ಮಂಗಳೂರು(ಫೆ.28): ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರನ್ನು ಪಾಕಿಸ್ತಾನ ಏಜೆಂಟ್‌ ಎನ್ನುವ ಬಿಜೆಪಿಯವರಿಗೆ ಪಾಕ್‌ ವೈರಸ್‌ ಹರಡಿದೆ. ಇದು ಕೊರೋನಾ ವೈರಸ್‌ಗಿಂತಲೂ ಹಾನಿಕಾರಕ ಎಂದು ಶಾಸಕ ಯು.ಟಿ. ಖಾದರ್‌ ಕಿಡಿಕಾರಿದ್ದಾರೆ.

ಕೆಲವು ತಿಂಗಳಿನಿಂದ ಬಿಜೆಪಿ ನಾಯಕರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯಿಂದ ಹಿಡಿದು ಈಗ ಸ್ವಾತಂತ್ರ್ಯ ಹೋರಾಟಗಾರರನ್ನೂ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಪ್ರತಿಯೊಂದಕ್ಕೂ ಪಾಕ್‌ ಏಜೆಂಟ್‌ ಎನ್ನುವ ಬಿಜೆಪಿಯವರಿಗೆ ಪಾಕ್‌ ವೈರಸ್‌ ಹರಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.

ಕ್ಷಮೆ ಕೋರಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಬಿಜೆಪಿಯವರಿಗೆ ಈಗ ಈ ರೀತಿ ಮಾತನಾಡುವ ಅವಕಾಶ ಸಿಕ್ಕಿದ್ದರೆ ಅದಕ್ಕೆ ದೇಶಕ್ಕೆ ದೊರೆತ ಸ್ವಾತಂತ್ರ್ಯ ಕಾರಣ. ಆದರೆ ಈಗ ಸ್ವಾತಂತ್ರ್ಯ ಹೋರಾಟಕ್ಕೇ ಅವಮಾನ ಮಾಡುತ್ತಿದ್ದಾರೆ. ಇದೇ ಬಿಜೆಪಿಯ ಹಿಡನ್‌ ಅಜೆಂಡಾ. ಸ್ವಾತಂತ್ರ್ಯಾನಂತರ ಸಾಮಾನ್ಯ ಜನರ ಹೋರಾಟಗಳಲ್ಲಿ ಭಾಗಿಯಾಗಿ ದೊರೆಸ್ವಾಮಿ ಅವರು ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಮಾತನಾಡುವವರೇ ನಿಜವಾದ ದೇಶದ್ರೋಹಿಗಳು ಎಂದು ಖಾದರ್‌ ಆರೋಪಿಸಿದರು.

ದೊರೆಸ್ವಾಮಿ ಅವರನ್ನು ಅವಹೇಳನ ಮಾಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ಬಗ್ಗೆ ಬಿಜೆಪಿ ಪಕ್ಷದ ನಿಲುವು ಏನು ಎನ್ನುವುದನ್ನು ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಚೋದನಕಾರಿ ಪೋಸ್ಟ್: 'ವಿದೇಶದಲ್ಲಿ ಜೈಲುಪಾಲಾದ ಭಾರತೀಯರಿಗೆ ಸಹಾಯ'

ಮಂಗಳೂರು ಖಾಜಿ ಅವರಿಗೆ ಎಸ್‌ಡಿಪಿಐ, ಪಿಎಫ್‌ಐ ಹೆಸರಲ್ಲಿ ಕೊಲೆ ಬೆದರಿಕೆ ಕುರಿತು ಪ್ರತಿಕ್ರಿಯಿಸಿ, ಇದು ಖಂಡನೀಯ. ಸಂಪೂರ್ಣ ತನಿಖೆ ನಡೆದು ಇದರ ಹಿಂದಿನ ಕೈವಾಡ ಯಾರದ್ದು ಎನ್ನುವುದು ಗೊತ್ತಾಗಬೇಕು. ಇಂಥ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವ ಸಂಘಟನೆಗಳ ಬಗ್ಗೆ ಕ್ರಮ ಅಗತ್ಯ. ಇಂಥ ಸಂಘಟನೆಗಳ ಬಗ್ಗೆ ಸರ್ಕಾರದ ಮೃದು ಧೋರಣೆ ಏಕೆ ಎಂದು ಪ್ರಶ್ನಿಸಿದರು.

‘ನಳಿನ್‌ಗೆ ಕಾಂಗ್ರೆಸ್‌ ದೂರೋದೆ ಕೆಲಸ’

ಎಲ್ಲದಕ್ಕೂ ಕಾಂಗ್ರೆಸ್‌ ಕಾರಣ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಈಗ ದೆಹಲಿ ಗಲಭೆಗೂ ಕಾಂಗ್ರೆಸ್‌ ಕಾರಣ ಎಂದಿದ್ದಾರೆ. ಇವರ ಮಾತಿಗೆ ಅಳಬೇಕೋ, ನಗಬೇಕೋ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದ ಖಾದರ್‌, ನಳಿನ್‌ ಅವರನ್ನು ಬಿಜೆಪಿಯಲ್ಲಿ ಕೇವಲ ಅಲಂಕಾರಕ್ಕೆ ಕೂರಿಸಿದ್ದಾರೆ. ಸಚಿವ ಸಂಪುಟ ಸೇರಿದಂತೆ ಸರ್ಕಾರ ಯಾವ ಕೆಲಸದಲ್ಲೂ ಇವರನ್ನು ಸೇರಿಸುತ್ತಿಲ್ಲ. ಕೇವಲ ಕಾಂಗ್ರೆಸ್‌ನ್ನು ದೂರುವ ಕೆಲಸ ಮಾತ್ರ ಕೊಟ್ಟಿದ್ದಾರೆ. ಇನ್ನಾದರೂ ಘನತೆಯನ್ನು ಉಳಿಸಿಕೊಳ್ಳಲಿ ಎಂದು ಸಲಹೆ ನೀಡಿದರು.