ತುಮಕೂರು  (ನ.13): ತುಮಕೂರಿನಲ್ಲಿ ವಿಧಾನ ಪರಿಷತ್‌ ಅಭ್ಯರ್ಥಿಯಾಗಿದ್ದ ಚಿದಾನಂದಗೌಡ ಪರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾಡಿದ್ದ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಅಕ್ಟೋಬರ್‌ 24 ರಂದು ತುಮಕೂರಿನ ಸಿದ್ಧಿವಿನಾಯಕ ಕಲ್ಯಾಣ ಮಂಟಪದಲ್ಲಿ ನಡೆದ ಪರಿಷತ್‌ ಚುನಾವಣೆ ಪ್ರಚಾರ ಸಭೆಯಲ್ಲಿ ಇನ್ನು ಮುಂದೆ ನಿಮಗೆ ಯಾವುದೇ ಚುನಾವಣೆ ಗೆಲ್ಲಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯನವರಿಗೆ ಯಡಿಯೂರಪ್ಪ ಸವಾಲು ಹಾಕಿದ್ದು ವೈರಲ್‌ ಆಗಿದೆ.

ಆ ವೇಳೆ ಯಡಿಯೂರಪ್ಪನವರು ಉಪಚುನಾವಣೆಯ ಎರಡೂ ಸ್ಥಾನ ನಾವೇ ಗೆಲ್ಲುತ್ತೇವೆ. ಆರ್‌.ಆರ್‌. ನಗರದಲ್ಲಿ ಮುನಿರತ್ನ ಕನಿಷ್ಠ 50 ಸಾವಿರ ಮತಗಳ ಅಂತರಿಂದ ಗೆಲ್ಲುತ್ತಾರೆ ಎಂದಿದ್ದರು. ಅಷ್ಟೆಅಲ್ಲದೇ ಪರಿಷತ್‌ ಚುನಾವಣೆಯ ನಾಲ್ಕಕ್ಕೆ ನಾಲ್ಕೂ ಸ್ಥಾನ ನಾವು ಗೆಲ್ಲುವುದಾಗಿ ಹೇಳಿದ್ದರು.

ಲೋಕಸಭಾ ಚುನಾವಣೆಯಲ್ಲಿ ನಾವು 23 ಕ್ಷೇತ್ರಗಳನ್ನು ಗೆಲ್ಲುವುದಾಗಿ ಹೇಳಿದ್ದೆ. ಆಗ ಪ್ರತಿಪಕ್ಷಗಳು ನನ್ನ ಮಾತನ್ನು ಗೇಲಿ ಮಾಡಿದ್ದವು. ಆದರೆ ಕಳೆದ ಲೋಕಸಭೆಯಲ್ಲಿ ನಾವು 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆವು ಎಂದಿದ್ದರು. ಈಗ ಅದೇ ರೀತಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಆ ವಿಡಿಯೋ ವೈರಲ್‌ ಆಗುತ್ತಿದೆ.