Asianet Suvarna News Asianet Suvarna News

ಬಾಂಬರ್ ಆದಿತ್ಯ ಬೆಂಗಳೂರಿಗೆ, ಸೈಬರ್ ಕ್ರೈಂ ಬಗ್ಗೆ ಮತ್ತಷ್ಟು ತನಿಖೆ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇರಿಸಿದ ಆರೋಪದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ಆದಿತ್ಯ ರಾವ್‌ (37)ನ ಸೈಬರ್‌ ಅಪರಾಧದ ಬಗ್ಗೆ ಬುಧವಾರ ಪೊಲೀಸರು ಮತ್ತಷ್ಟು ತನಿಖೆ ನಡೆಸಿದ್ದಾರೆ. ಜ.30ರಂದು ಈತನನ್ನು ಬೆಂಗಳೂರಿಗೆ ಮಹಜರಿಗೆ ಕರೆದುಕೊಂಡು ಹೋಗುವ ಸಂಭವ ಇದೆ.

Bomber aditya to be shift to bangalore for more investigation
Author
Bangalore, First Published Jan 30, 2020, 8:15 AM IST

ಮಂಗಳೂರು(ಜ.30): ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇರಿಸಿದ ಆರೋಪದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ಆದಿತ್ಯ ರಾವ್‌ (37)ನ ಸೈಬರ್‌ ಅಪರಾಧದ ಬಗ್ಗೆ ಬುಧವಾರ ಪೊಲೀಸರು ಮತ್ತಷ್ಟು ತನಿಖೆ ನಡೆಸಿದ್ದಾರೆ. ಜ.30ರಂದು ಈತನನ್ನು ಬೆಂಗಳೂರಿಗೆ ಮಹಜರಿಗೆ ಕರೆದುಕೊಂಡು ಹೋಗುವ ಸಂಭವ ಇದೆ.

ಇಂಟರ್‌ನೆಟ್‌ ಬಳಸಿ ಆದಿತ್ಯ ರಾವ್‌ ನಡೆಸಿದ ಕೃತ್ಯಗಳ ಬಗ್ಗೆ ಈಗಾಗಲೇ ಎರಡು ದಿನಗಳ ಕಾಲ ಪಣಂಬೂರು ಎಸಿಪಿ ಠಾಣೆಯಲ್ಲಿ ತನಿಖಾಧಿಕಾರಿಗಳು ಮಹಜರು ನಡೆಸಿದ್ದರು. ಈಗ ಬುಧವಾರ ಮತ್ತೆ ಸೈಬರ್‌ ಅಪರಾಧ ಕುರಿತು ವಿಸ್ತೃತ ತನಿಖೆ ನಡೆಸಲಾಗಿದೆ. ಆತ ಆನ್‌ಲೈನ್‌ ಮೂಲಕ ನಡೆಸಿದ ಇನ್ನಷ್ಟುವ್ಯವಹಾರ ಹಾಗೂ ಹಳೆ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಕ್ಷ್ಯಗಳ ಮಾಹಿತಿ:

ಇದೇ ವೇಳೆ ಆರೋಪಿ ಆದಿತ್ಯ ರಾವ್‌ನನ್ನು ನೋಡಿರುವ ಹಾಗೂ ಆತನ ಬಗ್ಗೆ ತಿಳಿದಿರುವವರಿಂದ ಅಮೂಲ್ಯ ಸಾಕ್ಷ್ಯ ಸಂಗ್ರಹ ನಡೆಸಲಾಗಿದೆ. ಬುಧವಾರ ಎಸಿಪಿ ಠಾಣೆಗೆ ಬಂದು ಅನೇಕ ಮಂದಿ ಆದಿತ್ಯ ರಾವ್‌ ಚಟುವಟಿಕೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಇನ್ನೂ ಕೆಲವರು ಆದಿತ್ಯ ರಾವ್‌ ಎಲ್ಲೆಲ್ಲಿ ಸಂಚರಿಸಿದ್ದಾನೆ ಎಂಬ ಬಗ್ಗೆ ಸಾಕ್ಷ್ಯ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ಇಂದು ಆರೋಪಿ ಬೆಂಗಳೂರಿಗೆ:

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ ಬಳಿಕ ಆದಿತ್ಯ ರಾವ್‌ ಬೆಂಗಳೂರಿಗೆ ತೆರಳಿ ಅಲ್ಲಿ ಪೊಲೀಸರಿಗೆ ಶರಣಾಗಿದ್ದನು. ಅಲ್ಲಿಗೆ ತೆರಳಿ ಶರಣಾಗತಿ ವರೆಗಿನ ಎಲ್ಲ ಮಗ್ಗುಲುಗಳ ಬಗ್ಗೆ ಪೊಲೀಸರು ಆತನನ್ನು ಕರೆದುಕೊಂಡು ಹೋಗಿ ಮಹಜರು ನಡೆಸಲಿದ್ದಾರೆ. ಜ.30 ಮತ್ತು 31ರಂದು ಬೆಂಗಳೂರಿನಲ್ಲಿ ಮಹಜರು ನಡೆಸಿ ಅನಿವಾರ್ಯವಾದರೆ, ಚೆನ್ನೈಗೆ ಕರೆದುಕೊಂಡು ಹೋಗಲಿದ್ದಾರೆ. ಫೆ.1ರಂದು ಮತ್ತೆ ಆರೋಪಿ ಆದಿತ್ಯ ರಾವ್‌ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಮತ್ತೆ ತನಿಖೆಗೆ ಅವಶ್ಯವಾದರೆ, ಹೆಚ್ಚುವರಿ ದಿನಗಳ ಪೊಲೀಸ್‌ ಕಸ್ಟಡಿ ಕೋರಲು ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ:

ಆರೋಪಿ ಆದಿತ್ಯ ರಾವ್‌ ಬಾಂಬ್‌ ಇರಿಸಿದ ಬಳಿಕ ಬಾಂಬ್‌ ಪತ್ತೆಯಾಗಿ ಆತ ಬಂಧನಕ್ಕೊಳಗದ ವರೆಗಿನ ಎಲ್ಲ ಆಗುಹೋಗುಗಳ ಸಾಕ್ಷ್ಯಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.

ನೀರು ಗಂಟಲಲ್ಲಿ ಸಿಲುಕಿ ಕಾರ್ಮಿಕ ಸಾವು..!

ಆತ ಆನ್‌ಲೈನ್‌ನಲ್ಲಿ ತರಿಸಿಕೊಂಡ ಪುಡಿ, ಸ್ಫೋಟಕ್ಕೆ ಬಳಸುವ ಕಚ್ಚಾ ಸಾಮಗ್ರಿಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ಆತನ ಕರೆ ಮಾಡಿದ ಬಗ್ಗೆ ಧ್ವನಿ ಮುದ್ರಿಕೆಯನ್ನು ಕೂಡ ಕಳುಹಿಸಬೇಕಾಗುತ್ತದೆ. ಆದ್ದರಿಂದ ಈ ಎಲ್ಲ ವರದಿಗಳು ಬರಬೇಕಾದರೆ ಕನಿಷ್ಠ ಒಂದು ತಿಂಗಳು ಬೇಕಾಗಬಹುದು ಎಂದು ಪೊಲೀಸ್‌ ಮೂಲಗಳು ತಿಳಿಸುತ್ತವೆ.

Follow Us:
Download App:
  • android
  • ios