ಮಂಡ್ಯ (ನ.29): ಗ್ರಾಪಂ ಚುನಾವಣೆ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಕ್ಷ ಇದೀಗ ಗ್ರಾಮಾಂತರ ಪ್ರದೇಶದ ಜನರತ್ತ ದೃಷ್ಟಿಹೊರಳಿಸಿದೆ. ಗ್ರಾಮ ಸ್ವರಾಜ್‌ ಸಮಾವೇಶದ ಹೆಸರಿನಲ್ಲಿ ಹಳ್ಳಿಗಳ ಕಡೆ ಸಚಿವರ ಯಾತ್ರೆ ಶುರುವಾಗಿದೆ. ಜಿಲ್ಲೆಯಲ್ಲಿ ಗ್ರಾಮ ಸ್ವರಾಜ್‌ ಸಮಾವೇಶಕ್ಕೆ ಕೆ.ಆರ್‌.ಪೇಟೆ ಹಾಗೂ ಮದ್ದೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಗ್ರಾಮ ಸ್ವರಾಜ್ಯ ಸಮಾವೇಶವನ್ನು ಯಶಸ್ವಿಗೊಳಿಸೋಣ, ಬಿಜೆಪಿ ಸಾಧನೆಗಳನ್ನು ಮನೆ-ಮನೆಗಳಿಗೆ ತಲುಪಿಸೋಣ- ಬಿಜೆಪಿ ಗೆಲ್ಲಿಸೋಣ ಎಂಬ ಧ್ಯೇಯವಾಕ್ಯದೊಂದಿಗೆ ಗ್ರಾಮ ಸ್ವರಾಜ್ಯ ಸಮಾವೇಶವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಡಿ.2ರಂದು ಕೆ.ಆರ್‌.ಪೇಟೆ ಹಾಗೂ ಮದ್ದೂರಿನಲ್ಲಿ ಗ್ರಾಮಸ್ವರಾಜ್‌ ಸಮಾವೇಶ ಏರ್ಪಡಿಸಿದ್ದು, ಕಂದಾಯ ಸಚಿವ ಆರ್‌. ಅಶೋಕ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ನೇತೃತ್ವ ವಹಿಸಿದ್ದಾರೆ.

ಮಿತ್ರಮಂಡಳಿ ಒಗ್ಗಟ್ಟು ಪ್ರದರ್ಶನ: ಸಿಎಂ, ರಾಜ್ಯಾಧ್ಯಕ್ಷರ ಭೇಟಿಗೆ ಸಮಯ ಫಿಕ್ಸ್‌..!

ನರೇಗಾ ಯೋಜನೆಯಿಂದ ಜನರಿಗೆ ಎಷ್ಟುಲಾಭವಾಗುತ್ತಿದೆ ಎಂಬ ಬಗ್ಗೆ ಜನರಿಗೆ ವಿವರಿಸುವುದು. ಇದರ ಜೊತೆಗೆ ಕೊರೋನಾ ಸಮಯದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಸಬ್ಸಿಡಿ ಗ್ಯಾಸ್‌ ಸಂಪರ್ಕ, ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ, ರೈತರು, ತೋಟಗಾರಿಕೆ ಬೆಳೆಗಾರರಿಗೆ ನೀಡಿದ ಆರ್ಥಿಕ ನೆರವು ಸೇರಿದಂತೆ ಜನೋಪಯೋಗಿ ಕಾರ್ಯಕ್ರಮಗಳ ಕುರಿತು ಜನರಿಗೆ ಮನನ ಮಾಡಿಕೊಟ್ಟು ಅವರ ಮನಸ್ಸನ್ನು ಗೆಲ್ಲುವ ಗುರಿಯೊಂದಿಗೆ ಮುನ್ನಡೆದಿದ್ದಾರೆ.

ಕೆ.ಆರ್‌. ಪೇಟೆ ಹಾಗೂ ಮದ್ದೂರು ತಾಲೂಕು ಹೆಚ್ಚು ಹೋಬಳಿಗಳಿರುವ ಕ್ಷೇತ್ರಗಳಾಗಿದ್ದು, ಅತಿ ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿವೆ. ಈ ಕಾರಣದಿಂದಲೂ ಇವೆರಡು ಕ್ಷೇತ್ರಗಳನ್ನು ಗ್ರಾಮ ಸ್ವರಾಜ್‌ ಸಮಾವೇಶಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಭಾಗಗಳಿಂದ ಸಮಾವೇಶಕ್ಕೆ ಹೆಚ್ಚು ಜನರು ಬರುವುದರಿಂದ ಯಶಸ್ವಿ ಸಮಾವೇಶ ನಡೆಸುವುದಕ್ಕೂ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವೂ ಬಿಜೆಪಿ ನಾಯಕರಲ್ಲಿದೆ.

ಉಳಿದ ತಾಲೂಕುಗಳಲ್ಲಿ ಸ್ಥಳೀಯ ನಾಯಕರು, ಮುಖಂಡರು, ಕಾರ್ಯಕರ್ತರನ್ನು ಬಳಸಿಕೊಂಡು ಗ್ರಾಮ ಸ್ವರಾಜ್‌ ಸಮಾವೇಶಕ್ಕೆ ಶಕ್ತಿ ತುಂಬುವ ಕೆಲಸಕ್ಕೆ ನಾಯಕರು ಮುಂದಾಗಿದ್ದಾರೆ. ಕೆ.ಆರ್‌. ಪೇಟೆ ಉಪ ಚುನಾವಣೆಯ ಬಿಜೆಪಿ ಗೆಲುವು ರಾಜ್ಯ ಮಟ್ಟದ ನಾಯಕರ ಗಮನಸೆಳೆದಿದೆ. ಹೀಗಾಗಿ ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ಹೊಸ ಹೊಸ ಕಾರ್ಯತಂತ್ರಗಳೊಂದಿಗೆ ಎಲ್ಲೆಡೆ ಲಗ್ಗೆ ಇಟ್ಟಿದೆ.

ಈಗಾಗಲೇ ದೀಪಾವಳಿ ಹಬ್ಬದ ನರಕಚತುರ್ದಶಿಯಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಕೆ.ಆರ್‌. ಪೇಟೆ ತಾಲೂಕಿ ಕೆಲ ಗ್ರಾಮಗಳಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡು ಹೊಸ ಅಲೆಯನ್ನು ಎಬ್ಬಿಸಿದ್ದರು. ಮಡುವಿನಕೋಡಿ, ಹೊಸಕೋಟೆ ಗ್ರಾಮಗಳಲ್ಲಿ ಇಡೀ ದಿನ ರಾಗಿ ನಾಟಿ ಮಾಡುವುದರೊಂದಿಗೆ ಟ್ರ್ಯಾಕ್ಟರ್‌ ಓಡಿಸಿ, ಮೇವು ಕತ್ತರಿಸಿ, ಹಸುವಿನ ಹಾಲು ಕರೆದು, ಕೃಷಿ ಭೂಮಿಯ ಕುಂಟೆ ಹೊಡೆದು ಜನರನ್ನು ಆಕರ್ಷಿಸಿದ್ದರು. ಇದೂ ಸಹ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಹಳ್ಳಿ ಜನರನ್ನು ಸೆಳೆಯುವ ಪ್ರಯತ್ನದ ಭಾಗವಾಗಿಯೇ ಕಂಡುಬಂದಿತ್ತು.

ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದರೊಂದಿಗೆ ಕೆ.ಸಿ. ನಾರಾಯಣಗೌಡರು ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದರು. ಬಿಜೆಪಿ ಬೇರುಗಳನ್ನು ಗ್ರಾಮಮಟ್ಟದಿಂದ ಬಲವಾಗಿ ಬೇರೂರಿಸುವ ಸಲುವಾಗಿ ರೈತರೊಂದಿಗೆ ಒಂದು ದಿನ, ಗ್ರಾಮ ಸ್ವರಾಜ್‌ ಸಮಾವೇಶ, ಜನಸ್ಪಂದನ ಕಾರ್ಯಕ್ರಮಗಳೆಲ್ಲವನ್ನೂ ಪಕ್ಷದ ನಾಯಕರು ಆ ಕ್ಷೇತ್ರದಿಂದಲೇ ಚಾಲನೆಗೊಳಿಸಿದ್ದಾರೆ. ಮದ್ದೂರು ಕ್ಷೇತ್ರದಲ್ಲಿ ಎಸ್‌.ಪಿ.ಸ್ವಾಮಿ ಬಿಜೆಪಿಗೆ ಶಕ್ತಿಯಾಗಿ ನಿಂತಿರುವ ಹಿನ್ನೆಲೆಯಲ್ಲಿ ಗ್ರಾಮ ಸ್ವರಾಜ್‌ ಸಮಾವೇಶ ಆಯೋಜನೆಗೊಂಡಿದೆ.

ಕೆ.ಆರ್‌.ಪೇಟೆ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿಕೊಳ್ಳುವುದಕ್ಕೆ ಬಿಜೆಪಿ ತೀವ್ರ ಕಸರತ್ತು ಆರಂಭಿಸಿದೆ. ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ಗೆ ಸಮರ್ಥ ಪೈಪೋಟಿ ನೀಡುವುದಕ್ಕೆ ರಣತಂತ್ರ ರೂಪಿಸುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಎರಡೂ ಸರ್ಕಾರಗಳ ಸಾಧನೆಗಳನ್ನು ಬಿಂಬಿಸಿ ಬಿಜೆಪಿ ಕಡೆ ಮನವೊಲಿಸುವ ಪ್ರಯತ್ನಕ್ಕಿಳಿದಿದೆ. ಗ್ರಾಪಂ ಚುನಾವಣೆಯಲ್ಲಿ ತೃಪ್ತಿದಾಯಕ ಫಲಿತಾಂಶವನ್ನು ಕಂಡುಕೊಳ್ಳುವುದಕ್ಕೆ ಕಮಲಪಡೆ ವಿಭಿನ್ನ ರೀತಿಯ ಪ್ರಯೋಗಗಳೊಂದಿಗೆ ಜನರ ಮುಂದೆ ಬರುತ್ತಿದ್ದಾರೆ.

ತಳಮಟ್ಟದಿಂದ ಪಕ್ಷವನ್ನು ಬಲವರ್ಧನೆಗೊಳಿಸಲು ಗ್ರಾಪಂ ಚುನಾವಣೆಯನ್ನು ಬಿಜೆಪಿ ವೇದಿಕೆಯನ್ನಾಗಿ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ. ಗ್ರಾಮ ಸ್ವರಾಜ್‌ ಸಮಾವೇಶದ ಮೂಲಕ ಜನರಿಗೆ ಬಿಜೆಪಿ ಸಾಧನೆ ತಿಳಿಸುವುದರ ಜೊತೆಯಲ್ಲೇ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿ ಚುನಾವಣಾ ಅಖಾಡಕ್ಕೆ ಇಳಿಸುವುದು. ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಸರ್ಕಾರದ ಸಾಧನೆಗಳ ಪುಸ್ತಕಗಳನ್ನು ಮನೆ ಮನೆಗೆ ಹಂಚುವ ಮೂಲಕ ಜನರನ್ನು ಪಕ್ಷದ ಕಡೆ ಆಕರ್ಷಿಸುವುದರೊಂದಿಗೆ ಪಕ್ಷವನ್ನು ಸಂಘಟಿಸುವ ಕಾರ್ಯಕ್ಕೆ ನಿಯೋಜಿಸಲು ಮುಂದಾಗಿದೆ.