ಮೈಸೂರು(ಜ.17): ಮುಂಬರುವ ನಗರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಸಮಿತಿಯೊಂದನ್ನು ರಚಿಸಲಾಗುವುದು ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುತ್ತದೆ ಎಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಹೇಳಿದ್ದಾರೆ.

ಹುಣಸೂರು ಪಟ್ಟಣದ ವಿಶ್ವೇಶ್ವರಯ್ಯ ವೃತ್ತದ ಬಳಿಯ ಪಕ್ಷದ ಕಾರ್ಯಕರ್ತ ಗಣೇಶ್‌ ಕುಮಾರಸ್ವಾಮಿ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿ ಆಕಾಂಕ್ಷಿಗಳ ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿರಬಹುದು. ಆದರೆ ಮತದಾರ ನಮಗೆ ಎರಡನೇ ಸ್ಥಾನದೊಂದಿಗೆ ಹೆಚ್ಚಿನ ಮತಗಳನ್ನೂ ನೀಡಿದ್ದಾನೆ ಎಂದಿದ್ದಾರೆ.

ಸಂಪುಟ ಕಗ್ಗಂಟಲ್ಲ, ಎಲ್ಲವನ್ನೂ ನಿರ್ಧರಿಸಿದ್ಯಂತೆ ಹೈಕಮಾಂಡ್..!

ಹುಣಸೂರು ನಗರ ವ್ಯಾಪ್ತಿಯಲ್ಲಿ 9,000ಕ್ಕ್ಕೂ ಅಧಿಕ ಮತಗಳು ದೊರಕಿವೆ. ಇದು ನಮಗೆ ಆಶಾದಾಯಕವಾಗಿದ್ದು, ವಾರ್ಡ್‌ಗಳಲ್ಲಿ ಜನಮನ್ನಣೆ ಗಳಿಸಿರುವ, ಜನರೊಂದಿಗೆ ಸತತ ಸಂಪರ್ಕ ಸಾಧಿಸಿರುವ ವ್ಯಕ್ತಿಗಳನ್ನು, ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್‌ ನೀಡಲಿದ್ದೇವೆ. ಇದರೊಂದಿಗೆ ಪಕ್ಷದ ವತಿಯಿಂದ ಸಾಕಷ್ಟುಆರ್ಥಿಕ ಸಹಕಾರವೂ ಸಿಗಲಿದೆ.

ಮೈಸೂರು: ಪಾಲಿಕೆಯಲ್ಲಿ ಮುಂದುವರಿಯುತ್ತಾ 'ಕೈ', 'ತೆನೆ' ಮೈತ್ರಿ..? ಸಾರಾ ಕೊಟ್ರು ಹಿಂಟ್

ಕೇಂದ್ರದ ಮೋದಿ ಸರ್ಕಾರದ 6 ವರ್ಷಗಳ ಜನಪರ ಯೋಜನೆಗಳು ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಯೋಜನೆಗಳು ಮತ್ತು ಕಳೆದ 4 ತಿಂಗಳಲ್ಲಿ ಹುಣಸೂರಿಗೆ ನೀಡಿರುವ ಕೊಡುಗೆಗಳನ್ನು ಮತದಾರರಿಗೆ ತಿಳಿಸುವ ಕಾರ್ಯವನ್ನು ನಾವೆಲ್ಲರೂ ಮಾಡೋಣ. ಹುಣಸೂರು ಜಿಲ್ಲೆಯಾಗಿಸುವುದರಿಂದ ಆಗುವ ಅನುಕೂಲಗಳ ಕುರಿತು ಜನರಿಗೆ ಮಾಹಿತಿ ಒದಗಿಸೋಣವೆಂದರು.

ಮುಖಂಡ ಸತ್ಯಪ್ಪ ಮಾತನಾಡಿ, ಪಟ್ಟಣದಲ್ಲಿ 24 ವರ್ಷಗಳಿಂದ ಬಡವರಿಗೆ ನಿವೇಶನ, ವಸತಿ ಒದಗಿಸಿಲ್ಲ. ಲಕ್ಷ್ಮಣತೀರ್ಥ ನದಿ ಮಲೀನಗೊಳ್ಳುವುದು ನಿಂತಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳು ಕೆಟ್ಟು ಕೂತಿವೆ. ಮಾರುತಿ ಬಡಾವಣೆ ಸೇರಿದಂತೆ ಹಲವಾರು ಬಡಾವಣೆಗಳು ಮೂಲಸೌಕರ್ಯದಿಂದ ವಂಚಿತವಾಗಿದೆ. ಈ ಹಿಂದಿನ ಜನಪ್ರತಿನಿಧಿಗಳ ಅಭಿವೃದ್ಧಿಶೂನ್ಯ ಕೊಡುಗೆಯೇ ಇದಕ್ಕೆಲ್ಲ ಕಾರಣವಾಗಿದ್ದು, ಮತದಾರರಿಗೆ ಪ್ರಧಾನಿ ಮೋದಿ ಜಾರಿಗೆ ತಂದಿರುವ ಆಯುಷ್ಮಾನ್‌ ಭಾರತ್‌ ಕಾರ್ಡ್‌, ಉಜ್ವಲ್‌ ಯೋಜನೆ ಸೇರಿದಂತ ಹಲವಾರುಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಿ ಮತಯಾಚಿಸೋಣ. ಪಕ್ಷವನ್ನು ಸದೃಢವಾಗಿ ಕಟ್ಟಿನಗರಸಭೆ ಅಧಿಕಾರ ಹಿಡಿಯೋಣ ಎಂದಿದ್ದಾರೆ.

ಪೌರಕಾರ್ಮಿಕರ ಕಾಲೋನಿಯ ಸುಬ್ರಮಣ್ಯ ಮಾತನಾಡಿದರು. ಸಭೆಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಬಿ.ಎಸ್‌. ಯೋಗಾನಂದಕುಮಾರ್‌, ನಗರಾಧ್ಯಕ್ಷ ರಾಜೇಂದ್ರ, ಮುಖಂಡರಾದ ಗಣೇಶ್‌ ಕುಮಾರಸ್ವಾಮಿ, ಕೆ.ಟಿ. ಗೋಪಾಲ್‌, ಶಂಕರ್‌, ಚಂದ್ರಶೇಖರ್‌, ಗರಡಿ ಶ್ರೀನಿವಾಸ್‌, ಸೋಮಶೇಖರ್‌, ಕಾರ್ತೀಕ್‌, ಪ್ರಕಾಶ್‌, ವಿವೇಕ್‌, ಸುಬ್ಬಣ್ಣ, ಗೋವಿಂದನಾಯಕ, ಕಿರಣ್‌ಕುಮಾರ್‌, ಅಭ್ಯರ್ಥಿ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರು ಇದ್ದರು.

ನಗರಸಭೆ ಅಧಿಕಾರ ಹಿಡಿಯೋಣ

ಜ. 17 ರಂದು ಆಯ್ಕೆ ಸಮಿತಿ ಪ್ರತಿವಾರ್ಡ್‌ಗೂ ಭೇಟಿ ನೀಡಿ ಆಕಾಂಕ್ಷಿಗಳ ಕುರಿತು ಮಾಹಿತಿ ಕಲೆ ಹಾಕಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲಿದೆ. ಜ. 20ರೊಳಗೆ ಎಲ್ಲ 31 ವಾರ್ಡ್‌ಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳ್ಳಲಿದೆ. ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಗೆಲುವು ಸಾಧ್ಯವಾಗಲಿದೆ. ರಾಜ್ಯದಲ್ಲೂ ನಮ್ಮದೇ ಸರ್ಕಾರ ಇರುವುದರಿಂದ ಅಭಿವೃದ್ಧಿ ಯೋಜನೆಗಳನ್ನು ತರಲು ಅನುಕೂಲವಾಗಲಿದೆ. ಈ ಕುರಿತು ಮತದಾರರಲ್ಲಿ ಅರಿವು ಮೂಡಿಸೋಣವೆಂದರು.