತೆ ಮಾಡಿದೆ ಎಂದರು.

ತೆಲಂಗಾಣದಲ್ಲಿ ಅಪ್ಪ-ಮಕ್ಕಳು ಆಡಳಿತ ನಡೆಸುವ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಈ ವೇಳೆ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮೇಲೆ ನಂಬಿಕೆ, ವಿಶ್ವಾಸ ಇರಿಸಿದ ಮಂದಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಬಾಗಿಲು ತೆರೆದಿದ್ದಾರೆ ಎಂದರು.  ನನ್ನ ಮೇಲೆ ಭರವಸೆ ಇರಿಸಿ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ನೇಮಿಸುವುದರ ಜತೆಗೆ ಗ್ರೇಟರ್‌ ಹೈದರಾಬಾದ್‌ ಚುನಾವಣೆಯ ಉಸ್ತುವಾರಿಯಾಗಿ ನೇಮಿಸಿದ್ದಕ್ಕೆ ವರಿಷ್ಠರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದರು.