ಕೃಷ್ಣರಾಜ ಕ್ಷೇತ್ರ: ಬಿಜೆಪಿಯಲ್ಲಿ ಬಗೆಹರಿಯದ ಟಿಕೆಟ್‌ ಗೊಂದಲ

ನಾಮಪತ್ರ ಸಲ್ಲಿಕೆ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿದ್ದರೂ ಬಿಜೆಪಿಯಲ್ಲಿ ನಗರದ ಕೃಷ್ಣರಾಜ ಕ್ಷೇತ್ರದ ಟಿಕೆಟ್‌ ಗೊಂದಲ ಬಗೆಹರಿಯುತ್ತಿಲ್ಲ.

BJP Ticket Conflict Continued in Krishnaraja Constituency snr

 ಅಂಶಿ ಪ್ರಸನ್ನಕುಮಾರ್‌

  ಮೈಸೂರು :  ನಾಮಪತ್ರ ಸಲ್ಲಿಕೆ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿದ್ದರೂ ಬಿಜೆಪಿಯಲ್ಲಿ ನಗರದ ಕೃಷ್ಣರಾಜ ಕ್ಷೇತ್ರದ ಟಿಕೆಟ್‌ ಗೊಂದಲ ಬಗೆಹರಿಯುತ್ತಿಲ್ಲ.

ಹಾಲಿ ಶಾಸಕ ಎಸ್‌.ಎ. ರಾಮದಾಸ್‌, ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌,  BJP  ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಕೆ.ಆರ್‌. ಕ್ಷೇತ್ರ ಮಾಜಿ ಅಧ್ಯಕ್ಷ ಡಾ.ಎ.ಎಸ್‌. ಚಂದ್ರಶೇಖರ್‌ ಹೆಸರುಗಳು ಪ್ರಸ್ತಾಪವಾಗುತ್ತಿವೆ.

ರಾಮದಾಸ್‌ ಅವರು 1994 ರಿಂದಲೂ ಇಲ್ಲಿ ಕಾಯಂ ಅಭ್ಯರ್ಥಿ. 1994, 1999, 2008 ಹಾಗೂ 2018- ಹೀಗೆ ನಾಲ್ಕು ಬಾರಿ ಗೆದ್ದಿದ್ದಾರೆ. 2004 ಹಾಗೂ 2013 ರಲ್ಲಿ ಸೋತಿದ್ದಾರೆ. ವಿಧಾನಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರು, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್‌ ನೀಡುವುದಕ್ಕೆ ಕೆಲ ಬ್ರಾಹ್ಮಣ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ಟಿಕೆಟ್‌ಗೆ ಪ್ರಬಲ ಪೈಪೋಟಿ ನಡೆಸಿದ್ದರು. ನಗರಾಧ್ಯಕ್ಷ ಶ್ರೀವತ್ಸ ಅವರ ಹೆಸರು ಕೂಡ ಇತ್ತು. ಹೀಗಾಗಿ ಮೊದಲ ಪಟ್ಟಿಯಲ್ಲಿ ರಾಮದಾಸ್‌ ಅವರಿಗೆ ಟಿಕೆಟ್‌ ಘೋಷಣೆಯಾಗಲಿಲ್ಲ. ಎರಡನೇ ಪಟ್ಟಿಯಲ್ಲೂ ಆಗಲಿಲ್ಲ.

ಬಿಜೆಪಿ-ಕಾಂಗ್ರೆಸ್ಸಿನಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಳ: ಎಚ್‌.ಡಿ.ಕುಮಾರಸ್ವಾಮಿ

ಇದರಿಂದ ತೀವ್ರ ನಿರಾಶರಾದ ರಾಮದಾಸ್‌ ಬೆಂಬಲಿಗರು ವಿದ್ಯಾರಣ್ಯಪುರಂನ ಗೃಹ ಕಚೇರಿ ಎದುರು ಪ್ರತಿಭಟಿಸಿ, ಕಾಂಗ್ರೆಸ್‌ ಸೇರಿ, ಪಕ್ಷೇತರರಾಗಿ ಸ್ಪರ್ಧಿಸಿ ಎಂದು ಒತ್ತಡ ಹಾಕಿದರು. ರಾಮದಾಸ್‌ ಕಣ್ಣೀರು ಹಾಕಿದರು. ಎಲ್ಲವನ್ನು ಕೇಂದ್ರದ ವರಿಷ್ಠರಿಗೆ ವಿವರಿಸಿರುವೆ. ಅವರ ತೀರ್ಮಾನ ಕಾಯೋಣ ಎಂದು ಸಮಾಧಾನಿಸಿದರು. ಇದಾಗಿ 24 ತಾಸು ಕಳೆದರೂ ಟಿಕೆಟ್‌ ಗೊಂದಲ ಬಗೆಹರಿದಿಲ್ಲ. ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮ ನಾಯಕರ ಫೋಟೋ ಹಾಕಿಕೊಂಡು ಇವರಿಗೆ ಟಿಕೆಟ್‌ ಎಂದು ಹರಿಯಬಿಡುತ್ತಿದ್ದಾರೆ.

ಕಾಂಗ್ರೆಸ್‌ ಬಾಗಿಲು ಬಂದ್‌

ಬಿಜೆಪಿಯಲ್ಲಿ ಟಿಕೆಟ್‌ ನಿರಾಕರಿಸುವ ಒಬ್ಬರು ಕಾಂಗ್ರೆಸ್‌ಗೆ ಸೇರಿ ಅಭ್ಯರ್ಥಿ ಆಗುತ್ತಾರೆ ಎಂದು ಹೇಳಲಾಗಿತ್ತು. ಕಾಂಗ್ರೆಸ್‌ ಕೂಡ ಅಳೆದು- ಸುರಿದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಅವರಿಗೆ ಟಿಕೆಟ್‌ ಘೋಷಿಸಿದೆ. ಅಲ್ಲದೇ ಬಿ ಫಾರಂ ಕೂಡ ನೀಡಿದೆ. ಅವರು ಸೋಮವಾರ (ಏ.17) ಬೆಳಗ್ಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಬಾಗಿಲು ಬಂದ್‌ ಎಂದೇ ಹೇಳಬಹುದು.

ಸೋಮಶೇಖರ್‌ 1999 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತು, 2004 ರಲ್ಲಿ ಜೆಡಿಎಸ್‌ ಅಲೆ ಇದ್ದಿದ್ದರಿಂದ ಮೊದಲ ಬಾರಿ ಗೆದ್ದಿದ್ದರು. 2008 ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. 2013 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು. ಬಿಜೆಪಿ- ಕೆಜೆಪಿ ನಡುವಿನ ಮತ ವಿಭಜನೆ ಇದಕ್ಕೆ ಕಾರಣವಾಗಿತ್ತು. ಇದೀಗ ಅವರಿಗೆ ಐದನೇ ಚುನಾವಣೆ.

ಜೆಡಿಎಸ್‌ನಿಂದ ಕೆ.ವಿ. ಮಲ್ಲೇಶ್‌

ಜೆಡಿಎಸ್‌ನಲ್ಲಿ ನಾಲ್ಕು ತಿಂಗಳು ಮುಂಚಿತವಾಗಿ ನಗರಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್‌ ಅವರಿಗೆ ಟಿಕೆಟ್‌ ಘೋಷಿಸಲಾಗಿತ್ತು. ಹೀಗಾಗಿ ಯಾವುದೇ ಗೊಂದಲ ಇಲ್ಲದೇ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ, ಮತ ಕೋರುತ್ತಿದ್ದಾರೆ. ಕಳೆದ ಬಾರಿ ಕೂಡ ಅವರೇ ಅಭ್ಯರ್ಥಿಯಾಗಿದ್ದಾರೆ.

Latest Videos
Follow Us:
Download App:
  • android
  • ios