ಮಂಗಳೂರು(ಜ.22): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಸುದ್ದಿಯ ಬಳಿಕ ಜಾಲತಾಣಗಳಲ್ಲಿ ಇದೇ ವಿಚಾರಕ್ಕೆ ಸಂಬಂಧಪಟ್ಟಫೇಕ್‌ ನ್ಯೂಸ್‌ಗಳ ಹವಾ ಜೋರಾಗಿತ್ತು. ವಾಟ್ಸಪ್‌, ಫೇಸ್‌ಬುಕ್‌ಗಳಲ್ಲಿ ನೆಟ್ಟಿಗರು ಸತ್ಯಾಸತ್ಯತೆ ಅರಿಯದೆ ಫೇಕ್‌ ನ್ಯೂಸ್‌ಗಳನ್ನು ಹರಿಯಬಿಡುತ್ತಿದ್ದುದರಿಂದ ಗೊಂದಲಕ್ಕೂ ಕಾರಣವಾಗಿತ್ತು.

‘ಬಾಂಬ್‌ ಇಟ್ಟವ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ, ಈ ಶಂಕಿತ ವ್ಯಕ್ತಿಯ ಬಂಧನ ಆಗುವವರೆಗೆ ಶೇರ್‌ ಮಾಡಿ’ ಎನ್ನುವ ಒಕ್ಕಣೆಯೊಂದಿಗೆ ವ್ಯಕ್ತಿಯೊಬ್ಬರ ಫೋಟೊ ಭಾರೀ ಮಟ್ಟದಲ್ಲಿ ಹರಿದಾಡಿ ವೈರಲ್‌ ಆಗಿತ್ತು. ಇದು ಫೇಕ್‌ ನ್ಯೂಸ್‌ ಎನ್ನುವುದು ಗೊತ್ತಾದ ಬಳಿಕವೂ ಮಂಗಳವಾರ ಸಂಜೆಯವರೆಗೂ ಶೇರ್‌ ಮಾಡುವುದನ್ನು ಮಾತ್ರ ನೆಟ್ಟಿಗರು ಬಿಡಲಿಲ್ಲ.

ಆನ್‌ಲೈನ್‌ನಲ್ಲಿ ವೈಟ್‌ ಸಿಮೆಂಟ್ ತರಿಸಿಕೊಂಡಿದ್ದ, ಹೋಟೆಲ್‌ನಲ್ಲೇ ತಯಾರಿಸಿದ್ನಾ ಬಾಂಬ್..?

ಸೋಮವಾರ ಮಧ್ಯಾಹ್ನ ವೇಳೆಗೆ ‘ಇನ್ನೊಂದು ಬಾಂಬ್‌ ಇಂಡಿಗೋ ವಿಮಾನದಲ್ಲಿದೆ’ ಎಂಬ ಫೇಕ್‌ ನ್ಯೂಸ್‌ ದೊಡ್ಡ ಮಟ್ಟದಲ್ಲಿ ಹರಡಿತ್ತು. ಹುಸಿ ಕರೆ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ವಿಮಾನವನ್ನು ಸಂಪೂರ್ಣ ಚೆಕ್‌ ಮಾಡಿ ರಾತ್ರಿ ವೇಳೆಗೆ ವಿಮಾನ ಹಾರಾಟ ನಡೆಸಿದರೂ ಈ ಫೇಕ್‌ ನ್ಯೂಸ್‌ ಶೇರ್‌ ಆಗುವುದು ತಪ್ಪಲಿಲ್ಲ.

ಇನ್ನೊಂದೆಡೆ, ಬಾಂಬ್‌ ಇಟ್ಟದುಷ್ಕರ್ಮಿ ವಿಮಾನ ನಿಲ್ದಾಣದ ಒಳಗೆ ಹೋಗಿ ಬ್ಯಾಗ್‌ ಚೆಕ್ಕಿಂಗ್‌ ಕೌಂಟರ್‌ವರೆಗೂ ತೆರಳಿ ಪರಿಶೀಲಿಸಿದ್ದ ಎನ್ನುವ ಮಾಹಿತಿ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಅದು ಕೂಡ ಫೇಕ್‌ ನ್ಯೂಸ್‌ ಎನ್ನುವುದು ಬಳಿಕ ಗೊತ್ತಾಯಿತು.