Asianet Suvarna News Asianet Suvarna News

ಚುನಾವಣೆ: ಬಿಜೆಪಿ ಬಣಗಳಲ್ಲಿಯೇ ಪೈಪೋಟಿ..!

ಮತದಾನ ತಪ್ಪಿಸಲು ನಡೆದ ರಾಜೀ ಯತ್ನ ವಿಫಲ| ಅಗ್ಗಾಶಿಕುಂಬ್ರಿ, ಭಾಗ್ವತ್‌ ತಂಡಗಳ ನಡುವೆ ಸ್ಪರ್ಧೆ| ಸಂಘದಲ್ಲಿ 1762 ಸದಸ್ಯರಿದ್ದು, ಅವರಲ್ಲಿ ಕೇವಲ 981 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು| 

BJP Two Teams Competition in TMC Election in Yallapura grg
Author
Bengaluru, First Published Oct 14, 2020, 12:18 PM IST

ಶಂಕರ ಭಟ್ಟತಾರೀಮಕ್ಕಿ

ಯಲ್ಲಾಪುರ(ಅ.14): ತಾಲೂಕಿನ ಪ್ರತಿಷ್ಠಿತ ತಾಲೂಕು ಮಾರ್ಕೆಟಿಂಗ್‌ ಸೊಸೈಟಿ (ಟಿಎಂಎಸ್‌)ಗೆ ಇಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಯಲ್ಲೇ ಎರಡು ಬಣಗಳು ಹುಟ್ಟಿಕೊಂಡಿದ್ದು ಸೊಸೈಟಿಯ ಅಧಿಕಾರಕ್ಕಾಗಿ ಎರಡೂ ಬಣಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಇಬ್ಬಣಗಳೂ ಇದನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು ಮತದಾರರಲ್ಲಿ ಗೊಂದಲ ಮೂಡಿಸಿದೆ.

ಸೊಸೈಟಿಯ 14 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು, ಈಗಾಗಲೇ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 13 ಸ್ಥಾನಗಳಿಗೆ ಹೋರಾಟ ನಡೆದಿದೆ. ಪಕ್ಷದ ನಾಯಕರೇ ಇಲ್ಲಿ ಎದುರಾಳಿ. ಪಕ್ಷದ ಚಿನ್ಹೆಯ ಮೇಲೆ ಚುನಾವಣೆ ನಡೆಯದಿದ್ದರೂ ಸಹ ಬೆಂಬಲಿಗರಲ್ಲಿಯೇ ತೀವ್ರ ಪೈಪೋಟಿ ಎದುರಾಗಿರುವುದು ಮುಖಂಡರಿಗೆ ಚಿಂತೆ ಮೂಡಿಸಿದೆ. ಇದು ಮುಂಬರುವ ಇನ್ನಿತರ ಚುನಾವಣೆ , ಸಂಘಟನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಬುಧವಾರ ಮುಂಜಾನೆ 9 ಗಂಟೆಯಿಂದ 4 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಹಿಂದಿನ ಬಾರಿ ಅಧ್ಯಕ್ಷರಾಗಿದ್ದ ಎನ್‌.ಕೆ. ಭಟ್ಟಅಗ್ಗಾಶಿಕುಂಬ್ರಿ ನೇತೃತ್ವದ ತಂಡ ಮತ್ತು ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘ ಅಧ್ಯಕ್ಷ, ಟಿಎಂಎಸ್‌ ನಿರ್ದೇಶಕ ಉಮೇಶ ಭಾಗ್ವತ್‌ರ ತಂಡಗಳ ನಡುವೆ ಅತ್ಯಂತ ತುರುಸಿನ ಪೈಪೋಟಿ ನಡೆದಿದೆ. ಕಾಂಗ್ರೆಸ್‌ ಪಕ್ಷದಿಂದ ಇಬ್ಬರು ಪ್ರಮುಖರು ಮಾತ್ರ ಸ್ಪರ್ಧಿಸುತ್ತಿದ್ದಾರೆ.

ಮೂರು ವರ್ಷಗಳ ಕಾಲ ಸಂಘದ ಯಾವುದೇ ಸದಸ್ಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಭಾಗವಹಿಸಿ ಸಹಿ ಮಾಡದಿದ್ದಲ್ಲಿ ಆತನಿಗೆ ಮತದಾನದ ಹಕ್ಕಿಲ್ಲವೆಂದು ನಿಯಮ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳ ಪ್ರಮುಖರು ರಾಜ್ಯ ಶ್ರೇಷ್ಠ ನ್ಯಾಯಾಲಯದ ಮೆಟ್ಟಿಲೇರಿ ತಮ್ಮ ಮತದಾರರ ಯಾದಿ ನೀಡಿ ಅವರಿಗೆ ಮತದಾನದ ಹಕ್ಕನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿಯ 400 ಸದಸ್ಯರಿಗೆ ಮತದಾನದ ಹಕ್ಕು ಪಡೆದಿರುವುದಾಗಿ ಪ್ರಮುಖರು ಹೇಳುತ್ತಿದ್ದಾರೆ.

KSRTC : ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್

ಸಂಘದಲ್ಲಿ 1762 ಸದಸ್ಯರಿದ್ದು, ಅವರಲ್ಲಿ ಕೇವಲ 981 ಸದಸ್ಯರಿಗೆ ಮಾತ್ರ ಮತದಾನದ ಹಕ್ಕಿದ್ದು, ಉಳಿದ ಸದಸ್ಯರ ಹಕ್ಕನ್ನು ಸಂಸ್ಥೆ ರದ್ದುಗೊಳಿಸಿತ್ತು. ಆದರೆ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿದಾಗ ನ್ಯಾಯಾಲಯದಿಂದ ಈ ಸದಸ್ಯರಿಗೆ ಮತದಾನದ ಹಕ್ಕು ನೀಡುವ ಕುರಿತು ಯಾವುದೇ ನಿರ್ದೇಶನ ಈವರೆಗೆ ಬಂದಿಲ್ಲ ಎಂದಿದ್ದಾರೆ. ಈ ಬಳಿಕವೂ ಇನ್ನೂ 350ಕ್ಕೂ ಅಧಿಕ ಸದಸ್ಯರು ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ.

ಬಿಜೆಪಿಯೊಳಗೆ ನಡೆಯುತ್ತಿರುವ ತೀವ್ರ ಪೈಪೋಟಿ ಗಮನಿಸಿದ ಪಕ್ಷದ ಹಿರಿಯರು, ಸಹಕಾರ ಭಾರತಿ ಜಿಲ್ಲಾ ಪ್ರಮುಖರು, ಆರ್‌ಎಸ್‌ಎಸ್‌ ಪ್ರಮುಖರು ಸೇರಿ ರಾಜಿ ಮಾಡಿಸಲು ಪ್ರಯತ್ನ ನಡೆಸಿದ್ದರೂ ಅವರಾರ ಮಾತಿಗೂ ಬೆಲೆ ಕೊಡದೆ ಚುನಾವಣೆ ನಡೆಸುವ ಮೂಲಕ ಸಂಸ್ಥೆಗೆ ಲಕ್ಷಾಂತರ ರು. ಖರ್ಚಾಗಲು ಕಾರಣವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ಚುನಾವಣೆ ಪಕ್ಷದ ಚಿಹ್ನೆಯ ಮೇಲೆ ನಡೆಯದಿದ್ದರೂ, ಪಕ್ಷದ ಪ್ರಮುಖರು, ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಪಕ್ಷಕ್ಕೆ ಹೊಣೆಗಾರಿಕೆ ಬಿದ್ದಿದೆ. ಪಕ್ಷದಲ್ಲಿ ಎರಡು ಬಣಗಳಾಗದಂತೆ ರಾಜಿ ಮಾಡಿಸಲು ಸಾಕಷ್ಟುಯತ್ನಿಸಿದೆವು. ಆದರೂ ಕೊನೆಗೆ ಎರಡು ಗುಂಪುಗಳಾಗಿ ಚುನಾವಣೆ ಎದುರಿಸುತ್ತಿರುವುದು ಸಂತಸ ಉಂಟುಮಾಡಿಲ್ಲ ಎಂದು ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios