ಮಂಗಳೂರು(ಫೆ.28): ವಿದೇಶಗಳಲ್ಲಿ ಪ್ರಚೋದನಕಾರಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗಾಗಿ ಜೈಲಿನಲ್ಲಿರುವ ಭಾರತೀಯ ಯುವಕರ ಪ್ರಕರಣಗಳನ್ನು ವಿದೇಶಾಂಗ ಸಚಿವಾಲಯ ಕೈಗೆತ್ತಿಕೊಳ್ಳಲಿದೆ. ಇಂಥ ಪ್ರಕರಣಗಳು ವೈಯಕ್ತಿಕವಾಗಿದ್ದರೆ ಆಯಾ ದೇಶಗಳ ನ್ಯಾಯಾಂಗ ಪ್ರಕ್ರಿಯೆ ನಡೆಯುವಾಗ ಭಾರತೀಯರಿಗೆ ರಾಯಭಾರ ಕಚೇರಿಯ ಮೂಲಕ ಕಾನೂನು ನೆರವು ಒದಗಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್‌ ತಿಳಿಸಿದ್ದಾರೆ.

ಮಂಗಳೂರು ವಿವಿ ಘಟಿಕೋತ್ಸವದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸೌದಿಯಲ್ಲಿ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ ಹಾಗೂ ಸೌದಿ ರಾಜಮನೆತನವನ್ನು ಫೇಸ್‌ಬುಕ್‌ನಲ್ಲಿ ನಿಂದಿಸಿದ ಕಾರಣಕ್ಕಾಗಿ ಸೌದಿ ಜೈಲುಪಾಲಾಗಿರುವ ಕುಂದಾಪುರದ ಹರೀಶ್‌ ಬಂಗೇರ ಪ್ರಕರಣವನ್ನು ಉಲ್ಲೇಖಿಸಿದ ಅವರು, ಸಾಮಾಜಿಕ ಮಾಧ್ಯಮ ಖಾತೆಗಳನ್ನು ಉದ್ದೇಶಪೂರ್ವಕವಾಗಿ ಹ್ಯಾಕ್‌ ಮಾಡಿ ಭಾರತೀಯರು ತೊಂದರೆಗೆ ಒಳಗಾದ ಅನೇಕ ಪ್ರಕರಣಗಳಿದ್ದರೆ ಈ ವಿಷಯವನ್ನು ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಿದೆ. ಪ್ರಕರಣಗಳು ವೈಯಕ್ತಿಕವಾಗಿದ್ದರೆ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಚಿಂತಿಸಲಾಗುವುದು ಎಂದರು.

ಆಸ್ಪತ್ರೆ ತ್ಯಾಜ್ಯ ಎಸೆಯಲಿಲ್ಲ, ಅದನ್ನೇ ಲಾಭ ಮಾಡ್ಕೊಂಡು ಯಶಸ್ವಿಯಾದ್ರು..!

ಕೆಲವು ಸಂದರ್ಭಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಮಾಡಿದ ಪೋಸ್ಟ್‌ಗಳನ್ನು ತಪ್ಪಾಗಿ ಅನುವಾದಿಸಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿರಬಹುದು. ಅರೇಬಿಕ್‌ ಭಾಷಾಂತರಕಾರ ಮೂಲಕ ಅಂತಹ ಪೋಸ್ಟ್‌ಗಳನ್ನು ಸರಿಯಾಗಿ ಅರ್ಥೈಸುವ ಕಾರ್ಯ ಮಾಡಲಾಗುವುದು ಎಂದು ಮುರಳೀಧರನ್‌ ಹೇಳಿದರು.

ಚೀನಾದಲ್ಲಿ ಕೊರೋನಾ ವೈರಸ್‌ ಹಾಟ್‌ ಸ್ಪಾಟ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಸರ್ಕಾರ ಮುಂದಾಗಿದೆ. ಈಗಾಗಲೇ ವೈದ್ಯಕೀಯ ಸಾಮಗ್ರಿಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಜಪಾನ್‌ನಲ್ಲಿ ವೈರಸ್‌ ಪೀಡಿತ ಪ್ರವಾಸಿ ಹಡಗಿನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್‌ ಕಳುಹಿಸಲಾಗಿದೆ ಎಂದು ಅವರು ಹೇಳಿದರು.