ಎರಡು ಬಾರಿ ಬಿಜೆಪಿ ಮತ್ತು ಒಂದು ಬಾರಿ ಜೆಡಿಎಸ್‌ ಅಭ್ಯರ್ಥಿ ಗೆದ್ದಿದ್ದು, ಈ ಬಾರಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಇದ್ದಂತೆ ಭಾಸ ವಾಗುತ್ತಿದ್ದರೂ ಸದ್ಯಕ್ಕಂತೂ ಬಿಜೆಪಿ ಮತ್ತು ಜೆಡಿಎಸ್‌ ನಡುವೆಯೇ ಜಂಗಿ ಕುಸ್ತಿ ಇದ್ದಂತಿದೆ. ಯಾರೇ ಗೆದ್ದರೂ ಬಹಳ ಅಂತರದ ಗೆಲುವು ಇಲ್ಲ ಎನ್ನುವುದು ಕ್ಷೇತ್ರದಲ್ಲಿ ಕೇಳಿ ಬರುತ್ತಿರು ಮಾತು.

ಗೋಪಾಲ್‌ ಯಡಗೆರೆ

ಶಿವಮೊಗ್ಗ(ಏ.13): ಕ್ಷೇತ್ರ ಮರುವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿದ್ದು, ಇದುವರೆಗೆ ಒಟ್ಟು ಮೂರು ಚುನಾವಣೆಗಳು ನಡೆದಿವೆ. ಎರಡು ಬಾರಿ ಬಿಜೆಪಿ ಮತ್ತು ಒಂದು ಬಾರಿ ಜೆಡಿಎಸ್‌ ಅಭ್ಯರ್ಥಿ ಗೆದ್ದಿದ್ದು, ಈ ಬಾರಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಇದ್ದಂತೆ ಭಾಸ ವಾಗುತ್ತಿದ್ದರೂ ಸದ್ಯಕ್ಕಂತೂ ಬಿಜೆಪಿ ಮತ್ತು ಜೆಡಿಎಸ್‌ ನಡುವೆಯೇ ಜಂಗಿ ಕುಸ್ತಿ ಇದ್ದಂತಿದೆ. ಯಾರೇ ಗೆದ್ದರೂ ಬಹಳ ಅಂತರದ ಗೆಲುವು ಇಲ್ಲ ಎನ್ನುವುದು ಕ್ಷೇತ್ರದಲ್ಲಿ ಕೇಳಿ ಬರುತ್ತಿರು ಮಾತು.

ಲಿಂಗಾಯಿತರು ಮತ್ತು ಪರಿಶಿಷ್ಟವರ್ಗದವರು ಹೆಚ್ಚಾಗಿ ಇರುವ ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಪ್ರಭಾವ ದಟ್ಟವಾಗಿತ್ತು. ಹೀಗಾಗಿ 2008 ರಲ್ಲಿ ಬಿಜೆಪಿಯ ಕೆ.ಜಿ.ಕುಮಾರ ಸ್ವಾಮಿ ಗೆದ್ದಿದ್ದರು. 2013ರಲ್ಲಿ ಬಿಜೆಪಿ-ಕೆಜೆಪಿ ನಡುವಿನ ಪೈಪೋಟಿಯಲ್ಲಿ ಜೆಡಿಎಸ್‌ನ ಶಾರದಾ ಪೂರಾರ‍ಯನಾಯ್ಕ್‌ ಸುಲಭವಾಗಿ ಗೆದ್ದು ಬಂದರು. ಆದರೆ ಮತ ಗಳಿಕೆಯ ಒಟ್ಟಾರೆ ಲೆಕ್ಕಾ ಚಾರದಲ್ಲಿ ಬಿಜೆಪಿ ಮತ್ತು ಕೆಜೆಪಿ ಒಟ್ಟಾಗಿ ಗಳಿಸಿದ ಮತ ಶಾರದಾ ಪೂರಾರ‍ಯನಾಯ್ಕ್‌ ಅವರು ಗಳಿಸಿದ ಮತಕ್ಕಿಂತ ಸುಮಾರು 2 ಸಾವಿರ ಹೆಚ್ಚಾಗಿತ್ತು. 2018ರಲ್ಲಿ ಬಿಜೆಪಿಯ ಕೆ. ಬಿ. ಅಶೋಕ್‌ ನಾಯ್ಕ್‌ ಅವರು ಜೆಡಿಎಸ್‌ನ ಶಾರದಾ ಪೂರಾರ‍ಯನಾಯ್ಕ್‌ ಅವರನ್ನು ಸುಮಾರು 4 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

ನನ್ನ ಮಗಳು ಎದೆಗೆ ಚೂರಿ ಹಾಕಿದ್ದಾಳೆ: ಅಪ್ಪ ಕಾಂಗ್ರೆಸ್‌- ಮಗಳು ಬಿಜೆಪಿ

ಆದರೆ ಈಗಿನ ಪರಿಸ್ಥಿತಿ ಸುಲಭವಾಗಿಲ್ಲ. ಬಂಜಾರ ಸಮುದಾಯ ಸ್ವಲ್ಪ ಸಿಟ್ಟಾಗಿದೆ. ಶಾಸಕ ಅಶೋಕ್‌ ನಾಯ್ಕ್‌ ಅವರ ವಿರುದ್ಧ ಸಣ್ಣ ಅಲೆಯೊಂದು ಎದ್ದಿದೆ ಎಂದು ಆ ಪಕ್ಷದವರೇ ಹೇಳುತ್ತಾರೆ. ಕೆಲಸ ಮಾಡಿದರೂ ಸೀಮಿತ ಪ್ರದೇಶದಲ್ಲಷ್ಟೇ ಸಂಪರ್ಕ ಇಟ್ಟುಕೊಂಡಿದ್ದಾರೆ. ಕೈಗೆ ಸಿಗುವುದಿಲ್ಲ ಎನ್ನುವುದು ಅವರ ಮೇಲಿನ ಆರೋಪ. ಇನ್ನು ಈಗಾಗಲೇ ಅಧಿಕೃತ ವಾಗಿ ಜೆಡಿಎಸ್‌ ಟಿಕೆಟ್‌ ಪಡೆದಿರುವ ಶಾರದಾ ಪೂರಾರ‍ಯನಾಯ್ಕ್‌ ಅವರು ಚುನಾವಣೆಯಲ್ಲಿ ಸೋತ ಬಳಿಕವೂ ಇಡೀ ಕ್ಷೇತ್ರದಾದ್ಯಂತ ಓಡಾಡಿಕೊಂಡು ಪಕ್ಷ ಸಂಘಟಿಸಿದ್ದಾರೆ. ಇದು ಅವರಿಗೆ ಲಾಭವಾಗಬಹುದು. ಜೊತೆಗೆ ಪರಿಶಿಷ್ಟಸಮುದಾಯದ ಎಡಗೈ ಸಮುದಾಯ ಅವರ ಜೊತೆಗೆ ನಿಲ್ಲಬಹುದು ಎಂದು ಅವರ ಲೆಕ್ಕಾಚಾರ.

ಬಿಜೆಪಿ ಹಾಲಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ್‌ ಅವರಿಗೆ ಟಿಕೆಟ್‌ ಪ್ರಕಟಿಸಿದೆ. ಈ ಕ್ಷೇತ್ರದಲ್ಲಿ ಪರಿಶಿಷ್ಟಜಾತಿಯ ಜೊತೆ ಲಿಂಗಾಯಿತ ಸಮುದಾಯ ಬಿಜೆಪಿಯನ್ನು ಹಿಂದಿನಿಂದ ಬೆಂಬಲಿಸುತ್ತಾ ಬಂದಿದ್ದು, ಈಗಲೂ ಇದನ್ನೇ ನಂಬಿಕೊಳ್ಳಬೇಕಾಗಿದೆ. ಇನ್ನು ಕಾಂಗ್ರೆಸ್‌ನಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದ ಡಾ.ಶ್ರೀನಿವಾಸ ಕರಿಯಣ್ಣ, ಎಸ್‌.ರವಿಕುಮಾರ್‌, ಪಲ್ಲವಿ, ಬಲ ದೇವಕೃಷ್ಣ, ನಾರಾಯಣಸ್ವಾಮಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಇದುವರೆಗೆ ಈ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರು ಪ್ರಕಟಗೊಂಡಿಲ್ಲ. ಹೀಗಾಗಿ ಇದುವರೆಗೆ ಪಕ್ಷದ ಪ್ರಚಾರ ಆರಂಭ ವಾಗಿಯೇ ಇಲ್ಲ.

ಕ್ಷೇತ್ರದ ಹಿನ್ನೆಲೆ:

ಹೊಳೆ ಹೊನ್ನೂರು ಮೀಸಲು ಕ್ಷೇತ್ರ ಮತ್ತು ಹೊಸ ನಗರ ವಿಧಾನಸಭಾ ಕ್ಷೇತ್ರದ ಭಾಗಗಳನ್ನು ಸೇರಿಸಿ 2008 ರಲ್ಲಿ ಹೊಸ ಕ್ಷೇತ್ರವಾಗಿ ರಚನೆಯಾಗಿದ್ದೇ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ. ಕ್ಷೇತ್ರವಿಂಗಡನೆಯ ಬಳಿಕ ನಡೆದ ಮೂರು ಚುನಾವಣೆಯಲ್ಲಿ ಎರಡು ಬಾರಿ ಬಿಜೆಪಿ ಮತ್ತು ಒಂದು ಬಾರಿ ಜೆಡಿಎಸ್‌ ಗೆಲುವು ಸಾಧಿಸಿದೆ.

ಈಶ್ವರಪ್ಪ ರಾಜೀನಾಮೆಯಿಂದ ಬಿಜೆಪಿಗೆ ಸಂಕಷ್ಟ, ಶಿವಮೊಗ್ಗ ಪಾಲಿಕೆಯ 19 ಸದಸ್ಯರ ರಾಜೀನಾಮೆ!

ಜಾತಿವಾರು ಲೆಕ್ಕಾಚಾರ:

ಒಟ್ಟು 2,08,062 ಮತದಾರರಿದ್ದು, ಲಿಂಗಾಯಿತ ಮತ್ತು ಪರಿಶಿಷ್ಟವರ್ಗದವರು ಹೆಚ್ಚಾಗಿದ್ದಾರೆ. ಪರಿಶಿಷ್ಟರಲ್ಲಿ ಎಡಗೈ ಸಮುದಾಯವೇ ಅತಿ ಹೆಚ್ಚಾಗಿದ್ದಾರೆ. ಭೋವಿ, ಬಂಜಾರ ಕೂಡ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ಒಕ್ಕಲಿಗರು, ಮುಸ್ಲಿಂರು ಕೂಡ ಇದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.