ದಾವಣಗೆರೆ [ಡಿ.19]:  ಪ್ರಬುದ್ಧತೆಯಾಗಲೀ, ಬುದ್ಧಿಶಕ್ತಿಯಾಗಲೀ ಇಲ್ಲದ ಉಡಾಫೆಯ ಮಾತುಗಳನ್ನಾಡಿ ರಾಜ್ಯದಲ್ಲಿ ಪ್ರಚಾರ ಕೈಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ಸೋಲು-ಗೆಲುವು ಸಹಜ ಎಂಬುದನ್ನೇ ಮರೆತಂತಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಹರಿಹಾಯ್ದರು.

ಚುನಾವಣೆಯೆಂದ ಮೇಲೆ ಸೋಲು-ಗೆಲುವು ಸಹಜ. ಸೋತೆವೆಂಬ ಕಾರಣಕ್ಕೆ ನಾವ್ಯಾರೂ ಎದೆಗುಂದಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವ ಜೊತೆಗೆ ರಾಜ್ಯ, ರಾಷ್ಟ್ರದಲ್ಲಿ ಅಧಿಕಾರಕ್ಕೂ ತರುತ್ತೇವೆ. ನಮ್ಮ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ ಎಂದು ತಿಳಿಸಿದರು.

'ಬಿಜೆಪಿ ಶಾಸಕರೇ ಸಿದ್ದು ನಮ್ಮ ನಾಯಕ ಅಂತಿದ್ದಾರೆ!'...

ದಾವಣಗೆರೆ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸಂಖ್ಯಾ ಬಲವಿದೆ. ಸಹಜವಾಗಿಯೇ ನಮ್ಮ ಪಕ್ಷವೇ ಅಧಿಕಾರಕ್ಕೂ ಬರಲಿದೆ. ಆದರೆ, ಬಿಜೆಪಿಯವರು ಆಪರೇಷನ್‌ ಕಮಲ ನಡೆಸಿದರೆ ಜನರು ಅದನ್ನೆಲ್ಲಾ ಸಹಿಸುವುದಿಲ್ಲ. ಮೇಷ್ಟ್ರ ಸರಿ ಇಲ್ಲದಿದ್ದಾಗ ಶಿಷ್ಯಂದಿರು ಯಾವ ರೀತಿ ಇರುತ್ತಾರೆ ಹೇಳಿ ಎಂದು ಅವರು ಪ್ರಶ್ನಿಸಿದರು.

ಮೇಷ್ಟ್ರು ಬಿ.ಎಸ್‌.ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಮೇಷ್ಟ್ರೆ ಹೀಗೆ ಮಾಡಿದರೆ ಶಿಷ್ಯಂದಿರು ಸುಮ್ಮನಿರುತ್ತಾರಾ? ದಾವಣಗೆರೆ ಪಾಲಿಕೆಯಲ್ಲೂ ಹಿಂಬಾಗಿನಿಂದ ರಾಜಕಾರಣ ಮಾಡುವ ಯೋಜನೆ ಹೊಂದಿದ್ದಾರೇನೋ. ಆದರೆ, ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌.ಮಲ್ಲಿಕಾರ್ಜುನ ಅಭಿವೃದ್ಧಿ ಕಾರ್ಯ, ಜನಪರ ಕೆಲಸ ಮೆಚ್ಚಿ, ಜನತೆ ಪಾಲಿಕೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ನೀಡಿದ್ದಾರೆ. ಆದರೆ, ಸಂಖ್ಯಾಬಲವೇ ಇಲ್ಲದ ಬಿಜೆಪಿ ಅಧಿಕಾರದ ಹಗಲುಗನಸು ಕಾಣುತ್ತಿದೆ ಎಂದು ಎಚ್‌.ಬಿ.ಮಂಜಪ್ಪ ಲೇವಡಿ ಮಾಡಿದರು.