Davanagere: ವನ್ಯಜೀವಿಗಳ ಅಕ್ರಮ ಸಾಕಾಣಿಕೆ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಬಂಧನಕ್ಕೆ ಬಿಜೆಪಿ ಬೈಕ್ ರ್‍ಯಾಲಿ
ರೈಸ್ ಮಿಲ್ಲಿನ ಆವರಣದಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಈ ಕೂಡಲೇ ಬಂಧಿಸುವಂತೆ ಬಿಜೆಪಿ ಬೈಕ್ ರ್‍ಯಾಲಿ ನಡೆಸಿದೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಡಿ.29): ರೈಸ್ ಮಿಲ್ಲಿನ ಆವರಣದಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಈ ಕೂಡಲೇ ಬಂಧಿಸಬೇಕು. ಜತೆಗೆ ಅಮಾಯಕರನ್ನು ಕೈ ಬಿಡುವಂತೆ ಅಗ್ರಹಿಸಿ ನಗರದಲ್ಲಿ ಭಾರತೀಯ ಜನತಾ ಪಕ್ಷ ಬೈಕ್ ರ್‍ಯಾಲಿ ನಡೆಸಿತು. ನಗರ ದೇವತೆ ಶ್ರೀ ದುರ್ಗಾಂಬಿಕ ದೇವಿಯ ದೇವಸ್ಥಾನದಿಂದ ಆರಂಭಗೊಂಡ ಬೈಕ್ ರ್‍ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾ ಪಂಚಾಯತ ಸಮೀಪ ಇರುವ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ವನ್ಯಜೀವಿಯನ್ನು ಕೊಂದು ತಿಂದ ಪ್ರಕರಣ ಮಾತ್ರವಲ್ಲದೆ ತಮ್ಮ ಪಾರಂ ಹೌಸ್ ನಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ದಾವಣಗೆರೆಯ ಕಾಂಗ್ರೆಸ್ ಮುಖಂಡ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ವನ್ಯಜೀವಿ ಕಾನೂನು ಪ್ರಕಾರ ಬಂಧಿಸುವಂತೆ ಆಗ್ರಹಿಸಿದ್ದರೂ ಈವರೆಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು.
ಈ ಕುರಿತು ವಿಧಾನ ಮಂಡಲದ ಉಭಯ ಸದನಗಳಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ನಮ್ಮ ನಾಯಕರು ಸಿದ್ದರಿದ್ದಾರೆ. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ದಾವಣಗೆರೆಯ ವಲಯ ಅರಣ್ಯ ಅಧಿಕಾರಿ ಮತ್ತು ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ. ಮೇಲಾಧಿಕಾರಿಗಳು ಶೀಘ್ರದಲ್ಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ವ್ಯಕ್ತ ಪಡಿಸಿದರು.
Davanagere : ಕಾಂಗ್ರೆಸ್ ಮುಖಂಡ ಎಸ್.ಎಸ್. ಮಲ್ಲಿಕಾರ್ಜುನರನ್ನು ಬಂಧಿಸಿ-ಅಮಾಯಕರನ್ನು ಬಿಡಿ: ಬಿಜೆಪಿ ಆಗ್ರಹ
ಎಸ್.ಎಸ್.ಮಲ್ಲಿಕಾರ್ಜುನ ಭ್ರಷ್ಟಾಚಾರ ರಹಿತರಾಗಿದ್ದರೆ ನಿಮ್ಮ ದಾಖಲೆ ನೀವು ತನ್ನಿ, ನಾನು ತರುತ್ತೇನೆ. ನಾನು ಭ್ರಷ್ಟಾಚಾರ ಮಾಡಿದ್ದರೆ ಅದರಿಂದ ಆಗುವ ನಷ್ಟವನ್ನು ತುಂಬಿಕೊಡಲು ನಾನು ಸಿದ್ದ. ಹಾಗೆಯೇ ನಿಮ್ಮ ವಿರುದ್ಧ ಭ್ರಷ್ಟಾಚಾರ ಸಾಬೀತಾದರೆ ನೀವು ನಷ್ಟ ತುಂಬಿಕೊಡಲು ಸಿದ್ದರಿದ್ದೀರಾ ಎಂದು ಬಹಿರಂಗವಾಗಿ ಹೇಳಿಕೆ ನೀಡಿ. ಜತೆಗೆ ವನ್ಯಜೀವಿಗಳು ಸಿಕ್ಕಿರುವ ರೈಸ್ ಮಿಲ್ಲು ನಿಮ್ಮ ಒಡೆತನದಲ್ಲಿ ಇವೆಯೋ ಅಥವಾ ಇಲ್ಲವೋ ಮೊದಲು ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು. ಬೈಕ್ ರ್‍ಯಾಲಿ ಯಲ್ಲಿ ಬಿಜೆಪಿ ಮುಖಂಡರು ಆಪಾರ ಸಂಖ್ಯೆಯ ಕಾರ್ಯಕರ್ತರು ಇದ್ದರು.