ಶಿಕಾರಿಪುರ (ನ.13):  ಇಲ್ಲಿನ ತಾಲೂಕು ವ್ಯವಸಾಯೋತ್ವನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್‌)ಕ್ಕೆ ಶಶಿಧರ ಚುರ್ಚುಗುಂಡಿ ಅಧ್ಯಕ್ಷರಾಗಿ ಹಾಗೂ ಗಂಗಾಧರ ಯು.ಕೆ ಉಪಾಧ್ಯಕ್ಷರಾಗಿ ಅವಿರೋಧವಾಗಿ  ಆಯ್ಕೆಯಾದರು.

15 ಸದಸ್ಯರ ಟಿಎಪಿಸಿಎಂಸ್‌ನಲ್ಲಿ ಸರ್ಕಾರ ಹಾಗೂ ಡಿಸಿಸಿ ಬ್ಯಾಂಕ್‌ ನಾಮನಿರ್ದೇಶಿತ ಸದಸ್ಯರನ್ನು ಹೊರತುಪಡಿಸಿ ಪರಿಶಿಷ್ಟಜಾತಿ ಹಾಗೂ ಪಂಗಡ ಸ್ಥಾನಕ್ಕೆ ಅವಿರೋಧವಾಗಿ ಜಯನಾಯ್ಕ ಹಾಗೂ ಬಸವಣ್ಯಪ್ಪ ಆಯ್ಕೆಯಾಗಿದ್ದರು. ಉಳಿದ 11 ಸ್ಥಾನಕ್ಕೆ ಕಳೆದ ನವೆಂಬರ್‌ 1ರಂದು ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಸಂಪೂರ್ಣ ಸಂಘವನ್ನು ಕಳೆದ ಅವಧಿಯ ರೀತಿಯಲ್ಲೇ ವಶಪಡಿಸಿಕೊಳ್ಳುವಲ್ಲಿ ಸಫಲರಾದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕ್ರಮವಾಗಿ ಶಶಿಧರ ಚುರ್ಚುಗುಂಡಿ ಹಾಗೂ ಗಂಗಾಧರ ಮಾತ್ರ ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿಯಾಗಿದ್ದ ಅರವಿಂದ್‌ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು.

ವೈರಲ್ ಆಯ್ತು ಸಿಎಂ BSY‌ ಭಾಷಣದ ತುಣುಕು : ಅದರಲ್ಲೇನಿತ್ತು..? .

ಹಿರಿಯ ಸಹಕಾರಿ, ಸಂಘದ ನಿರ್ದೇಶಕ ಡಾ.ಬಿ ಡಿ.ಭೂಕಾಂತ್‌ ಮಾತನಾಡಿ, ರಾಜ್ಯ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಸಂಘದ ಮೂಲಕ ಅರ್ಹರಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದು ತಿಳಿಸಿದರು.

ಈಗಾಗಲೇ ಸಂಘದ ಮೂಲಕ ಪೆಟ್ರೋಲ್‌ ಬಂಕ್‌ ಆರಂಭಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆದಿದ್ದು, ಸಂಘವನ್ನು ಹೆಚ್ಚು ಸದೃಢಗೊಳಿಸಿ ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸಲು ಯೋಜನೆಯನ್ನು ರೂಪಿಸಬೇಕಾಗಿದೆ. ಮುಖ್ಯಮಂತ್ರಿಗಳು ಸಂಸದರು ಸಂಘದ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲು ಎಲ್ಲ ರೀತಿಯಲ್ಲಿ ಸಹಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷ ಶಶಿಧರ ಚುರ್ಚುಗುಂಡಿ ಮಾತನಾಡಿ, ಪೆಟ್ರೋಲ್‌ ಬಂಕ್‌ ಆರಂಭಕ್ಕೆ ವೇಗದ ಚಾಲನೆ ನೀಡಿ ಆದಾಯವನ್ನು ಕೃಷಿ ಮಾಲ್‌ ತೆರೆಯುವ ದೂರದೃಷ್ಟಿಯನ್ನು ಹೊಂದಿದ್ದು, ರೈತರು ಕೃಷಿ ಕಾಯಕಕ್ಕೆ ಅಗತ್ಯವಾದ ಬೀಜ, ಗೊಬ್ಬರ, ಔಷಧೋಪಕರಣಗಳನ್ನು ಖರೀದಿಸಲು ಅಂಗಡಿಗಳಿಗೆ ಅಲೆಯದ ರೀತಿಯಲ್ಲಿ ಕೃಷಿಗೆ ಅಗತ್ಯವಾದ ಸಂಪೂರ್ಣ ಪರಿಕರಗಳನ್ನು ಒಂದೇ ಸೂರಿನಡಿ ದೊರಕಿಸಿಕೊಡುವ ಕೃಷಿ ಮಾಲ್‌ ಆರಂಭಿಸಲು ಯೋಜನೆ ಹೊಂದಿರುವುದಾಗಿ ತಿಳಿಸಿದರು.

ಸಂಘದ ನಿರ್ದೇಶಕ ಹಾಗೂ ಡಿಸಿಸಿ ಬ್ಯಾಂಕ್‌ ಪ್ರಭಾರಿ ಅಧ್ಯಕ್ಷ ಚನ್ನವೀರಪ್ಪ, ಸುಧೀರ, ಜಯಾನಾಯ್ಕ, ರಾಘವೇಂದ್ರ, ಸುನೀತಾ, ಪ್ರೇಮಾ, ಕಾರ್ಯದರ್ಶಿ ಜಗದೀಶ, ಬಸವರಾಜ ಮುಖಂಡ ಬೆಣ್ಣೆ ದೇವೇಂದ್ರ, ಸುಕೇಂದ್ರಪ್ಪ, ಕಬಾಡಿ ರಾಜಣ್ಣ, ಪುರಸಭಾ ಸದಸ್ಯ ಸುರೇಶ, ಪ್ರಶಾಂತ ಜೀನಳ್ಳಿ, ತಾಪಂ ಸದಸ್ಯ ಸುರೇಶನಾಯ್ಕ ಮತ್ತಿತರರಿದ್ದರು. ಇದೇ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.