25 ಕೋಟಿ ವೆಚ್ಚದಲ್ಲಿ ಮಾಲೂರು ಅಭಿವೃದ್ಧಿಗೆ ನೀಲಿನಕ್ಷೆ: ಶಾಸಕ ನಂಜೇಗೌಡ
ಮಾಲೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 25 ಕೋಟಿ ರು.ಗಳಲ್ಲಿ ಪಟ್ಟಣದ ದೊಡ್ಡಕೆರೆ ಸೇರಿದಂತೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ನೀಲ ನಕ್ಷೆ ಸಿದ್ಧಪಡಿಸುತ್ತಿರುವುದಾಗಿ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಮಾಲೂರು (ಜೂ.15): ಮಾಲೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 25 ಕೋಟಿ ರು.ಗಳಲ್ಲಿ ಪಟ್ಟಣದ ದೊಡ್ಡಕೆರೆ ಸೇರಿದಂತೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ನೀಲ ನಕ್ಷೆ ಸಿದ್ಧಪಡಿಸುತ್ತಿರುವುದಾಗಿ ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಪಟ್ಟಣದ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಪುರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೂಡನೆ ಪಟ್ಟಣದ ಅಭಿವೃದ್ಧಿಗಾಗಿ ನಡೆಸಿದ ಸಭೆಯಲ್ಲಿ ಮಾತನಾಡಿದ ಶಾಸಕರು, ಈ ಬಾರಿ ನಮ್ಮದೇ ಸರ್ಕಾರ ಬಂದಿರುವುದರಿಂದ ಜನತೆಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ. ಮುಂದಿನ ಸಂಪುಟ ಸಭೆಯಲ್ಲೇ ಪಟ್ಟಣದ ಅಭಿವೃದ್ಧಿಗಾಗಿ 50 ಕೋಟಿ ರು.ಗಳ ಮಂಜೂರಾತಿ ಸಿಗಲಿದೆ ಎಂದರು.
ದೊಡ್ಡಕೆರೆ ಅಭಿವೃದ್ಧಿಗೆ ಕ್ರಮ: ಇದಲ್ಲದೇ ಮಾಲೂರು ಪ್ರಾಧಿಕಾರದಲ್ಲಿ ಪಟ್ಟಣದ ಅಭಿವೃದ್ಧಿಗಾಗಿ 25 ಕೋಟಿ ರು.ಗಳನ್ನು ಮೀಸಲಿಡಲಾಗಿದ್ದು, ಹಣವನ್ನು ಸದುಪಯೋಗ ಪಡಿಸಿಕೊಳ್ಳಲು ನೀಲಿ ನಕ್ಷೆ ತಯಾರು ಮಾಡುವ ಸಲುವಾಗಿ ಈ ಸಭೆ ಆಯೋಜಿಸಲಾಗಿದೆ. ಈ ಹಿಂದೆ ಪ್ರಾಧಿಕಾರವು 9.5 ಕೋಟಿ ರು.ಗಳ ವೆಚ್ಚದಲ್ಲಿ ದೊಡ್ಡ ಕೆರೆ ಅಭಿವೃದ್ಧಿಪಡಿಸಲು ತಯಾರಿಸಿದ ಯೋಜನೆಯ ಕಾಮಗಾರಿ ರದ್ದು ಪಡಿಸಲಾಗಿದ್ದು, ಹೆಚ್ಚುವರಿಯಾಗಿ ಇನ್ನಷ್ಟು ಹಣ ಮೀಸಲಿಟ್ಟು ದೊಡ್ಡಕೆರೆಯನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಿ: ಶಾಸಕ ಗಣೇಶ್ ಪ್ರಸಾದ್
ಪಟ್ಟಣದಲ್ಲಿರುವ ಮುಖ್ಯ ವೃತ್ತಗಳನ್ನು ಅಭಿವೃದ್ಧಿ ಪಡಿಸಲು 6 ಕೋಟಿ ಮೀಸಲಿಡುವ ಜತೆಯಲ್ಲಿ ಪಟ್ಟಣದ ಕೊಳಚೆ ಪ್ರದೇಶದ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಇದಕ್ಕೆ ಸರ್ಕಾರದ ಮಂಜೂರಾತಿ ಪಡೆದು ಇನ್ನೆರಡು ಮೂರು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ದೇವನಹಳ್ಳಿ ಯಿಂದ ತಮಿಳು ನಾಡಿನ ಹೊಸೂರು ಗಡಿ ಮುಟ್ಟುವ 123 ಕಿ.ಮೀ. ಉದ್ದದ 6 ಪಥದ ರಸ್ತೆ ನಿರ್ಮಾಣಕ್ಕಾಗಿ ಸರ್ಕಾರದ 1823 ಕೋಟಿ ರು.ಗಳ ಯೋಜನೆಗೆ ಸರ್ಕಾರವು ಇದೇ ವಾರದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಿದ್ದು,ಪಟ್ಟಣ ಹಾಗೂ ಪಟ್ಟಣದ ರೈಲ್ವೇ ಸೇತುವೆ ಸಹ ಆರು ಪಥದ ರಸ್ತೆಗಳಾಗಿ ಮಾರ್ಪಡಲಿದೆ ಎಂದರು.
ಮಾಲೂರು ಅಭಿವೃದ್ಧಿ ಪ್ರಾಧಿಕಾರವು ಪಟ್ಟಣದ ಹೂರವಲಯದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಮಾರ್ಗದ ನಕ್ಷೆ ಸಿದ್ಧಪಡಿಸಿದೆ. ಅದರಲ್ಲಿ ಮಾರ್ಗ ಗುರ್ತಿಸುವಿಕೆಯಲ್ಲಿ ತಪ್ಪಾಗಿದ್ದು, ಅದನ್ನು ಈ ವಾರದಲ್ಲೇ ಪುರಸಭೆ, ಲೋಕೋಪಯೋಗಿ ಅಧಿಕಾರಿಗಳೂಡನೆ ಸಭೆ ನಡೆಸಿ ಸರಿಪಡಿಸಲಾಗುವುದು. ನಮ್ಮ ಸರ್ಕಾರ ನೀಡಿದ್ದ ಐದು ಗ್ಯಾರಂಟಿಯಲ್ಲಿ ಶಕ್ತಿ ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದು ಸಂತೋಷ ವ್ಯಕ್ತ ಪಡಿಸಿದ ಶಾಸಕರು ಉಳಿದ ನಾಲ್ಕು ಗ್ಯಾರಂಟಿಗಳು ಅರ್ಹರಿಗೆ ಸಿಗುವ ರೀತಿಯಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.
ಟೋಲ್ ದರ ಏರಿಕೆ ಅನ್ಯಾಯದ ಪರಮಾವಧಿ: ಎಚ್.ಡಿ.ಕುಮಾರಸ್ವಾಮಿ
ಸಭೆಯಲ್ಲಿ ಕೋಲಾರ ಉಪವಿಭಾಗೀಯ ಅಧಿಕಾರಿ ವೆಂಕಟಲಕ್ಷ್ಮೇ, ಪ್ರಾಧಿಕಾರದ ಕಾರ‍್ಯದರ್ಶಿ ಕೃಷ್ಣಪ್ಪ ,ಲೋಕೋಪಯೋಗಿ ಇಂಜಿನಿಯರ್ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆಯ ಹರಿಕೃಷ್ಣ,ಪುರಸಭೆ ಮುಖ್ಯಾಧಿಕಾರಿ ಪ್ರದೀಪ್, ಪ್ರಾಧಿಕಾರದ ಮಾಜಿ ಸದಸ್ಯ ಇಂತಿಯಾಜ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಾಕೀರ್ ಖಾನ್, ಶಾಸಕರ ಅಪ್ತ ಹರೀಶ್ ಗೌಡ ಇನ್ನಿತರರು ಇದ್ದರು.