ಮಂಗಳೂರು(ಜೂ.19): ವಿಧಾನ ಪರಿಷತ್‌ಗೆ ಮೂವರನ್ನು ಬಿಟ್ಟು ನಾಲ್ಕನೇ ಅಭ್ಯರ್ಥಿ ಯಾರು ಎಂದು ಪಕ್ಷದ ಹಿರಿಯ ನಾಯಕರೇ ಗೊಂದಲದಲ್ಲಿದ್ದಾಗ ಬುಧವಾರ ರಾತ್ರಿಯೇ ಬೆಳ್ತಂಗಡಿಯ ಮನೆಯಲ್ಲಿದ್ದ ಸಂಘ ನಿಷ್ಠ ಕಾರ್ಯಕರ್ತರೊಬ್ಬರಿಗೆ ಫೋನ್‌ ಕರೆಯೊಂದು ಬಂದಿತ್ತು. ತಕ್ಷಣ ಅವರು ಹೊರಟು ಗುರುವಾರ ಬೆಳಗಾಗುವ ಮೊದಲೇ ಬೆಂಗಳೂರು ತಲುಪಿದ್ದರು!

ಅವರು ಬೇರಾರೂ ಅಲ್ಲ, ಬಿಜೆಪಿಯ ಕೊನೆ ಕ್ಷಣದ ಅಚ್ಚರಿಯ ಅಭ್ಯರ್ಥಿ ದಕ್ಷಿಣ ಕನ್ನಡದ ಪ್ರತಾಪ್‌ಸಿಂಹ ನಾಯಕ್‌. ರಾಜ್ಯಸಭೆಗೆ ರಾಜ್ಯ ನಾಯಕರ ನಿರೀಕ್ಷೆ ಮೀರಿ ಹೈಕಮಾಂಡ್‌ ಅಚ್ಚರಿಯ ಅಭ್ಯರ್ಥಿಗಳಿಬ್ಬರನ್ನು ಆಯ್ಕೆ ಮಾಡಿದಂತೆಯೇ ವಿಧಾನ ಪರಿಷತ್‌ನ ಒಂದು ಸ್ಥಾನದಲ್ಲೂ ಇದೇ ರೀತಿಯ ಆಯ್ಕೆ ನಡೆದಿದೆ. ಬಿಜೆಪಿ ಹೈಕಮಾಂಡ್‌ ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ ರಾಜ್ಯದಲ್ಲಿ ಹೆಚ್ಚಿನವರಿಗೆ ಪರಿಚಯವೇ ಇಲ್ಲದ ಪ್ರತಾಪ್‌ ಸಿಂಹ ನಾಯಕ್‌ ಆಯ್ಕೆಯಾಗಿರುವುದು ಜಿಲ್ಲಾ ಬಿಜೆಪಿ ಮುಖಂಡರಿಗೂ ಆಶ್ಚರ್ಯ ತರಿಸಿದೆ.

ಮೇಲ್ಮನೆಗೆ 7 ಮಂದಿ ಅವಿರೋಧ ಆಯ್ಕೆ ನಿಶ್ಚಿತ..?

ಒಂದು ಮೂಲದ ಪ್ರಕಾರ ರಾಜ್ಯ ಬಿಜೆಪಿ ಹೈಕಮಾಂಡ್‌ಗೆ ಕಳುಹಿಸಿದ ಪಟ್ಟಿಯಲ್ಲಿ ಮೊದಲ ನಾಲ್ಕು ಹೆಸರುಗಳಲ್ಲಿ ಪ್ರತಾಪ್‌ಸಿಂಹ ನಾಯಕ್‌ ಅವರಿರಲಿಲ್ಲ. ಒಟ್ಟು 9-10 ಮಂದಿಯ ಪಟ್ಟಿಯಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತಷ್ಟೆ. ಕೊನೆ ಕ್ಷಣದಲ್ಲಿ ರಾತ್ರೋರಾತ್ರಿ ಎಲ್ಲರ ನಿರೀಕ್ಷೆ ಮೀರಿ ಪ್ರತಾಪ್‌ಸಿಂಹ ಹೆಸರು ಅಂತಿಮವಾಗಿತ್ತು.

ಬಿ.ಎಲ್‌. ಸಂತೋಷ್‌ ಆಪ್ತ: ಪ್ರತಾಪ್‌ ಸಿಂಹ ನಾಯಕ್‌ ಅವರು ಬಿಜೆಪಿ ಹಿರಿಯ ಮುಖಂಡ ಬಿ.ಎಲ್‌. ಸಂತೋಷ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರಿಗೆ ಹಿಂದಿನಿಂದಲೂ ಆಪ್ತರಾಗಿದ್ದವರು. ಆರೆಸ್ಸೆಸ್‌ ಹಿನ್ನೆಲೆಯುಳ್ಳವರು, ದ.ಕ. ಜಿಲ್ಲಾಧ್ಯಕ್ಷರಾಗಿದ್ದಾಗ ಬಿ.ಎಲ್‌. ಸಂತೋಷ್‌ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನಿಕಟ ಸಂಪರ್ಕದಲ್ಲಿದ್ದರು. ಈ ಎರಡು ಬಿಗಿ ಕೈಗಳೇ ಪ್ರತಾಪ್‌ಸಿಂಹ ಅವರ ಕೈಹಿಡಿದಿವೆ ಎನ್ನುವುದು ಜಿಲ್ಲಾ ಬಿಜೆಪಿ ಮುಖಂಡರೊಬ್ಬರ ಅಂಬೋಣ.

ಪರಿಷತ್ ಟಿಕೆಟ್ ಸಿಕ್ಕರೂ ಆರ್‌. ಶಂಕರ್‌ ಗಳಗಳನೇ ಅತ್ತರು!

ಪರಿಷತ್‌ ಆಯ್ಕೆಯ ಕಣದಲ್ಲಿ ಭರಾಟೆ ಜೋರಾಗುತ್ತಿದ್ದಂತೆ ಸಹಜವಾಗಿ ಪ್ರತಾಪ್‌ ಸಿಂಹ ನಾಯಕ್‌ ಕೂಡ ಆಕಾಂಕ್ಷಿಯಾಗಿದ್ದರು. ಈಗಲ್ಲದಿದ್ದರೂ ಮುಂದಿನ ಬಾರಿ ಎಂಎಲ್ಸಿ ಆಗುವ ನಿಟ್ಟಿನಲ್ಲಿ ಆಪ್ತ ಹೈಕಮಾಂಡ್‌ಗೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಜತೆಗೆ ಜಿಲ್ಲೆಯಿಂದ ಇನ್ನೂ ಇಬ್ಬರು ಹಿರಿಯ ಮುಖಂಡರು ಆಕಾಂಕ್ಷಿಗಳಾಗಿ ಬಿ.ಎಲ್‌. ಸಂತೋಷ್‌ ಅವರೊಂದಿಗೆ ಸಂಪರ್ಕದಲ್ಲಿದ್ದರು. ಅವರಿಬ್ಬರನ್ನು ಬಿಟ್ಟು ಪ್ರತಾಪ್‌ ಆಯ್ಕೆ ಉಳಿದ ಆಕಾಂಕ್ಷಿಗಳಿಗೆ ತಣ್ಣೀರೆರಚಿದೆ.

ಪ್ರತಾಪ್‌ಸಿಂಹ ನಾಯಕ್‌ ಎರಡು ಬಾರಿ ದ.ಕ. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದವರು. ಇವರು ಅಧಿಕಾರ ಪಡೆಯುವುದಕ್ಕಿಂತ ಹಿಂದಿನ ಎಂಎಲ್‌ಎ ಚುನಾವಣೆಯಲ್ಲಿ (2004) ದ.ಕ. ಜಿಲ್ಲೆಯಲ್ಲಿ 9ರಲ್ಲಿ 7 ಸೀಟ್‌ಗಳನ್ನು ಬಿಜೆಪಿ ಪಡೆದಿತ್ತು. ಪ್ರತಾಪ್‌ಸಿಂಹ ಅಧಿಕಾರವಧಿಯಲ್ಲಿ ಈ ಸಂಖ್ಯಾಬಲ ಕುಸಿದು 4ಕ್ಕೆ (2008) ಇಳಿದಿತ್ತು. ಇನ್ನೊಂದು ಚುನಾವಣೆಯಲ್ಲಿ ಇವರೇ ಜಿಲ್ಲಾಧ್ಯಕ್ಷರಾಗಿದ್ದಾಗ ಒಂದೇ ಸ್ಥಾನಕ್ಕೆ (2013) ಕುಸಿದುಬಿಟ್ಟಿತ್ತು. ಆದರೆ ಮೂಲದಿಂದಲೂ ಆರೆಸ್ಸೆಸ್‌ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದು ಈಗ ಅವರ ಕೈಹಿಡಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.