ಚಿತ್ತಾಪುರ: ಮಾಜಿ ಶಾಸಕ, ಬಿಜೆಪಿ ಹಿರಿಯ ನಾಯಕ ವಾಲ್ಮೀಕಿ ನಾಯಕ ನಿಧನ
ಹೃದಯಾಘಾತದಿಂದ ನಿಧನರಾದ ವಾಲ್ಮೀಕಿ ನಾಯಕ| ಶನಿವಾರ ಮಧ್ಯಾಹ್ನ 1 ಗಂಟೆಗೆ ಜಿಲ್ಲೆಯ ವಾಡಿ ಪಟ್ಟಣದಲ್ಲಿ ಅಂತ್ಯಕ್ರಿಯೆ| ಮಾಜಿ ಶಾಸಕ ವಾಲ್ಮೀಕಿ ನಾಯಕ ನಿಧನಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಕಂಬನಿ|
ಕಲಬುರಗಿ(ಮಾ.19): ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿಯ ಹಿರಿಯ ಮುಖಂಡ ವಾಲ್ಮೀಕಿ ನಾಯಕ(72) ಹೃದಯಾಘಾತದಿಂದ ಇಂದು(ಶುಕ್ರವಾರ) ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ವಾಕಿಂಗ್ ಮಾಡುವ ವೇಳೆ ಏಕಾಏಕಿ ಎದೆನೋವು ಕಾಣಸಿಕೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನಮ ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲಿ ಇಹಲೊಕ ತ್ಯಜಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಯೆ ಆಯ್ಕೆಯಾದ ಬಳಿಕ 2009 ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದ ವಾಲ್ಮೀಕಿ ನಾಯಕ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ವಿರುದ್ಧ ಗೆಲವು ಸಾಧಿಸಿದ್ದರು.
ನಾಗಮಂಗಲ: ಮಾಜಿ ಸಚಿವ, ಹಿರಿಯ ಮುತ್ಸದ್ದಿ ಹೆಚ್.ಟಿ. ಕೃಷ್ಣಪ್ಪ ಇನ್ನಿಲ್ಲ
ಮೃತರ ಅಂತ್ಯಕ್ರಿಯೆ ನಾಳೆ(ಶನಿವಾರ) ಮಧ್ಯಾಹ್ನ 1 ಗಂಟೆಗೆ ಜಿಲ್ಲೆಯ ವಾಡಿ ಪಟ್ಟಣದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಸೋನಾಬಾಯಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ವಾಲ್ಮೀಕಿ ನಾಯಕ ಅವರ ಅಕಾಲಿಕ ನಿಧನಕ್ಕೆ ಮಾಜಿ ಸಚಿವ ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ತಮ್ಮ ಶೋಕ ಸಂದೇಶ ತಿಳಿಸಿರುವ ಶಾಸಕರು "ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕರಾದ ವಾಲ್ಮಿಕಿ ನಾಯಕ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಇದನ್ನು ಈಗಲೂ ನಂಬಲಾಗುತ್ತಿಲ್ಲ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಶ್ರೀಯುತರ ನಿಧನದ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.