Asianet Suvarna News Asianet Suvarna News

ಬಿಜೆಪಿ-ಕಾಂಗ್ರೆಸ್ಸಿನಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಳ: ಎಚ್‌.ಡಿ.ಕುಮಾರಸ್ವಾಮಿ

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ ವಂಚಿತ ಅತೃಪ್ತರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಜನತಾ ಪರಿವಾರದೊಂದಿಗೆ ಬೆಳೆದು ಅಲ್ಲಿ ಸೇರ್ಪಡೆಗೊಂಡವರಿದ್ದರು. ಅಂತಹವರು ಜೆಡಿಎಸ್‌ ಗೆ ವಾಪಸ್‌ ಬಂದರೆ ಸೇರ್ಪಡೆಗೊಳಿಸಿಕೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

Former CM HD Kumaraswamy Slams On Congress And BJP At Sirsi gvd
Author
First Published Apr 13, 2023, 2:40 AM IST | Last Updated Apr 13, 2023, 2:40 AM IST

ಶಿರಸಿ (ಏ.13): ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ ವಂಚಿತ ಅತೃಪ್ತರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಜನತಾ ಪರಿವಾರದೊಂದಿಗೆ ಬೆಳೆದು ಅಲ್ಲಿ ಸೇರ್ಪಡೆಗೊಂಡವರಿದ್ದರು. ಅಂತಹವರು ಜೆಡಿಎಸ್‌ ಗೆ ವಾಪಸ್‌ ಬಂದರೆ ಸೇರ್ಪಡೆಗೊಳಿಸಿಕೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ನಗರಕ್ಕೆ ಬುಧವಾರ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡ ಕೆಲವರಿಗೆ ಈಗ ವಾಸ್ತವ ಅರ್ಥವಾಗುತ್ತಿದೆ. ಅಂತವರು ಮರಳಿ ಬಂದರೆ ಸೇರ್ಪಡೆಗೊಳಿಸಿಕೊಳ್ಳುತ್ತೇವೆ. 

ಜಗದೀಶ ಶೆಟ್ಟರ್‌ ಟಿಕೆಟ್‌ ಸಿಗದಿರುವ ಬಗ್ಗೆ ಅಸಮಾಧಾನಿತರಾಗಿರಬಹುದು. ಆದರೆ, ಬಿಜೆಪಿ ಬಿಡುತ್ತಾರೆ ಎಂಬ ಬಗ್ಗೆ ಖಾತ್ರಿ ಇಲ್ಲ. ಮುಂದೇನಾಗುತ್ತದೆ ನೋಡೋಣ ಎಂದರು. ಬಿಜೆಪಿಯಲ್ಲಿ ಹಿರಿಯ ಮುಖಂಡರನ್ನು ಕೈ ಬಿಟ್ಟಿರುವ ಬಗ್ಗೆ ಪ್ರತಿಕ್ರಯಿಸಲು ನಿರಾಕರಿಸಿದ ಕುಮಾರಸ್ವಾಮಿ, ಅದು ಅವರ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ಪ್ರತಿಕ್ರಿಯಿಸಲು ನಾನು ಯಾರು ಎಂದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಬಲವಾಗಿದೆ. ಈ ಬಾರಿ ಕನಿಷ್ಠ ನಾಲ್ಕು ಸ್ಥಾನಗಳಾದರೂ ಉತ್ತರ ಕನ್ನಡದಿಂದ ನಿರೀಕ್ಷೆ ಮಾಡಿದ್ದೇವೆ ಎಂದರು.

ಕ್ಷೇತ್ರದ ಅಭಿವೃದ್ಧಿ, ಹೊಸ ಆಲೋಚನೆಯೊಂದಿಗೆ ಸ್ಪರ್ಧೆ: ಶಾಸಕ ಸಿ.ಎಸ್‌.ಪುಟ್ಟರಾಜು

ಮಾರಿಕಾಂಬೆ ಮುಂದೆ ಬಿ ಫಾರಂ: ನಗರದ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದ ಎಚ್‌.ಡಿ. ಕುಮಾರಸ್ವಾಮಿ ದೇವಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ಜಿಲ್ಲೆಯ ಅಭ್ಯರ್ಥಿಗಳ ಬಿ ಫಾರಂನ್ನೂ ಸಹ ಮಾರಿಕಾಂಬೆ ದೇವಿಯ ಮುಂದಿಟ್ಟು ಪೂಜೆ ಸಲ್ಲಿಸಿದರು. ಅಭ್ಯರ್ಥಿ ಉಪೇಂದ್ರ ಪೈ, ನಾಗೇಶ ನಾಯ್ಕ ಕಾಗಾಲ, ದೇವಾಲಯದ ಅಧ್ಯಕ್ಷ ಎಂ.ಆರ್‌. ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ್‌ ಇತರರಿದ್ದರು.

ಪಿಕ್‌ ಪಾಕೇಟ್‌: ಎಚ್‌.ಡಿ. ಕುಮಾರಸ್ವಾಮಿ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದಾಗಲೇ ವ್ಯಕ್ತಿಯೋರ್ವ ಕಾರ್ಯಕರ್ತರ, ಮಾಧ್ಯಮದವರ ಪಿಕ್‌ ಪಾಕೆಟ್‌ ಮಾಡಿದ ಘಟನೆ ನಡೆಯಿತು. ಕುಮಾರಸ್ವಾಮಿ ಇಲ್ಲಿಯ ಕಾಲೇಜು ಮೈದಾನದಲ್ಲಿ ಇಳಿಯುತ್ತಿದ್ದಂತೆಯೇ ಕಾರ್ಯಕರ್ತರು ಅವರನ್ನು ಮುತ್ತಿಕೊಂಡರು. ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿರುವಾಗ ವ್ಯಕ್ತಿಯೋರ್ವ ಪಿಕ್‌ ಪಾಕೆಟ್‌ ಕೈ ಚಳಕ ಆರಂಭಿಸಿದ್ದ. ತಕ್ಷಣವೇ ಪತ್ತೆಹಚ್ಚಿದ ಪೊಲೀಸರು ಆತನನ್ನು ಎಳೆದೊಯ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಲಾಟರಿ ಸಿಎಂ ಆದರೂ ಲೂಟಿ ಹೊಡೆದಿಲ್ಲ: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕ್ಯಾಮೆರಾ ಹಿಡಿದು ಓಡಾಡುವ ಬದಲು, ಬಡ ಜನರು ವಾಸಿಸುವ ಕಡೆಗೆ ಹೋಗಬೇಕಿತ್ತು. ಅವರ ಕಷ್ಟಆಲಿಸಬೇಕಿತ್ತು ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಜಾತಿ ಧರ್ಮದ ಆಧಾರದ ಮೇಲೆ ಮತ ನೀಡಬೇಡಿ. ಈ ಸಲ ನಮಗೆ ಅವಕಾಶ ಮಾಡಿಕೊಡಿ. ನಿಮ್ಮ ಬದುಕನ್ನು ಬದಲಿಸಿ ತೋರಿಸುತ್ತೇನೆ ಎಂದು ನುಡಿದರು. ನಗರದ ಗಣೇಶಪೇಟೆಯಲ್ಲಿ ನಡೆದ ಪಕ್ಷದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ವನ್ಯ ಜೀವಿಗಳ ಜೊತೆಗೆ, ಅವುಗಳಿಂದ ದಾಳಿಗೊಳಗಾದವರ ಅಳಲನ್ನು ಪ್ರಧಾನಿ ಆಲಿಸಬೇಕಿತ್ತು ಎಂದರು. 

ಸಂಪರ್ಕ ಕೊರತೆಯಿಂದಾಗಿ ರಘುಪತಿ ಭಟ್ಟರಿಗೆ ವಿಷಯ ತಿಳಿಸಲು ಸಾಧ್ಯವಾಗಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ನಾನು ಲಾಟರಿ ಮುಖ್ಯಮಂತ್ರಿಯಾದರೂ ರಾಜ್ಯವನ್ನು ಲೂಟಿ ಹೊಡೆಯುವ ಕೆಲಸ ಮಾಡಿಲ್ಲ ಎಂದು ಇದೇ ವೇಳೆ ಹೇಳಿದರು. ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿ ಹೊಳೆ ಹರಿಸುತ್ತೇವೆ ಎನ್ನುವ ಬಿಜೆಪಿಯವರು, ರಾಜ್ಯದಲ್ಲಿ ಎಂಟು ವರ್ಷ ಏನು ಮಾಡಿದ್ದಾರೆ? ಹುಬ್ಬಳ್ಳಿಯಲ್ಲಿ ರಸ್ತೆಗಳ ಸ್ಥಿತಿ ಅಧೋಗತಿ ತಲುಪಿವೆ. ಆದರೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳುತ್ತಾರೆ. ಹಾಗಾದರೆ, ಹಣ ಎಲ್ಲಿಗೆ ಹೋಯಿತು? ಕೇಂದ್ರದಲ್ಲಿ ಪೂರ್ಣ ಬಹುಮತ ಸರ್ಕಾರ ಇದ್ದರೂ ಏನೂ ಆಗಿಲ್ಲ. ಹಳ್ಳಿಗಳ ಸ್ಥಿತಿ ಬದಲಾಗಿಲ್ಲ. ದೇಶ ಸ್ವಚ್ಛ ಭಾರತವಾಗಿದೆ ಎಂದು ಮೋದಿ, ಜೋಶಿ ಪೊರಕೆ ಹಿಡಿದು ಪೋಸ್‌ ಕೊಟ್ಟಿದ್ದಾರೆ. ಆದರೆ, ಹಳ್ಳಿಗಳಲ್ಲಿ ಶೌಚಾಲಯಗಳೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios