ಬೆಂಗಳೂರು[ಡಿ.17]: ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ ಶಾಸಕರೇ ಸಿದ್ದರಾಮಯ್ಯ ಅವರ ಬಳಿ ಬಂದು ನೀವೇ ನಮ್ಮ ನಾಯಕರು ಎನ್ನುತ್ತಿದ್ದಾರೆ. ಅಂದರೆ, ಯಡಿಯೂರಪ್ಪ ಇನ್ನು ನಾಯಕರಲ್ಲ ಅಂತಾಯ್ತು. ಅಷ್ಟುಸಾಕು ನಮಗೆ (ಕಾಂಗ್ರೆಸ್ಸಿಗರಿಗೆ).

ಹೀಗಂತ ವ್ಯಂಗ್ಯವಾಡಿದ್ದಾರೆ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ. ಶಿವಕುಮಾರ್‌. ಸೋಮವಾರ ಸುದ್ದಿಗಾರರೊಂದಿಗೆ ಮತಾನಾಡಿದ ಅವರು, ಸಿದ್ದರಾಮಯ್ಯ ಅದೃಷ್ಟದ ಮುಖ್ಯಮಂತ್ರಿಯಾಗಿದ್ದರು. 11 ವರ್ಷಗಳಿಂದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಸಮರ್ಥರು. ಹೀಗಾಗಿಯೇ ಬಿಜೆಪಿಗೆ ಹೋಗಿರುವ ಶಾಸಕರೇ ಅವರ ಬಳಿ ಬಂದು ನೀವೇ ನಮ್ಮ ನಾಯಕರು ಎನ್ನುತ್ತಿದ್ದಾರೆ ಎಂದರು.

ಇನ್ನು ಕೆಪಿಸಿಸಿ ಸ್ಥಾನಕ್ಕೆ ತಾವು ಲಾಬಿ ನಡೆಸುತ್ತಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರು, ನನ್ನನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸೂಚಿಸಿ ಹೆಸರಿಸಬೇಡಿ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಕೋರಿದರು.

ಮತ್ತೆ ದೆಹಲಿಗೆ:

ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆ ನಡೆಯುವಾಗಲೇ ಡಿ.ಕೆ.ಶಿವಕುಮಾರ್‌ ಅವರು ಮತ್ತೊಮ್ಮೆ ದೆಹಲಿಗೆ ಪ್ರಯಾಣ ಬೆಳೆಸಲಿರುವುದು ಕುತೂಹಲ ಮೂಡಿಸಿದೆ. ಐಟಿ ಪ್ರಕರಣಗಳ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಬೇಕಿದೆ. ಪತ್ನಿಯ ಕೇಸ್‌ಗೆ ಸಂಬಂಧಪಟ್ಟಂತೆ ಕೆಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಹೀಗಾಗಿ ಮತ್ತೆ ದೆಹಲಿಗೆ ಹೋಗಬೇಕಾಗಿದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್‌ನಲ್ಲಿ ನಾನು ಮಾತ್ರ ಸಮರ್ಥನಲ್ಲ. ಪಕ್ಷದ ನಮ್ಮೆಲ್ಲ ನಾಯಕರು ಸಮರ್ಥರಿದ್ದಾರೆ. ದಿನೇಶ್‌ ಗುಂಡೂರಾವ್‌, ಸಿದ್ದರಾಮಯ್ಯ ಸಮರ್ಥರಲ್ಲವೇ ಎಂದು ಪ್ರಶ್ನಿಸಿದ ಅವರು, ಉಪ ಚುನಾವಣೆಯಲ್ಲಿ ಸೋತೆವು. ಹೀಗಾಗಿ ಸಿದ್ದರಾಮಯ್ಯ ಅವರು ಸಹಜವಾಗಿ ಬೇಸರಗೊಂಡಿದ್ದಾರೆ. ನಾನು ಕೂಡ ಹಲವು ಕ್ಷೇತ್ರಗಳಲ್ಲಿ ಓಡಾಡಿದ್ದೇನೆ. ಜನರು ಸೇರುತ್ತಿದ್ದದ್ದು ನೋಡಿ ಬಹಳ ಖುಷಿಯಾಗಿತ್ತು. ಆದರೆ ಅವು ಯಾವುದೂ ಕೂಡ ಮತಗಳಾಗಿ ಪರಿವರ್ತನೆಯಾಗಲಿಲ್ಲ. ಹೀಗಾಗಿ ನನಗೂ ಕೂಡ ನೋವಾಗಿದೆ ಎಂದರು.