ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್‌ನಿಂದ 65 ಕೋಟಿ ದೇಣಿಗೆ
ಹೆಬ್ಬಗೋಡಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಅನುದಾನ ನೀಡಿದ ಬಯೋಕಾನ್ ಫೌಂಡೇಷನ್ ಸಂಸ್ಥೆ| ಅನುದಾನದಲ್ಲಿ ಹೆಬ್ಬಗೋಡಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದಕ್ಕಾಗಿ ಹೊಸೂರು ರಸ್ತೆಯ ನಿಲ್ದಾಣದ ಮತ್ತೊಂದು ಬದಿಯಿಂದ ಮೇಲ್ಸೇತುವೆ ನಿರ್ಮಾಣ| ನಿಲ್ದಾಣದ ಸುತ್ತಲಿನ 500 ಮೀ. ಪ್ರದೇಶದಲ್ಲಿ ಪಾದಚಾರಿ ಮಾರ್ಗ ಸಹ ಉನ್ನತೀಕರಣ|
ಬೆಂಗಳೂರು(ಅ.09): ಬಯೋಕಾನ್ ಫೌಂಡೇಷನ್ ಸಂಸ್ಥೆ ತನ್ನ ಸಾಂಸ್ಥಿಕ ಹೊಣೆಗಾರಿಕಾ ನಿಧಿ (ಸಿಎಸ್‌ಆರ್) ಅಡಿ ‘ಹೆಬ್ಬಗೋಡಿ ಮೆಟ್ರೋ ರೈಲು ನಿಲ್ದಾಣ’ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) 65 ಕೋಟಿ ರು. ದೇಣಿಗೆ ನೀಡಿದೆ.
ಮೆಟ್ರೋ 2ನೇ ಹಂತದಲ್ಲಿ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ (ರೀಚ್-5) ಮಾರ್ಗದಲ್ಲಿರುವ ಹೆಬ್ಬಗೋಡಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಅನುದಾನ ನೀಡಲಾಗಿದೆ. ಈ ಸಂಬಂಧ ಗುರುವಾರ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಬಯೋಕಾನ್ ಕೊಡುಗೆಯನ್ನು ಗುರುತಿಸಿ ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ ‘ಬಯೋಕಾನ್ ಹೆಬ್ಬಗೋಡಿ ಮೆಟ್ರೋ ನಿಲ್ದಾಣ’ ಎಂದು ನಾಮಕರಣ ಮಾಡುವಂತೆಯೂ ರಾಜ್ಯ ಸರ್ಕಾರವನ್ನು ಕೋರಿದೆ. ಈ ಅನುದಾನದಲ್ಲಿ ಹೆಬ್ಬಗೋಡಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದಕ್ಕಾಗಿ ಹೊಸೂರು ರಸ್ತೆಯ ನಿಲ್ದಾಣದ ಮತ್ತೊಂದು ಬದಿಯಿಂದ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ನಿಲ್ದಾಣದ ಸುತ್ತಲಿನ 500 ಮೀ. ಪ್ರದೇಶದಲ್ಲಿ ಪಾದಚಾರಿ ಮಾರ್ಗಗಳನ್ನು ಸಹ ಉನ್ನತೀಕರಿಸಲಾಗುತ್ತಿದೆ.
ಬಯೋಕಾನ್ ಕೊರೋನಾ ಔಷಧಕ್ಕೆ 32 ಸಾವಿರ, ಒಬ್ಬ ರೋಗಿಗೆ 4 ಇಂಜೆಕ್ಷನ್
ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ಮಾತನಾಡಿದ ಕಿರಣ್ ಮಜುಂದಾರ್ ಶಾ, ಬೆಂಗಳೂರಿನ ನಾಗರಿಕರಿಗೆ ಸಂಚರಿಸಲು ಪರ್ಯಾಯ ಮಾರ್ಗಗಳನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬಯೋಕಾನ್ ಫೌಂಡೇಷನ್ ಆರೋಗ್ಯ, ಶಿಕ್ಷಣ, ನೀರು ಮತ್ತು ನೈರ್ಮಲ್ಯ ಸೇರಿದಂತೆ ಮೂಲ ಸೌಕರ್ಯಗಳನ್ನು ನಿರ್ಮಿಸಲು ಈಗಾಗಲೇ ತೊಡಗಿಸಿಕೊಂಡಿದೆ. ಇದಕ್ಕೆ ನಮ್ಮ ಮೆಟ್ರೋ ಹೊಸ ಸೇರ್ಪಡೆಯಾಗಿದೆ ಎಂದರು.
‘ಹೆಬ್ಬಗೋಡಿ ಮೆಟ್ರೋ ರೈಲು ನಿಲ್ದಾಣ’ ನಿರ್ಮಾಣಕ್ಕಾಗಿ ದೇಣಿಗೆ ನೀಡುವ ಸಂಬಂಧ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದರು.
ಅಜಯ್ ಸೇಠ್ ಮಾತನಾಡಿ, ಮುಂದಿನ ಐದು ವರ್ಷಗಳಲ್ಲಿ 128 ಕಿ.ಮೀ. ಮೆಟ್ರೋ ಮಾರ್ಗವನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಗುರಿ ಹೊಂದಿದೆ. ಇದಕ್ಕೆ ಬಯೋಕಾನ್ ಸಂಸ್ಥೆಯು ಕೈಜೋಡಿಸಿರುವುದು ಸಂತೋಷದ ವಿಷಯವಾಗಿದೆ ಎಂದು ಶ್ಲಾಘಿಸಿದರು. ಹೆಬ್ಬಗೋಡಿ ಮೆಟ್ರೋ ನಿಲ್ದಾಣವು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ. ಹೊಸ ಮಾರ್ಗವಾಗಿದೆ. 5744 ಕೋಟಿ ವೆಚ್ಚದಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.