ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಅವರ ಕುಟುಂಬ ಆರೋಪಿಸಿದೆ. ಪೊಲೀಸರೇ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ್ದು, ಈಗ ತಾವಾಗಿಯೇ ಬಟ್ಟೆ ಬಿಚ್ಚಿಕೊಂಡಿದ್ದಾರೆಂದು ಹೇಳಿಕೆ ನೀಡಲು ಒತ್ತಡ ಹೇರುತ್ತಿದ್ದಾರೆ ಎಂದು ಸುಜಾತಾ ತಾಯಿ ದೂರಿದ್ದಾರೆ. 

ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಇದೀಗ ಅವರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಸುಜಾತಾ ತಾಯಿ ಕಮಲಮ್ಮ, ತಮ್ಮ ಮಗಳ ಮೇಲೆ ನಡೆದ ಘಟನೆ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

“ನನ್ನ ಮಗಳ ಮೇಲೆ ನಿರಂತರವಾಗಿ ಹಲ್ಲೆ ನಡೆದಿದೆ. ಪೊಲೀಸರೇ ಬಟ್ಟೆ ಬಿಚ್ಚಿ ಥಳಿಸಿದ್ದಾರೆ. ನಮ್ಮ ಮಗಳು ಸ್ವಯಂಪ್ರೇರಿತವಾಗಿ ಬಟ್ಟೆ ತೆಗೆದುಕೊಂಡಿಲ್ಲ. ಅಷ್ಟೊಂದು ಜನ ಪೊಲೀಸರ ಮುಂದೆ ಒಬ್ಬ ಮಹಿಳೆ ತಾನೇ ಬಟ್ಟೆ ಬಿಚ್ಚಿಕೊಳ್ಳುವುದು ಹೇಗೆ ಸಾಧ್ಯ?” ಎಂದು ಕಮಲಮ್ಮ ಪ್ರಶ್ನಿಸಿದ್ದಾರೆ.

ಅವರು ಮಾತನಾಡುತ್ತಾ, “ಕಳೆದ 10 ವರ್ಷಗಳಿಂದ ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷದಲ್ಲಿತ್ತು. ಸುಮಾರು ಒಂದು–ಒಂದೂವರೆ ವರ್ಷದ ಹಿಂದಷ್ಟೇ ನಾವು ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ. ಮತದಾರರ ಪಟ್ಟಿ ಪರಿಷ್ಕರಣೆ ನಡೆಯುವ ವೇಳೆ ನನ್ನ ಮಗ ಬೂತ್ ಲೆವೆಲ್ ಅಧಿಕಾರಿ (BLO) ಜೊತೆ ಮನೆಗಳ ಮ್ಯಾಪಿಂಗ್‌ಗೆ ಹೋಗಿದ್ದ. ಅದೇ ಕಾರಣದಿಂದ ಈ ಎಲ್ಲ ಸಮಸ್ಯೆಗಳು ಆರಂಭವಾದವು” ಎಂದು ಆರೋಪಿಸಿದ್ದಾರೆ.

ಸುಜಾತಾ ತಾಯಿ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, “ಪೊಲೀಸರು ಬಲವಂತವಾಗಿ ಕೂದಲು ಹಿಡಿದು ನನ್ನ ಮಗಳನ್ನು ಎಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಕೇಶ್ವಾಪುರ ಠಾಣೆಯ ಇನ್ಸ್ಪೆಕ್ಟರ್ ಕರೇಪ್ಪ ಹಟ್ಟಿ ನನಗೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ‘ನಿಮ್ಮ ಮಗಳೇ ಬಟ್ಟೆ ಬಿಚ್ಚಿಕೊಂಡಿದ್ದಾಳೆ’ ಎಂದು ಹೇಳಿಕೆ ಕೊಡಬೇಕು ಎಂದು ಮನೆಗೆ ಬಂದು ಒತ್ತಡ ಹಾಕಿದ್ದಾರೆ. ಗಾಡಿಯಲ್ಲಿ ಕರೆದುಕೊಂಡು ಹೋಗುವಾಗಲೂ ಒತ್ತಡ ಹೇರಿದ್ದಾರೆ. ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಕೂಡ ಇದೇ ಹೇಳಿಕೆ ನೀಡಬೇಕು ಎಂದು ಬೆದರಿಸಿದ್ದಾರೆ” ಎಂದು ದೂರಿದ್ದಾರೆ.

ಶಾಸಕರ ನಿವಾಸಕ್ಕೆ ಸುಜಾತಾ ಕುಟುಂಬ ಭೇಟಿ

ಹಲ್ಲೆಗೆ ಒಳಗಾದ ಸುಜಾತಾ ಹಂಡಿ ಅವರ ಕುಟುಂಬಸ್ಥರು, ಹುಬ್ಬಳ್ಳಿಯ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ನಿವಾಸಕ್ಕೆ ಆಗಮಿಸಿ ಪೊಲೀಸರ ದೌರ್ಜನ್ಯ ಕುರಿತು ವಿವರಿಸಿದ್ದಾರೆ. ಇನ್ಸ್ಪೆಕ್ಟರ್ ಕರೇಪ್ಪ ಹಟ್ಟಿಯಿಂದ ನಿರಂತರ ಕಿರುಕುಳ ಎದುರಾಗುತ್ತಿದೆ ಎಂದು ಕುಟುಂಬ ಆರೋಪಿಸಿದೆ.

ಕುಟುಂಬದ ಪ್ರಕಾರ, ಕೇವಲ ನಾಲ್ಕು ದಿನಗಳಲ್ಲಿ ಸುಜಾತಾ ಮತ್ತು ಕುಟುಂಬದ ವಿರುದ್ಧ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. “ಇನ್ಸ್ಪೆಕ್ಟರ್ ಸ್ವತಃ ಮನೆಗೆ ಬಂದು, ‘ನಿಮ್ಮ ಮಗಳೇ ಬಟ್ಟೆ ಬಿಚ್ಚಿಕೊಂಡಿದ್ದಾಳೆ’ ಎಂದು ಹೇಳಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಹೇಳಿಕೆ ನೀಡದಿದ್ದರೆ ಇನ್ನಷ್ಟು ಕೌಂಟರ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಕುಟುಂಬಸ್ಥರು ಶಾಸಕರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಶಾಸಕ ಮಹೇಶ್ ಟೆಂಗಿನಕಾಯಿ ತೀವ್ರ ಕಿಡಿ

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಮಹೇಶ್ ಟೆಂಗಿನಕಾಯಿ, ಪೊಲೀಸರ ನಡೆ ತೀವ್ರವಾಗಿ ಖಂಡಿಸಿದ್ದಾರೆ. “ಕೇವಲ ನಾಲ್ಕು ದಿನಗಳಲ್ಲಿ ಸುಜಾತಾ ಕುಟುಂಬದ ಮೇಲೆ ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ಕಾರ್ಪೊರೇಟರ್ ಮಾತು ಕೇಳಿ ಪೊಲೀಸರು ಈ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅಂಥಾ ದೊಡ್ಡ ಅಪರಾಧವೇನು ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.

“ಮತದಾರರ ಪಟ್ಟಿ ಪರಿಷ್ಕರಣೆ ವೇಳೆ BLO ಗಳಿಗೆ ಕಾಂಗ್ರೆಸ್ ಕಾರ್ಪೊರೇಟರ್‌ಗಳು ಧಮ್ಕಿ ಹಾಕಿದರೂ ಆ ವೇಳೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ ಸುಜಾತಾ ಕುಟುಂಬದ ವಿರುದ್ಧ ಮಾತ್ರ ದೂರು ದಾಖಲಿಸಲಾಗಿದೆ. ಸುಜಾತಾ ತಾಯಿಗೆ ಇನ್ಸ್ಪೆಕ್ಟರ್ ಧಮ್ಕಿ ಹಾಕಿ, ‘ನಿಮ್ಮ ಮಗಳೇ ಬಟ್ಟೆ ಬಿಚ್ಚಿಕೊಂಡಿದ್ದಾಳೆ’ ಎಂದು ಹೇಳಿಕೆ ಕೊಡಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಹೇಳಿಕೆ ನೀಡದಿದ್ದರೆ ಇನ್ನಷ್ಟು ಕೌಂಟರ್ ಕೇಸ್ ಹಾಕುವುದಾಗಿ ಬೆದರಿಸಿದ್ದಾರೆ” ಎಂದು ಆರೋಪಿಸಿದರು.

ಶಾಸಕರು ಮುಂದುವರೆದು, “ಕೇವಲ ಮನೆಗಳ ಮ್ಯಾಪಿಂಗ್ ಮಾಡಲು ಸುಜಾತಾ ಅವರ ಮಗ ಅಧಿಕಾರಿಗಳ ಜೊತೆ ಹೋಗಿದ್ದೇ ಅಪರಾಧವೇ? ಪೊಲೀಸ್ ಕಮಿಷನರ್ ಪ್ರಕರಣವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ. ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.