Asianet Suvarna News Asianet Suvarna News

ಸಿದ್ದರಾಮರ ಚಿಂತನೆಯಂತೆ ಬಿಜೆಪಿ ಕೆಲಸ: ಸಿಎಂ ಬೊಮ್ಮಾಯಿ

ನೊಳಂಬರ ಗುರುಗಳು, ಆದರ್ಶ ಚಿಂತಕರು, ಸದಾ ಕಾಯಕದ ಪ್ರೇರೇಪಣೆಯಾಗಿರುವ ಶ್ರೀ ಗುರು ಸಿದ್ದರಾಮೇಶ್ವರರು ಹಾಕಿಕೊಟ್ಟಿರುವ ಕಾಯಕ ಚಿಂತನೆಗಳು, ಕೃಷಿ-ನೀರಾವರಿ ಪ್ರೇರೇಪಣೆಗಳು ಜೊತೆಗೆ ಎಲ್ಲ ಸಮಾಜಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ, ದೇಶದ ಅಭಿವೃದ್ಧಿಪರ ಕಾಯಕಗಳನ್ನು ನಮ್ಮ ಬಿಜೆಪಿ ಪಕ್ಷ ಹಾಗೂ ನಮ್ಮ ಸರ್ಕಾರ ಅಳವಡಿಸಿಕೊಂಡು ರೈತರ ಮತ್ತು ಜನತೆಯ ಒಳಿತಿಗಾಗಿ ದಣಿವರಿಯದೆ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

BJP work as per Siddaramas idea Says CM Basavaraj Bommai gvd
Author
First Published Jan 16, 2023, 8:07 PM IST

ತಿಪಟೂರು (ಜ.16): ನೊಳಂಬರ ಗುರುಗಳು, ಆದರ್ಶ ಚಿಂತಕರು, ಸದಾ ಕಾಯಕದ ಪ್ರೇರೇಪಣೆಯಾಗಿರುವ ಶ್ರೀ ಗುರು ಸಿದ್ದರಾಮೇಶ್ವರರು ಹಾಕಿಕೊಟ್ಟಿರುವ ಕಾಯಕ ಚಿಂತನೆಗಳು, ಕೃಷಿ-ನೀರಾವರಿ ಪ್ರೇರೇಪಣೆಗಳು ಜೊತೆಗೆ ಎಲ್ಲ ಸಮಾಜಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ, ದೇಶದ ಅಭಿವೃದ್ಧಿಪರ ಕಾಯಕಗಳನ್ನು ನಮ್ಮ ಬಿಜೆಪಿ ಪಕ್ಷ ಹಾಗೂ ನಮ್ಮ ಸರ್ಕಾರ ಅಳವಡಿಸಿಕೊಂಡು ರೈತರ ಮತ್ತು ಜನತೆಯ ಒಳಿತಿಗಾಗಿ ದಣಿವರಿಯದೆ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಗುರುಸಿದ್ದರಾಮೇಶ್ವರರ 850ನೆಯ ಸುವರ್ಣ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದ ಭಾಷಣ ಮಾಡಿದರು.

ನೊಳಂಬ ಸಮಾಜದ ಕೇಂದ್ರ ಸಮಿತಿ ಹಲವು ಬೇಡಿಕೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ತುಮಕೂರು ವಿಶ್ವವಿದ್ಯಾಲಯದಲ್ಲಿ ನೊಳಂಬ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರ ಪ್ರಾರಂಭ ಮಾಡಲು ಎಷ್ಟುಹಣ ಬೇಕಾದರೂ ಒದಗಿಸಿ ಕೂಡಲೆ ಪ್ರಾರಂಭಿಸುತ್ತೇವೆ, ತುಮಕೂರಿನಲ್ಲೇ ಮೊದಲ ನೊಳಂಭೋತ್ಸವ ಮಾಡುವ ಮೂಲಕ ಪ್ರತೀ ವರ್ಷ ಜ.15ರಂದು ಉತ್ಸವ ನಡೆಯುವಂತೆ ಮಾಡಲಾಗುವುದು. ಸಿದ್ದರಾಮರ ಆಶಯದಂತೆ ರಾಜ್ಯದ ಎಲ್ಲಾ ಕೆರೆಕಟ್ಟೆಗಳ ಅಭಿವೃದ್ಧಿಗೆ ಅವರ ಹೆಸರಿನ ವಿಶೇಷ ಯೋಜನೆ ರೂಪಿಸಲಾಗುವುದು ಎಂದರು. ಗುರು ಸಿದ್ದರಾಮೇಶ್ವರ ಜಯಂತಿಯನ್ನು 3ನೆ ಬಾರಿಗೆ ನಡೆಸುತ್ತಿರುವ ಕಲ್ಪತರು ನಾಡಿನ ಕೆರೆಗೋಡಿ-ರಂಗಾಪುರ ಶ್ರೀಮಠ ನೊಳಂಬ ಸಮಾಜಕ್ಕೆ ಬಹುದೊಡ್ಡ ಕಾಣಿಕೆ ನೀಡಿದೆ. 

ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ: ಸಚಿವ ಕೆ.ಗೋಪಾಲಯ್ಯ

ಶ್ರೀಗಳು ಸಹ ಕೊಬ್ಬರಿ ಬೆಲೆ ಹೆಚ್ಚಳ, ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ಕೊರತೆ ಆತಂಕ ವ್ಯಕ್ತಪಡಿಸಿದ್ದು ಈ ಬಗ್ಗೆ ಕೂಡಲೆ ಕ್ರಮವಹಿಸಲಾಗುವುದು ಎಂದರು. ಕೆರೆಗೋಡಿ-ರಂಗಾಪುರ ಗುರುಪರದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾವಂತರಿಂದಲೇ ಕುಟುಂಬದಲ್ಲಿನ ಸಾಮರಸ್ಯ ಇತ್ತೀಚೆಗೆ ಹೆಚ್ಚು ಹಾಳಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿಯರನ್ನು ದೂರ ಮಾಡುತ್ತಿದ್ದಾರೆ. ದೇಶ ಮತ್ತು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಇವರೇ ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆತು ಮೋಜು ಮಸ್ತಿಯಲ್ಲಿ ಕಾಲಕಳೆಯುತ್ತಿದ್ದಾರೆ. 

ಸ್ವಾರ್ಥಪರ ಚಿಂತನೆ, ಬದುಕು ಕಟ್ಟಿಕೊಳ್ಳಲು ಅನ್ಯಮಾರ್ಗ ಹಿಡಿದು ವೈಭೋಗದ ಜೀವನದ ದಾಸರಾಗಿ ಇಳಿವಯಸ್ಸಿನ ತಂದೆ-ತಾಯಿಯರ ಯೋಗಕ್ಷೇಮ ನೋಡಿಕೊಳ್ಳದೆ ಸಂಕಷ್ಟಕ್ಕೆ ದೂಡುತ್ತಿರುವುದು ಕಳವಳ ಸಂಗತಿ. ನಮ್ಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ಕೊರತೆ ಇದ್ದು ಅದನ್ನು ನೀಗಿಸಬೇಕು ಹಾಗೆಯೇ ತಿಪಟೂರು ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ರೈತರ ಸಂಕಷ್ಟವನ್ನು ದೂರಮಾಡಬೇಕು. ಸಮಾರಂಭದ ಯಶಸ್ಸಿಗೆ ಇಲ್ಲಿನ ಸಚಿವರು, ನೊಳಂಬ ಕೇಂದ್ರ ಸಮಿತಿಯ ಅಧ್ಯಕ್ಷ ಎಸ್‌. ಆರ್‌. ಪಾಟೀಲ್‌ ಹಾಗೂ ಸದಸ್ಯರು, ಇಲ್ಲಿನ ಎಲ್ಲ ರಾಜಕಾರಣಿಗಳು, ರೈತರು, ದಾನಿಗಳು, ಅಧಿಕಾರಿಗಳು ಸೇರಿದಂತೆ ಸ್ವಾಗತ ಸಮಿತಿಯ ಅಧ್ಯಕ್ಷ ಮಧುಸೂಧನ್‌ ಹಾಗೂ ಅವರ ಸಮಿತಿಯ ಎಲ್ಲರೂ ಶ್ರಮಿಸಿದ್ದು ಎಲ್ಲರಿಗೂ ಸಿದ್ದರಾಮರು ಹಾಗೂ ಮಠ ಸನ್ಮಂಗಳನ್ನುಂಟು ಮಾಡಲಿ ಎಂದು ಆಶೀರ್ವದಿಸಿದರು.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾತನಾಡಿ, ಸಿದ್ದರಾಮರ ಕಾಯಕ, ಚಿಂತೆನೆಗಳಿಗೂ ಬಿಜೆಪಿಗೂ ನೇರ ಸಂಬಂಧವಿದ್ದು ಅಂದು ಮಾಡಿದ್ದ ಸಿದ್ದರಾಮರ ಯೋಜನೆಗಳನ್ನು ಇಂದು ಬಿಜೆಪಿ ಸರ್ಕಾರ ಮಾಡುತ್ತಿದ್ದ, ನೀರಾವರಿ ಯೋಜನೆ, ಕೆರೆಕಟ್ಟೆಗಳ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ, ರೈತರಪ ಕಾಳಜಿಯನ್ನು ನಮ್ಮ ಸರ್ಕಾರ ಹಾಗೂ ಮೋದಿಯವರು ಹೊಂದಿದ್ದಾರೆ ಎಂದರು. ಸಮಾರಂಭದಲ್ಲಿ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರಸ್ವಾಮೀಜಿ, ಕೇದಿಗೆ ಮಠದ ಜಯಚಂದ್ರಶೇಖರಸ್ವಾಮೀಜಿ, ಪುಷ್ಟಪಗಿರಿ ಮಠದ ಸೋಮಶೇಖರಶಿವಾರ್ಚಾ ಸ್ವಾಮೀಜಿ, ಮಾಡಾಳು ಮಠದ ರುದ್ರಮುನಿ ಸ್ವಾಮೀಜಿ, ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಹೊನ್ನವಳ್ಳಿ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಅಭಿನವದೇಶಿಕೆಂದ್ರ ಸ್ವಾಮೀಜಿ.

ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಕರಡಿ ಗವಿ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್‌, ಶಾಸಕರಾದ ಜಿ.ಬಿ. ಜ್ಯೋತಿಗಣೇಶ, ಶಿವಲಿಂಗೇಗೌಡ, ಭದ್ರಾವತಿಯ ಸಂಗಮೇಶ್‌, ಎಂ.ಪಿ. ರೇಣುಕಾಚಾರ್ಯ, ಲಿಂಗೇಶ್‌, ಪತ್ರಕರ್ತರ ಕಾರ್ಯನಿರತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್‌, ಬಿಜೆಪಿ ಮುಖಂಡ ಮರಿಸ್ವಾಮಿ, ನೊಳಂಬ ಸಮಾಜ ಸಂಘದ ರಾಜ್ಯಾಧ್ಯಕ್ಷ ಎಸ್‌.ಆರ್‌ ಪಾಟೀಲ್‌, ಕಾಂಗ್ರೆಸ್‌ ಮುಖಂಡರಾದ ಕೆ. ಷಡಕ್ಷರಿ, ಲೋಕೇಶ್ವರ, ಟೂಡಾ ಶಶಿಧರ್‌, ಕೆ.ಟಿ. ಶಾಂತಕುಮಾರ್‌, ಸಮಾಜದ ಮುಖಂಡರು ಸೇರಿದಂತೆ ಲಕ್ಷಾಂತರ ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಭಾಗವಹಿಸಿದ್ದರು.

ಎಲ್ಲರಿಗೂ ಕುಡಿಯುವ ನೀರು, ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಹಾಗೂ ಪೊಲೀಸರು ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಿದ್ದರು. ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ಸಾವಿರಾರು ರೈತರು, ಜನರು, ಮಹಿಳೆಯರು, ಮಕ್ಕಳು ಭೇಟಿ ನೀಡಿದರು. ಪುಸ್ತಕಗಳ ಮಳಿಗೆಯಲ್ಲಿ ವ್ಯಾಪಾರವೂ ಚುರುಕಾಗಿದ್ದು, 3-4 ಕಿಲೋಮೀಟರ್‌ ರಸ್ತೆಯುದ್ದಕ್ಕೂ ಜಾತ್ರೋಪಾದಿಯಲ್ಲಿ ವಿವಿಧ ಬೀದಿಬದಿಯ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿಕೊಂಡಿದ್ದು ಎಲ್ಲೆಡೆಯೂ ವ್ಯಾಪಾರ ಜೋರಿತ್ತು.

ನಾಗೇಶ್‌ ಬದಲು ನಾನೇ ಸ್ಪರ್ಧಿಸಬೇಕಾದೀತು: ತಿಪಟೂರಿನ ಭಾರೀ ಜನಸ್ತೋಮ ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಸಚಿವ ಬಿ.ಸಿ. ನಾಗೇಶ್‌ ಬದಲು ನಾನೇ ತಿಪಟೂರು ಕ್ಷೇತ್ರದಿಂದ ಸ್ಪರ್ಧಿಸಬೇಕಾಗಬಹುದೇನೋ ಎಂದು ತಮಾಷೆಯಾಗಿ ಬಿ.ವೈ. ವಿಜಯೇಂದ್ರ ಹೇಳಿದ ಪ್ರಸಂಗ ನಡೆಯಿತು. ಕಾರಣ ವಿಜಯೇಂದ್ರ ಸಭೆಗೆ ಬಂದಾಗನಿಂದ ಹೋಗುವ ತನಕ ಸೇರಿದ್ದ ಸಾವಿರಾರು ಜನರು ವಿಜಯೇಂದ್ರ, ವಿಜಯೇಂದ್ರ, ಯಡಿಯೂರಪ್ಪ ಎಂದು ಒಂದೇ ಸಮನೆ ಕೂಗುತ್ತಿದ್ದ ದೃಶ್ಯಗಳು ಸ್ವತಹ ಮುಖ್ಯಮಂತ್ರಿಯವರಿಗೇ ಮುಜುಗರ ತರುವಂತಿತ್ತು. ಬೊಮ್ಮಯಿಗೂ ಘೋಷಣೆಗಳನ್ನು ಕೂಗಿದರೂ ಸಹ ಹೆಚ್ಚು ವಿಜಯೇಂದ್ರಗೆ ಕೂಗುತ್ತಿದ್ದು ವಿಶೇಷವಾಗಿತ್ತು

ನಡೆದಾಡುವ ಸರ್ಕಾರ ತಂದ ಬಿಎಸ್‌ವೈ: ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ವೀರಶೈವ ನೊಳಂಬ ಲಿಂಗಾಯತ ಸಮಾಜಕ್ಕೆ ಐತಿಹಾಸಿಕ ಪರಂಪರೆಯಿದ್ದು, ಸಾಮಾಜಿಕ, ಶೈಕ್ಷಣಿಕವಾಗಿ ಸುಧಾರಣೆಯಾಗುತ್ತಿದೆ. ಅನ್ನ, ಅಕ್ಷರ ದಾಸೋಹ ಮೂಲಕ ಶಿವಶರಣರ ಆಚಾರಗಳನ್ನು ಸಮಾಜಕ್ಕೆ ಉಣಬಡಿಸುತ್ತಿರುವ ಪವಿತ್ರ ಸಮಾಜ ನೊಳಂಬ ಸಮಾಜವಾಗಿದ್ದು, ಆಲದ ಮರದಂತೆ ಬೃಹತ್ತಾಗಿ ಬೆಳೆದಿದೆ. ಇಲ್ಲಿನ ಮಠಮಾನ್ಯಗಳು ಅನ್ನದಾನ, ವಿದ್ಯಾದಾನ ಮಾಡುತ್ತಾ ಎಲ್ಲರ ನೋವು ನಲಿವುಗಳಲ್ಲಿ ಭಾಗಿಯಾಗುತ್ತಿವೆ. ಸಿದ್ದಗಂಗೆಯ ಶಿವಕುಮಾರ ಶ್ರೀಗಳು ನಡೆದಾಡುವ ದೇವರು ಅದರಂತೆ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಗಾಳಗಿದ್ದ ಬಿ.ಎಸ್‌. ಯಡಿಯೂರಪ್ಪನವರು ನಡೆದಾಡುವ ಸರ್ಕಾರವನ್ನು ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಂಪುಟ ಪುನರ್‌ ರಚನೆ ಕುರಿತು ಅಂತಿಮ ಪ್ರಯ​ತ್ನ​ಗಳು ನಡೆ​ಯು​ತ್ತಿವೆ: ಸಿ.ಪಿ.​ಯೋ​ಗೇ​ಶ್ವರ್‌

ಶೀಘ್ರ ಕೊಬ್ಬರಿಗೆ ಬೆಂಬಲ ಬೆಲೆ: ತಿಪಟೂರಿಗೆ ತಾಲೂಕಿಗೆ 380 ಕೋಟಿ ರು. ವೆಚ್ಚದಲ್ಲಿ ಜಲಜೀವನ ಮಿಷನ್‌ ಯೋಜನೆ ಅಡಿಯಲ್ಲಿ ಮನೆಮನೆಗೆ ನೀರು ಹರಿಸುವ ಕೆಲಸ ಹಾಗೂ ಎತ್ತಿನಹೊಳೆ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮತ್ತು ಹೊನ್ನವಳ್ಳಿ ಏತನೀರಾವರಿಗೂ ಹೆಚ್ಚಿನ ಹಣ ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟುಯೋಜನೆಗಳನ್ನು ನೀಡಲಾಗುವುದು. ಆದಷ್ಟುಬೇಗ ಎತ್ತಿನಹೊಳೆ ಯೋಜನೆಯಿಂದ ಈ ಜಿಲ್ಲೆಗೆ ನೀರು ಹರಿಸಲಾಗುವುದು ಪ್ರಾರಂಭವಾಗಲಿದೆ. ಈ ಭಾಗದಲ್ಲಿ ತೆಂಗು ಬೆಳೆಗಾರರು ಕೊಬ್ಬರಿ ನಂಬಿ ಜೀವನ ನಡೆಸುತ್ತಿದ್ದು, ಶೀಘ್ರದಲ್ಲೇ ಕೊಬ್ಬರಿ ನಫೆಡ್‌ ತೆರದು ಬೆಂಬಲ ಬೆಲೆ ಘೊಷಣೆ ಮಾಡಲಾಗುವುದು. ಸದಾ ರೈತರಪರ ಚಿಂತನೆಯಲ್ಲಿರುವ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಲಿದೆ ಎಂದರು.

Follow Us:
Download App:
  • android
  • ios