ಗ್ರಾಹಕ ಸೇವಾ ಕೇಂದ್ರದಲ್ಲಿ 60 ದಿನಗಳ ಒಳಗೆ ಪುರಾವೆ ತೋರಿಸಿ| ಟಾಪ್ ಅಪ್ ಮಾಡಿದ 7 ದಿನದೊಳಗೆ ಮೆಟ್ರೋದಲ್ಲಿ| ಪ್ರಯಾಣಿಸದಿದ್ದರೆ ಹಣ ರದ್ದು ಹಿನ್ನೆಲೆ| ಮೆಟ್ರೋ ನಿಗಮದಿಂದ ಮತ್ತೊಂದು ಅವಕಾಶ|
ಬೆಂಗಳೂರು(ಅ.16): ಟಾಪ್-ಅಪ್ ಮಾಡಿದ ಏಳು ದಿನಗಳ ಒಳಗೆ ಮೆಟ್ರೋ ನಿಲ್ದಾಣಗಳ ಸ್ವಯಂ-ಚಾಲಿತ ಪ್ರವೇಶ ದ್ವಾರಗಳಲ್ಲಿ ಸ್ಮಾರ್ಟ್ ಕಾರ್ಡುಗಳನ್ನು ಪ್ರಸ್ತುತ ಪಡಿಸದವರು ಅಗತ್ಯ ಪುರಾವೆ ತೋರಿಸಿ 60 ದಿನಗಳಲ್ಲಿ ಪುನಃ ಟಾಪ್-ಅಪ್ ಮೊತ್ತವನ್ನು ತಮ್ಮ ಸ್ಮಾರ್ಟ್‌ಕಾರ್ಡ್‌ಗೆ ವರ್ಗಾಯಿಸಿಕೊಳ್ಳಲು ಬಿಎಂಆರ್‌ಸಿಎಲ್ ಅವಕಾಶ ಕಲ್ಪಿಸಿದೆ.
ಈ ಹಿಂದೆ ಟಾಪ್‌ಅಪ್ ಮಾಡಿದ ಹೊಸ ಸ್ಮಾರ್ಟ್ ಕಾರ್ಡ್‌ಗಳನ್ನು ಪ್ರಯಾಣಿಕರು 7 ದಿನಗಳ ಒಳಗಾಗಿ ಯಾವುದೇ ಮೆಟ್ರೋ ನಿಲ್ದಾಣದ ಸ್ವಯಂಚಾಲಿತ ಪ್ರವೇಶ ದ್ವಾರಗಳಲ್ಲಿ ಪ್ರಸ್ತುತಪಡಿಸಬೇಕಿತ್ತು. ಇಲ್ಲದಿದ್ದರೆ ಟಾಪ್-ಅಪ್ ಮೊತ್ತವು ರದ್ದಾಗುತ್ತಿತ್ತು. ಇದೀಗ ಪ್ರಯಾಣಿಕರ ಆತಂಕ ನಿವಾರಿಸಿರುವ ನಮ್ಮ ಮೆಟ್ರೋ ನಿಗಮ ನಿಗದಿತ ಏಳು ದಿನಗಳಲ್ಲಿ ಟಾಪ್‌ಅಪ್ ಮಾಡಿದ ಸ್ಮಾರ್ಟ್ ಕಾರ್ಡ್‌ಗಳನ್ನು ಪ್ರಯಾಣಿಕರು ಪ್ರಸ್ತುತ ಪಡಿಸದಿದ್ದಲ್ಲಿ 60 ದಿನಗಳ ಒಳಗಾಗಿ ಟಾಪ್-ಅಪ್ ಮಾಡಿದ ಮೊತ್ತದ ಕುರಿತು ಅಗತ್ಯ ಪುರಾವೆಯನ್ನು ಮೆಟ್ರೋ ನಿಲ್ದಾಣದ ಗ್ರಾಹಕ ಸೇವಾ ಕೇಂದ್ರಕ್ಕೆ ನೀಡಿದರೆ ಟಾಪ್-ಅಪ್ ಮೊತ್ತವನ್ನು ಕಾರ್ಡ್‌ಗೆ ಜಮಾ ಮಾಡುವುದಾಗಿ ತಿಳಿಸಿದೆ.
ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್‌ನಿಂದ 65 ಕೋಟಿ ದೇಣಿಗೆ
ಟಾಪ್ ಅಪ್ ಮಾಡಿದ ದಿನಾಂಕದಿಂದ 60 ದಿನಗಳೊಳಗಾಗಿ ಸ್ಮಾರ್ಟ್ ಕಾರ್ಡ್‌ಗಳನ್ನು ಯಾವುದೇ ಮೀಟರ್ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಪ್ರಸ್ತುತ ಪಡಿಸದಿದ್ದಲ್ಲಿ ಮಾಡಿದಂತ ವಹಿವಾಟುಗಳು ರದ್ದಾಗಲಿವೆ. ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಬಿಎಂಆರ್‌ಸಿಎಲ್ ವೆಬ್‌ಸೈಟ್ ಅಪ್ಲಿಕೇಶನ್ ಅಥವಾ ಕರ್ನಾಟಕ ಮೊಬೈಲ್ ಒನ್ ಮೂಲಕ ರೀ-ಚಾಜ್‌ರ್ ಮಾಡಿಸಿದ 7 ದಿನಗಳಲ್ಲಿ ತಮ್ಮ ಕಾರ್ಡ್‌ಗಳನ್ನು ಮೆಟ್ರೋ ನಿಲ್ದಾಣಗಳಲ್ಲಿ ಪ್ರಸ್ತುತಪಡಿಸಬೇಕು. ಇದರಿಂದ ಟಾಪ್ ಅಪ್ ಪಾವತಿ ಮತ್ತು ಮೆಟ್ರೋ ಪ್ರಯಾಣವು ಸಂಪರ್ಕ ರಹಿತವಾಗುತ್ತದೆ.
ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಪರಿಸ್ಪರ ಸಂಪರ್ಕವನ್ನು ತಪ್ಪಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಸಂಪರ್ಕ ರಹಿತ ಪ್ರಯಾಣಕ್ಕಾಗಿ ಸ್ಮಾರ್ಟ್‌ಕಾರ್ಡ್ ಬಳಕೆಗೆ ಬಿಎಂಆರ್‌ಸಿಎಲ್ ಆದ್ಯತೆ ನೀಡಿದೆ. ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಮೆಟ್ರೋ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸಲಾಗುತ್ತಿದೆ. ಹಾಗಾಗಿ ಪ್ರತಿ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಅನಿವಾರ್ಯವಾಗಿದೆ.
