Asianet Suvarna News Asianet Suvarna News

ಕೊಪ್ಪಳ: ಶ್ರೀಗವಿಸಿದ್ಧೇಶ ತಾತನಿಗೆ ಭಕ್ತರಿಂದ ರಕ್ತದ ತುಲಾಭಾರ

ದಾಖಲೆ ರಕ್ತದಾನಕ್ಕೆ ಅರಳಿಹಳ್ಳಿ ಸಜ್ಜು| ತಮ್ಮ ಜನ್ಮದಿನ ಅರ್ಥಪೂರ್ಣವಷ್ಟೇ ಅಲ್ಲ, ಜೀವಪರ ಆಚರಣೆಗೆ ಶ್ರೀಗಳ ಸಂಕಲ್ಪ | ಅರಳಿಹಳ್ಳಿಯಲ್ಲಿ ಇಂದು ದಾಖಲೆ ರಕ್ತದಾನ| ಗವಿಸಿದ್ಧೇಶ ತಾತನ 51ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾದ ಭಕ್ತರು|

Blood Donation Camp Will be held at Aralihalli in Koppal
Author
Bengaluru, First Published Dec 27, 2019, 7:38 AM IST

ಸೋಮರಡ್ಡಿ ಅಳವಂಡಿ 

ಕೊಪ್ಪಳ[ಡಿ.27]: ಸ್ವಾಮೀಜಿಗಳು ಜನ್ಮದಿನ ಆಚರಿಸಿಕೊಳ್ಳುವುದು ಅಪರೂಪ. ಮಾಡಿಕೊಂಡರು ಸರಳ. ಆದರೆ ಕನಕಗಿರಿ ತಾಲೂಕಿನ ಅರಳಿಹಳ್ಳಿಯ ಶ್ರೀಗವಿಸಿದ್ದೇಶ ತಾತ ಮಾತ್ರ ತಮ್ಮ ಜನ್ಮದಿನವನ್ನು ಜೀವಪರ ಕಾರ್ಯದ ಮೂಲಕ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅರಳಿಹಳ್ಳಿ ಗ್ರಾಮ ದಾಖಲೆ ರಕ್ತದಾನಕ್ಕೆ ಸಜ್ಜಾಗಿದೆ. 

ಅರಳ್ಳಿಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು ಗವಿಸಿದ್ಧೇಶ ತಾತನ 51ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗುತ್ತಾರೆ. ಆದರೆ, ತಾತನವರು ಇದಕ್ಕೆ ಸಮ್ಮತಿ ನೀಡುವುದಿಲ್ಲ. ನನ್ನ ಜನ್ಮದಿನ ಆಚರಿಸುವುದಾದರೆ ಅದು ಜೀವಪರ ಕಾರ್ಯಕ್ಕಾಗಿ ಅನುಕೂಲವಾಗುವ ರೀತಿ ಮಾಡುವುದಾದರೆ ಮಾಡಿ ಎನ್ನುತ್ತಾರೆ. ಆಗ ಈ ಕುರಿತು ವಾರಕಾಲ ಚರ್ಚೆಯಾಗುತ್ತದೆ. ಕೊನೆಗೆ ತಾತನವರ ಅಪೇಕ್ಷೆಯಂತೆ ರಕ್ತ ತುಲಾಭಾರ ಮಾಡುವ ಮೂಲಕ 51ನೇ ಜನ್ಮದಿನ ಆಚರಣೆಗೆ ನಿರ್ಧರಿಸಲಾಗಿದೆ. ಇದರ ಪರಿಣಾಮ ಈಗ ಅರಳಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ದಾಖಲೆ ರಕ್ತದಾನ ಸಿದ್ಧವಾಗಿವೆ. ಈಗಾಗಲೇ 2500ಕ್ಕೂ ಹೆಚ್ಚು ಜನರು ರಕ್ತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2500ರಲ್ಲಿ ರಕ್ತಪರೀಕ್ಷೆ ನಂತರ 1500 ಜನರು ರಕ್ತದಾನ ಮಾಡಲು ಅರ್ಹರು ಇದ್ದೇ  ಇರುತ್ತಾರೆ ಎನ್ನುವ ಆಧಾರದ ಮೇಲೆ ರಕ್ತದಾನ ಶಿಬಿರವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಯೋಜಿಸಿದೆ. ಅರಳಿಹಳ್ಳಿಯಲ್ಲಿ ಇದಕ್ಕಾಗಿ ಕಳೆದ ಹದಿನೈದು ದಿನಗಳಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದು ಡಿ. 27 ರಂದು ದಾಖಲೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ರಕ್ತದಾನ ಶಿಬಿರ ಉದ್ಘಾಟಿಸಲಿದ್ದು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ. 

ಕೊಪ್ಪಳದಲ್ಲಿಯೇ ದಾಖಲೆ: 

ಗಂಗಾವತಿ ತಾಲೂಕಿನ ಸೂಳೆಕಲ್ ಗ್ರಾಮದ ಭುವನೇಶ್ವರ ತಾತನವರು ಈ ಹಿಂದೆ ತಮ್ಮ ಜನ್ಮದಿನಾಚರಣೆಯನ್ನು ರಕ್ತದಾನದ ಮೂಲಕ ಆಚರಿಸಿಕೊಂಡು ರಕ್ತ ತುಲಾಭಾರ ಮಾಡಿಕೊಂಡಿದ್ದರು. 835 ಭಕ್ತರು ರಕ್ತದಾನ ಮಾಡುವ ಮೂಲಕ ರಾಜ್ಯ ದಲ್ಲಿಯೇ ಒಂದು ದಿನ ಮತ್ತು ಒಂದು ಸಂಸ್ಥೆಯ ದಾಖಲೆ ರಕ್ತದಾನ ಎನ್ನುವ ಖ್ಯಾತಿಗೆ ಇದು ಪಾತ್ರವಾಗಿತ್ತು. 

ಸ್ವಾಮೀಜಿಗಳು ಸಹ ಈ ರೀತಿ ಸಮಾಜಮುಖಿ ಮತ್ತು ಜೀವಪರ ಕಾರ್ಯ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಈಗ ಇದರ ಸಾಲಿಗೆ ಮತ್ತೊಂದು ಸೇರ್ಪಡೆಯಾಗಲು ಅರಳಿಹಳ್ಳಿಯ ಗವಿಸಿದ್ದೇಶ ತಾತ ಮುಂದಾಗಿದ್ದಾರೆ. ತಮ್ಮ ಜನ್ಮದಿನವನ್ನು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಪ್ರಸಂಶೆಗೆ ಪಾತ್ರವಾಗಿದ್ದಾರೆ. 

ಹಗಲಿರುಳು ಶ್ರಮ: 

ಗವಿಸಿದ್ದೇಶ ತಾತನವರು ರಕ್ತದಾನ ಶಿಬಿರದ ಯಶಸ್ವಿಗೆ ಹಗಲು-ಇರಳು ಶ್ರಮಿಸುತ್ತಿದ್ದಾರೆ. 60ಕ್ಕೂ ಹೆಚ್ಚು ಹಳ್ಳಿಗೆ ಸುತ್ತಾಕಿ ಜಾಗೃತಿ ಮೂಡಿಸಿದ್ದಾರೆ. ರಕ್ತದಾನ ಶಿಬಿರಕ್ಕಾಗಿ ಹಗಲಿರಳು ಶಕ್ತಿಮೀರಿ ಶ್ರಮಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. 100 ಹಾಸಿಗೆ ಸಿದ್ಧ ಮಾಡಲಾಗಿದ್ದು, 80  ಹಾಸಿಗೆಯಲ್ಲಿ ಏಕಕಾಲಕ್ಕೆ ರಕ್ತ ತೆಗೆಯುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. 20 ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಮೀಸಲು ಇಡಲಾಗಿದೆ. 20 ವೈದ್ಯರು, 25ಕ್ಕೂ ಹೆಚ್ಚು ಸ್ಟಾಫ್ ನರ್ಸ್, 60 ಟೆಕ್ನಿಶಿಯನ್ ಹಾಗೂ ಎನ್‌ಸಿಸಿ ಹಾಗೂ ಜೂನಿಯರ್ ರೆಡ್ ಕ್ರಾಸ್‌ನ 40ಕ್ಕೂ ಹೆಚ್ಚು ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಅರಳಿಹಳ್ಳಿಯಲ್ಲಿ ಗವಿಸಿದ್ದೇಶ ತಾತನವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಶ್ರೀಗಳೇ ಮುತುವರ್ಜಿ ವಹಿಸಿ ಶಿಬಿರ ಆಯೋಜಿಸಿದ್ದಾರೆ ಎಂದು ಕೊಪ್ಪಳದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಅವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅರಳಿಹಳ್ಳಿ ಗವಿಸಿದ್ದೇಶ ತಾತನವರು, ರಕ್ತದಾನ ಎಲ್ಲದಾನಕ್ಕಿಂತಲೂ ಶ್ರೇಷ್ಠವಾದದು. ಜೀವ ಉಳಿಸುವ ಈ ಕಾರ್ಯದಲ್ಲಿ ಪಾಲ್ಗೊಳ್ಳುವುದೇ ಹೆಮ್ಮೆ. ಹೀಗಾಗಿ ರಕ್ತದಾನ ಶಿಬಿರ ಭಕ್ತರು ಆಯೋಜನೆ ಮಾಡಿದ್ದಾರೆ. ಇದೊಂದು ಜೀವಪರ ಕಾರ್ಯವಾಗಿರುವುದರಿಂದ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದ್ದಾರೆ. 

Follow Us:
Download App:
  • android
  • ios