ಬೆಂಗಳೂರು ಮೆಟ್ರೋ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಸುಮಾರು 11,000 ಮರಗಳನ್ನು ತೆರವುಗೊಳಿಸುವ ಸಾಧ್ಯತೆ ಇದ್ದು, ಈ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ. ಪರಿಸರವಾದಿಗಳು ಮರಗಳ ಮರುಜೋಡಣೆಗೆ ಒತ್ತು ನೀಡಿದರೆ, ನಾಗರಿಕರು ಸಾರಿಗೆ ಅಗತ್ಯವನ್ನು ಒಪ್ಪಿಕೊಂಡಿದ್ದಾರೆ.
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ತನ್ನ ಮೆಟ್ರೋ ಯೋಜನೆಯ ಮೂರನೇ ಹಂತವನ್ನು ಆರಂಭಿಸಲು ಸಜ್ಜಾಗಿದ್ದು, ಯೋಜನೆಗೆ ಅಡ್ಡಿಯಾಗುವ ಮರಗಳನ್ನು ಉಳಿಸುವ ಕಾರ್ಯದಲ್ಲಿ ಸುಮಾರು 11,000ಕ್ಕೂ ಹೆಚ್ಚು ಮರಗಳ ವಿಚಾರದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಕಲೆ ಹಾಕಲು ಸೋಮವಾರದಿಂದ ಸಾರ್ವಜನಿಕ ಸಮಾಲೋಚನೆ ಆರಂಭಿಸಿದೆ. ಇದರ ಬೆನ್ನಲ್ಲೇ ಡಿಪಿಆರ್‌ನ ಅಂಕಿ ಅಂಶಗಳ ಬಗ್ಗೆ ಅನುಮಾನ ಕೂಡ ವ್ಯಕ್ತವಾಗಿದೆ. ನಿಜವಾಗೂ ಅಷ್ಟೊಂದು ಮರಗಳು ಇವೆಯೇ ಅಥವಾ ಬೇಕಂತಲೆ ಸುಳ್ಳು ವರದಿ ನೀಡಲಾಗುತ್ತಿದೆಯೇ ಎಂದು ಪ್ರಶ್ನೆ ಎತ್ತಲಾಗಿದೆ. ಹೀಗಾಗಿ ಪರಿಸರದ ಅಂದ, ಮರಗಳನ್ನು ಉಳಿಸಲು ಯಾವ ಕ್ರಮ ಮುಖ್ಯ ಎಂಬ ಬಗ್ಗೆ ಚರ್ಚೆ ಕೂಡ ನಡೆಯಲಿದೆ.
11,137 ಮರಗಳ ಮೇಲೆ ಪ್ರಭಾವ ಸಾಧ್ಯತೆ
ವಿಸ್ತೃತ ಯೋಜನಾ ವರದಿ (ಡಿಟಿಎಫ್) ಪ್ರಕಾರ, 44.6 ಕಿಲೋಮೀಟರ್ ಉದ್ದದ ಈ ಯೋಜನೆಯು ಸುಮಾರು 11,137 ಮರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಈ ಅಂಕಿ ಅಂಶಗಳು ಇನ್ನೂ ಅಂತಿಮಗೊಳ್ಳಬೇಕಾದ ಕಾರ್ಯಸಾಧ್ಯತಾ ಅಧ್ಯಯನಗಳು ಮತ್ತು ತಾಂತ್ರಿಕ ಮೌಲ್ಯಮಾಪನಗಳ ಮೇಲೆ ಆಧಾರಿತವಾಗಿವೆ. ಬಿಎಂಆರ್‌ಸಿಎಲ್ ತಿಳಿಸಿದಂತೆ, ಈ ಸಂಖ್ಯೆಗಳಲ್ಲಿ ಸ್ಥಳಾಂತರಿಸಬಹುದಾದ ಮತ್ತು ಕತ್ತರಿಸಬಹುದಾದ ಮರಗಳ ಉಲ್ಲೇಖವಿದೆ.
ಸಮಾಲೋಚನೆಗೆ ಸಾರ್ವಜನಿಕ ಆಹ್ವಾನ
ಭಾನುವಾರ ಹೊರಡಿಸಿದ ಸಾರ್ವಜನಿಕ ಸೂಚನೆಯ ಪ್ರಕಾರ, ಪರಿಸರ ತಜ್ಞರು, ನಾಗರಿಕ ಸಂಘಟನೆಗಳು ಹಾಗೂ ಸಂಬಂಧಿತ ಪಾಲುದಾರರಿಗೆ ಮೂರು ದಿನಗಳ ಕಾಲ ನಡೆಯುವ ಸಮಾಲೋಚನೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ. ಈ ಚರ್ಚೆಗಳು ಎರಡು ಪ್ರಸ್ತಾವಿತ ಕಾರಿಡಾರ್‌ಗಳ ಕುರಿತಾದವಾಗಿದ್ದು, ಬಿಎಂಆರ್‌ಸಿಎಲ್‌ನ ಜನರಲ್ ಮ್ಯಾನೇಜರ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿವೆ.
ಮರುಜೋಡನೆಗೆ ಪರಿಸರವಾದಿಗಳು
ನಗರದ ಪರಿಸರ ಹಿತರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿರುವ ಅಲೆಕ್ಸಾಂಡರ್ ಜೇಮ್ಸ್ ಅವರು, “ಇಷ್ಟು ಸಂಖ್ಯೆಯ ಮರಗಳನ್ನು ಕಡಿಯುವುದನ್ನು ನಾವು ಅನುಮತಿಸಬಾರದು. ಅಗತ್ಯವಿದ್ದರೆ ಯೋಜನೆಯ ವಿನ್ಯಾಸವನ್ನು ಮರುಪರಿಶೀಲಿಸಬಹುದು. ಹಿಂದೆಯೂ ಹಲಸೂರಿನಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು, ಅದನ್ನು ಸುಧಾರಿಸಲಾಗಿತ್ತು,” ಎಂದು ಅಭಿಪ್ರಾಯಪಟ್ಟರು.
ಸಾರಿಗೆ ವೃದ್ಧಿಯ ಅಗತ್ಯವನ್ನು ಒಪ್ಪಿದ ನಾಗರಿಕರು
ಇದೇ ವೇಳೆ, ಸಾರ್ವಜನಿಕ ಸಾರಿಗೆಯ ಅಗತ್ಯತೆಯನ್ನು ಒಪ್ಪಿಕೊಂಡ ನಾಗರಿಕರು, ಪರಿಸರಕ್ಕೆ ತಕ್ಕಷ್ಟು ಪ್ರಾಮುಖ್ಯತೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಸಿಟಿಜನ್ಸ್ ಫಾರ್ ಸಿಟಿಜನ್ಸ್ (C4C) ಸಂಸ್ಥೆಯ ಸ್ಥಾಪಕ ರಾಜ್‌ಕುಮಾರ್ ದುಗರ್ ಅವರು, ಮರಗಳನ್ನು ಉಳಿಸಲು ಯೋಜನೆಗೆ ಸ್ವಲ್ಪ ಬದಲಾವಣೆ ಬೇಕಾದರೂ ಅದನ್ನು ಮಾಡುವುದು ಯೋಗ್ಯ. ಇನ್ನೊಂದೆಡೆ, ಮೆಟ್ರೋ ಯೋಜನೆ ಸುರಂಗ ಮಾರ್ಗಗಳಿಗೆ ಹೋಲಿಸಿದರೆ ಉತ್ತಮ, ಏಕೆಂದರೆ ಇದರ ಪರಿಣಾಮಕಾರಿ ಪರಿಸರ ಪ್ರಯೋಜನಗಳಿವೆ ಎಂದರು.
ಮರಗಳ ಅಂಕಿ ಅಂಶದ ಬಗ್ಗೆ ಅನುಮಾನ
ದುಗರ್ ಅವರು ಡಿಪಿಆರ್‌ನ ಅಂಕಿ ಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ, 44 ಕಿ.ಮೀ ಉದ್ದದ ಮಾರ್ಗದಲ್ಲಿ 11,000 ಮರಗಳು ಎಂದರೆ ಪ್ರತಿ ಕಿಲೋಮೀಟರ್‌ಗೆ 250 ಮರಗಳು ಬರುತ್ತವೆ. ನನಗೆ ಆ ಪ್ರದೇಶಗಳಲ್ಲಿ ಅಷ್ಟು ಮರಗಳ ಇಲ್ಲವೆಂಬ ಅನುಮಾನವಿದೆ. ಬಿಎಂಆರ್‌ಸಿಎಲ್ ಸ್ಪಷ್ಟ ಸಮೀಕ್ಷೆ ನಡೆಸಿ ನಿಖರವಾದ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹಂತ-3 ಯೋಜನೆಯ ಮಾರ್ಗದ ವಿವರ
ಮೆಟ್ರೋ ಹಂತ-3 ಸಂಪೂರ್ಣವಾಗಿ ಎತ್ತರದಲ್ಲಿದ್ದು, ನಗರದ ಪಶ್ಚಿಮ ಭಾಗದ ಜನದಟ್ಟಣೆಯ ಪ್ರದೇಶಗಳನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಮೆಟ್ರೋ ಜಾಲಕ್ಕೆ ಸಂಪರ್ಕಿಸಲಿದೆ.
ಕಾರಿಡಾರ್-I: ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.1 ಕಿ.ಮೀ.
ಕಾರಿಡಾರ್-II: ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿ.ಮೀ.
ಹೆಚ್ಚಿನ ಮಾಹಿತಿಗಾಗಿ ಅಥವಾ ಭಾಗವಹಿಸಲು ಸಾರ್ವಜನಿಕರು ಬಿಎಂಆರ್‌ಸಿಎಲ್ ವೆಬ್‌ಸೈಟ್ ಅಥವಾ ಸಂಬಂಧಿತ ಕಚೇರಿಯನ್ನು ಸಂಪರ್ಕಿಸಬಹುದು.
