Asianet Suvarna News Asianet Suvarna News

ಕೊಳ್ಳೇಗಾಲ: ಉಪಚುನಾವಣೆ ಕಮಲ ಜಯಭೇರಿ

ಕೊಳ್ಳೇಗಾಲ ನಗರಸಭೆಯ ಏಳು ವಾರ್ಡ್‌ಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕೆಲ ಪ್ರಭಾವಿ ಮುಖಂಡರ ಕಾಲೆಳೆದಾಟದ ನಡುವೆಯೂ ಕಮಲ ಪಾಳೇಯ 6ವಾರ್ಡ್‌ಗಳಲ್ಲಿ ಗೆದ್ದು ಬೀಗುವ ಮೂಲಕ ಕಾಲೆಳೆದವರು ಹಾಗೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್‌ ನಾಯಕರನ್ನು 6 ವಾರ್ಡ್‌ಗಳಲ್ಲಿನ ಮತದಾರರು ತಿರಸ್ಕರಿಸಿದ್ದಾರೆ.

BJP victory in  kollegala municipality by Election snr
Author
First Published Dec 3, 2022, 8:24 AM IST

ಎನ್‌. ನಾಗೇಂದ್ರಸ್ವಾಮಿ

 ಕೊಳ್ಳೇಗಾಲ (ಡಿ.03): ಕೊಳ್ಳೇಗಾಲ ನಗರಸಭೆಯ ಏಳು ವಾರ್ಡ್‌ಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕೆಲ ಪ್ರಭಾವಿ ಮುಖಂಡರ ಕಾಲೆಳೆದಾಟದ ನಡುವೆಯೂ ಕಮಲ ಪಾಳೇಯ 6ವಾರ್ಡ್‌ಗಳಲ್ಲಿ ಗೆದ್ದು ಬೀಗುವ ಮೂಲಕ ಕಾಲೆಳೆದವರು ಹಾಗೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್‌ ನಾಯಕರನ್ನು 6 ವಾರ್ಡ್‌ಗಳಲ್ಲಿನ ಮತದಾರರು ತಿರಸ್ಕರಿಸಿದ್ದಾರೆ.

6ನೇ ವಾರ್ಡ್‌ನ ಮಾನಸ, 7ನೇ ವಾರ್ಡ್‌ನ ನಾಸೀರ್‌ ಷರೀಫ್‌, 13ನೇ ವಾರ್ಡ್‌ನ ಪವಿತ್ರ ರಮೇಶ್‌, 21ನೇ ವಾರ್ಡ್‌ನ ಶಂಕನಪುರ ಪ್ರಕಾಶ್‌, 25ನೇ ವಾರ್ಡ್‌ನ ರಾಮಕೃಷ್ಣ, 26ನೇ ವಾರ್ಡ್‌ನ ನಾಗಸುಂದ್ರಮ್ಮ ಜಗದೀಶ್‌ ಅತ್ಯಧಿಕ ಮತದಿಂದ ಗೆದ್ದ ಬಿಜೆಪಿ ಸದಸ್ಯರು.

ಕಾಂಗ್ರೆಸ್‌ ಸೋಲಿನ ವೈಫಲ್ಯ: ಕಾಂಗ್ರೆಸ್‌ (Congress)  ಸೋಲಿಗೆ ಸಾಮಾನ್ಯ ವರ್ಗದ ಮತದಾರರ ಕಡೆಗಣನೆ, ಗೆದ್ದೇ ಗೆಲ್ಲುತ್ತೇವೆಂಬ ಅತೀವ ವಿಶ್ವಾಸ, ಸಾಮೂಹಿಕ ನಾಯಕತ್ವದಲ್ಲಿ ಗುಂಪುಗಾರಿಕೆ, ಬಣ ರಾಜಕೀಯ (Politics) , ಪಕ್ಷದ ಕೆಲ ವಾರ್ಡಿನ ಅಭ್ಯರ್ಥಿಗಳು ಮತದಾರನ ಮನತಲುಪುವಲ್ಲಿ, ಅಭ್ಯರ್ಥಿ ಆಯ್ಕೆ ವಿಚಾರ, ಸಂಪನ್ಮೂಲ ಕ್ರೋಡಿಕರಣದಲ್ಲಿ ವಿಫಲತೆ, ಹೀಗೆ ನಾನಾ ಕಾರಣಗಳಿಗೆ ಕಾಂಗ್ರೆಸ್‌ ಕೇವಲ 2ನೇ ವಾರ್ಡ್‌ನಲ್ಲಿ (7ಕ್ಕೆ 1ರಲ್ಲಿ) ಮಾತ್ರ ಗೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ.

2ನೇ ವಾರ್ಡಿನ ಕಾಂಗ್ರೆಸ್‌ ಪಕ್ಷದ ಭಾಗ್ಯ ಬಿಜೆಪಿಯ ಅಭ್ಯರ್ಥಿಯನ್ನು ಮುನ್ನೂರು ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ಪುತ್ರ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಂಸದ ಧ್ರುವನಾರಾಯಣ ಭರ್ಜರಿ ಪ್ರಚಾರ ನಡೆಸಿ ತೆರಳಿದ ವಾರ್ಡ್‌ನಲ್ಲೂ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. ಉಳಿದಂತೆ 6ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದೆಯಾದರೂ ಗೆಲ್ಲುವಲ್ಲಿ ತಂತ್ರ, ಪ್ರತಿ ತಂತ್ರಗಾರಿಕೆಗಳು ಫಲಿಸದ ಪರಿಣಾಮ ಕಾಂಗ್ರೆಸ್‌ 6ರಲ್ಲೂ ಪರಾಭವಗೊಂಡಿದೆ.

2ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಭಾಗ್ಯ 546ಮತಗಳಿಸುವ ಮೂಲಕ ಮುನ್ನೂರು ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ, ಮತದಾರರ ಆಶೀರ್ವಾದದಿಂದ ಗೆಲುವಾಗಿದ್ದು ವಾರ್ಡ್‌ ಅಭಿವೃದ್ಧಿಗೆ ಸ್ಪಂದಿಸುವೆ ಎಂದರು. ಬಿಜೆಪಿಯ ನಾಗಮಣಿ ಗೋಪಾಲ್‌, ಕೇವಲ 246ಮತಗಳಿಸುವಲ್ಲಿ ಸಫಲರಾಗಿದ್ದಾರೆ. ಇಲ್ಲಿ ತೀವ್ರ ಪೈಪೋಟಿ ನೀಡುವ ಬಿಎಸ್ಪಿ ಬೆಂಬಲದೊಂದಿಗೆ ಕಣದಲ್ಲಿದ್ದ ಎಸ್‌ಡಿಪಿಐನ ಶಾಂತಲಕ್ಷ್ಮಿ ಕೇವಲ 55ಮತಗಳಿಸುವಲ್ಲಿ ಸಫಲರಾಗಿದ್ದಾರೆ.

6ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಅತಿಯಾಗಿ ವಿಶ್ವಾಸ ಹೊಂದಿದ್ದರು. ಆದರೆ, ಕೊನೆ ಕ್ಷಣದ ಬಿಜೆಪಿಯ ತಂತ್ರ, ಪ್ರತಿತಂತ್ರದಿಂದ ಕೊನೆ ಕ್ಷಣದಲ್ಲಿ ಬಿಜೆಪಿಯ ಅಭ್ಯರ್ಥಿ 40ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.

ಬಿಜೆಪಿಯ ಮಾನಸ 460 ಹಾಗೂ ಕಾಂಗ್ರೆಸ್‌ನ ಸಂಪತ್‌ ಕುಮಾರಿ 420 ಮತ್ತು 10ನೋಟ ಮತಗಳು ಇಲ್ಲಿ ಚಲಾವಣೆಯಾಗಿವೆ.

ವಾರ್ಡ್‌ 21ರಲ್ಲಿ ಸ್ಪರ್ಧಿಸಿದ್ದ ಶಾಸಕರ ಆಪ್ತ ಶಂಕನಪುರ ಪ್ರಕಾಶ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಭೀಮನಗರದ ಯಜಮಾನ ಕೆ ಕೆ ಮೂರ್ತಿ ಅವರಿಗೆ ಪ್ರಬಲ ಸ್ಪರ್ಧೆಯೊಡ್ಡಿ 63ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಪ್ರಕಾಶ್‌ 556, ಕಾಂಗ್ರೆಸ್‌ 493, ಕೆ.ಆರ್‌.ಎಸ್‌ ಅಭ್ಯರ್ಥಿ ಜಗದೀಶ್‌ 9ಮತ, ಬಿಎಸ್ಪಿಯ ಲೋಕೇಶ್‌ 13 ಮತ ಹಾಗೂ ಇಲ್ಲಿ 5 ನೋಟಾ ಮತಗಳು ಚಲಾವಣೆಗೊಂಡಿವೆ.

ಲಿಂಗಣಾಪುರ ವಾರ್ಡ್‌ 25ರಲ್ಲಿ ಬಿಜೆಪಿಯ ರಾಮಕೃಷ್ಣ (201)ಮತ, ಕಾಂಗ್ರೆಸ್‌ನ ರಮೇಶ್‌ (159)ಮತ, ಬಿಎಸ್ಪಿಯ ರಂಗಸ್ವಾಮಿ 4 ಮತ, ಪಕ್ಷೇತರ ಅಭ್ಯರ್ಥಿ ನಿವೃತ್ತ ಯೋಧ ಮಹದೇವ 50 ಹಾಗೂ ಶಿವಮಲ್ಲು 10 ಮತಗಳಿಸಿದ್ದಾರೆ. ನೋಟಾ 1ಮತ ಚಲಾವಣೆಗೊಂಡಿದ್ದು ಈ ವಾರ್ಡ್‌ನಲ್ಲಿ ಗೆಲ್ಲುವ ಅತೀವ ವಿಶ್ವಾಸ ಹೊಂದಿದ್ದ ಕಾಂಗ್ರೆಸ್‌ ಅಭ್ಯರ್ಥಿಗೆ ಮತದಾರ ತೀವ್ರ ನಿರಾಸೆಯುಂಟು ಮಾಡಿದ್ದಾನೆ.

ಶಂಕನಪುರದ 26ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾಗಸುಂದ್ರಮ್ಮ ಜಗದೀಶ್‌( 620)ಮತ, ಪಕ್ಷೇತರ ಅಭ್ಯರ್ಥಿ ಕವಿತ ಶೇಖರ್‌( 428)ಮತ, ಕಾಂಗ್ರೆಸ್‌ನ ಸುನೀತ ಮಾದೇಶ್‌ (273), ನೋಟಾಕ್ಕೆ 13ಮತಗಳು ಲಭಿಸಿದೆ.

ಕಾಂಗ್ರೆಸ್‌ ಮೂರನೇ ಸ್ಥಾನದಲ್ಲಿದ್ದು, ತೀವ್ರ ಮುಖಭಂಗ ಅನುಭವಿಸಿದೆ. ಪಕ್ಷೇತರ ಅಭ್ಯರ್ಥಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಬಿಜೆಪಿಯ ನಾಗಸುಂದ್ರಮ್ಮ ಪ್ರಥಮ ಬಾರಿಗೆ ಬಿಎಸ್ಪಿ ಬೆಂಬಲದೊಂದಿಗೆ ಪಕ್ಷೇತರವಾಗಿ, ಬಳಿಕ ಬಿಎಸ್ಪಿಯ ಚಿನ್ಹೆಯಡಿ 2ನೇ ಬಾರಿ ಹಾಗೂ ಅನರ್ಹಗೊಂಡ ಬಳಿಕ 3ನೇ ಬಾರಿಗೆ ಬಿಜೆಪಿ ಚಿನ್ಹೆಯಡಿ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಇಲ್ಲಿ 23ಮಂದಿ ನೋಟಾಗೆ ಮತ ಚಲಾಯಿಸಿದ್ದಾರೆ.

ವಾರ್ಡ್‌7ರಲ್ಲಿ ಹೆಚ್ಚು ಮುಸ್ಲಿಂ ಸಮಾಜದ ಮತಗಳಿದ್ದು, ಮೊದಲ ಬಾರಿಗೆ ಅನರ್ಹಗೊಂಡು ಪುನಃ ಅದೃಷ್ಟಪರೀಕ್ಷೆಗಿಳಿದಿದ್ದ ನಾಸೀರ್‌ ಷರೀಫ್‌ ನೂರು ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ (491), ಕಾಂಗ್ರೆಸ್‌ನ ಕಿಜರ್‌ ಪಾಶಾ (391), ಬಿಎಸ್ಪಿಯ ಇನಾಯತ್‌ ಪಾಶಾ 5ಮತ, ಜೆಡಿಎಸ್‌ ಅಭ್ಯರ್ಥಿ ಇರ್ಫಾನ್‌ (13ಮತ) ಪಕ್ಷೇತರ ಅಭ್ಯರ್ಥಿ ಶಿವಶಂಕರ್‌ 94 ಹಾಗೂ ಇಲ್ಲಿ 5 ನೋಟಾ ಮತ ಚಲಾವಣೆಯಾಗಿವೆ. ಬಿಎಸ್ಪಿ ಹಾಗೂ ಜೆಡಿಎಸ್‌ ಕಳಪೆ ಸಾಧನೆ ಮಾಡಿದೆ.

ವಾರ್ಡ್‌ 13 ನಾನಾ ಕಾರಣಗಳಿಗೆ ತೀವ್ರ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್‌ನ ಘಟಾನುಘಟಿ ನಾಯಕರು ತೆರೆಮರೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಿದ್ದರು.

ಈ ವಾರ್ಡ್‌ನಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಿತ್ತು. ಕೊನೆ ಕ್ಷಣದಲ್ಲಿ ಬಿಜೆಪಿಯ ಅಭ್ಯರ್ಥಿ ಪವಿತ್ರ ರಮೇಶ್‌ 204ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಈ ವಾರ್ಡ್‌ನಲ್ಲಿ ಶಾಸಕರ ಆಪ್ತ ವಿಜಯ್‌, ಶಾಸಕರ ಆಪ್ತ ಕಾರ್ಯದರ್ಶಿ ಗಿರೀಶ್‌ಬಾಬು, ನಾಮನಿರ್ದೇಶನ ಸದಸ್ಯ ಮಧುಚಂದ್ರ ಸೇರಿ ಹಲವು ಪ್ರಬಲ ಬಿಜೆಪಿ ಕಾರ್ಯಕರ್ತರು, ಮುಖಂಡರಿದ್ದು, ಗೆಲುವು ಪ್ರತಿಷ್ಠೆಯಾಗಿತ್ತು.

ಎಲ್ಲರೂ ಒಗ್ಗೂಡಿ ಮತದಾರ ಮನವೊಲಿಸಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿಯ ಪವಿತ್ರ ರಮೇಶ್‌ (504), ಕಾಂಗ್ರೆಸ್‌ ಅಭ್ಯರ್ಥಿ ಸರಸ್ವತಿ ಮನೋಹರ್‌ (296) ಹಾಗೂ 4ನೋಟಾ ಮತಗಳು ಚಲಾವಣೆಗೊಂಡಿದೆ.

ಬಾಕ್ಸ್‌.....

ಸಚಿವ ಸೋಮಣ್ಣ, ಸಿ.ಟಿ ರವಿ, ವಿಜಯೇಂದ್ರ ಪ್ರಶಂಸೆ

ಕೊಳ್ಳೇಗಾಲದ ನಗರಸಭೆಯಲ್ಲಿ 6 ವಾರ್ಡ್‌ಗಳಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸುತ್ತಿದ್ದಂತೆ ಖುದ್ದು ದೂರವಾಣಿ ಕರೆ ಮಾಡಿದ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌, ಸಚಿವ ವಿ.ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ಶಾಸಕರಿಗೆ ಶುಭಕೋರಿ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹ ಖುದ್ದು ಶಾಸಕರಿಗೆ ಕರೆ ಮಾಡಿ

6ರಲ್ಲಿ ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಕಾರ್ಯಕರ್ತರು, ಶಾಸಕರಿಗೆ ಅಭಿನಂದನೆ ಸಲ್ಲಿಸಿ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ರಾಷ್ಠೀಯ ಕಾರ್ಯದರ್ಶಿಗಳೂ, ಮಾಜಿ ಸಚಿವರೂ ಆದ ಸಿ.ಟಿ. ರವಿ ಅವರು ಸಹ ಖುದ್ದು ಶಾಸಕರ ದೂರವಾಣಿ ಕರೆಗೂ ಪೋನ್‌ ಮಾಡಿ ಉತ್ತಮ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

Follow Us:
Download App:
  • android
  • ios