ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಅನುಷ್ಠಾನಗೊಳ್ಳುತ್ತಿರುವ ಶೇ.95 ರಷ್ಟು ಕಾಮಗಾರಿಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಾಗಿವೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರು (ಮೇ.22): ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಅನುಷ್ಠಾನಗೊಳ್ಳುತ್ತಿರುವ ಶೇ.95 ರಷ್ಟು ಕಾಮಗಾರಿಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಾಗಿವೆ. ಆ ಕಾಮಗಾರಿಗಳನ್ನು ಅದಲು, ಬದಲು ಮಾಡಿ ಶಂಕುಸ್ಥಾಪನೆ ಮಾಡುವ ಕೆಲಸ ಕಾಂಗ್ರೆಸ್‌ ಶಾಸಕರು ಮಾಡುತ್ತಿದ್ದಾರೆ. ಈ ಬಗ್ಗೆ ಯಾವ ದೇವರ ಮುಂದೆ ಬೇಕಾದರೂ ಸತ್ಯ ಮಾಡುತ್ತೇನೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಸುದ್ದಿಗಾರರೊಂದಿಗೆ ಮಾತನಾಡಿ ಕ್ಷೇತ್ರದ ಯಾವ ಗ್ರಾಮಗಳಿಗೆ ಎಷ್ಟು ಅನುದಾನ ನೀಡಿದ್ದೇನೆ ಎಂಬ ಪಟ್ಟಿ ನೀಡುತ್ತೇನೆ. ಶಾಸಕ ತಮ್ಮಯ್ಯ, ಸದ್ಯ ಉದ್ಘಾಟಿಸುತ್ತಿರುವ ಕಾಮಗಾರಿ ಬಿಜೆಪಿ ಅವಧಿಯಲ್ಲಿ ಮಂಜೂರಾದ ಕಾಮಗಾರಿ. ಈ ಬಗ್ಗೆ ಬೇಕಾದರೆ, ಸರಸ್ವತಿ ದೇವಸ್ಥಾನದಲ್ಲಿ ಪ್ರಮಾಣ ಮಾಡುತ್ತೇನೆ. ತಾವು ಮಂಜೂರು ಮಾಡಿದ ಕಾಮಗಾರಿಗಳು ಆಗಿದ್ದರೆ, ಬಂದು ಅವರು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

2018 ರಿಂದ 23ರ ಅವಧಿಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಬಹುಗ್ರಾಮ ಕುಡಿ ಯುವ ನೀರಿನ ಯೋಜನೆ, ಕೆರೆ ತುಂಬಿಸುವ ಯೋಜನೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಒಟ್ಟು ₹5,857 ಕೋಟಿ ಅನುದಾನ ತೆಗೆದುಕೊಂಡು ಬರಲಾಗಿತ್ತು. 2023ರ ನಂತರ ಬಂದ ಕಾಂಗ್ರೆಸ್‌ ಸರ್ಕಾರ ಈವರೆಗೆ ₹50 ರಿಂದ 55 ಕೋಟಿ ಅನುದಾನ ನೀಡಿದೆ. ಬಿಜೆಪಿ ಅವಧಿಯಲ್ಲಿ ಮಂಜೂರು ಮಾಡಿದ ಕಾಮಗಾರಿಗಳನ್ನು ಈಗಿನ ಶಾಸಕರು ಅದಲು ಬದಲು ಮಾಡಿ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಈ ಸತ್ಯ ಜನರಿಗೆ ತಿಳಿಸುವ ಉದ್ದೇಶದಿಂದ ಕಾಮಗಾರಿ ಸ್ಥಳಕ್ಕೆ ಆಗಮಿಸಿದ್ದೇನೆ ಎಂದರು.

ಕಾಂಗ್ರೆಸ್‌ ಸರ್ಕಾರದ ವಿಳಂಬ ನೀತಿಯಿಂದ ತಡ

ಲೋಕೋಪಯೋಗಿ ಇಲಾಖೆಯಿಂದ ₹210 ಕೋಟಿ ವಿಶೇಷ ಅನುದಾನವನ್ನು 2022ರಲ್ಲಿ ಮಂಜೂರು ಮಾಡಿಸಲಾಗಿತ್ತು. ಈ ಪೈಕಿ ಈ ರಾಂಪುರ ರಸ್ತೆಯೂ ಒಂದಾಗಿದೆ. ಈ ರಸ್ತೆಗೆ ₹8 ಕೋಟಿ ಮೀಸಲಿಡಲಾಗಿತ್ತು. ಆದರೆ, 2023ರ ಮೇ ನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಆರಂಭಿಸದ ಕಾಮಗಾರಿ ತಡೆ ಹಿಡಿಯುವ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಈ ರಾಂಪುರ ರಸ್ತೆ ಕಾಮಗಾರಿಗೆ ಅಷ್ಟರಲ್ಲಿ ಟೆಂಡರ್ ಆಗಿತ್ತು, ಆದರೆ, ಕಾರ್ಯಾದೇಶ ನೀಡಿರಲಿಲ್ಲ. 2024ರದ ಜುಲೈ ನಲ್ಲಿ ಕಾರ್ಯಾದೇಶ ನೀಡಿದರು. 10 ಮೀಟರ್‌ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ರಸ್ತೆಯಲ್ಲಿ ವಿದ್ಯುತ್‌ ಕಂಬ ಮತ್ತು ಮರ ಅಡ್ಡವಾದ ಹಿನ್ನೆಲೆಯಲ್ಲಿ ವಿದ್ಯುತ್‌ ಕಂಬ ಸ್ಥಳಾಂತರಕ್ಕೆ ಮತ್ತು ಮರ ತೆರವಿಗೆ ಕಳೆದ 2026ರ ಜನವರಿ 29ರಲ್ಲಿ ಕಾರ್ಯದೇಶ ನೀಡಲಾಗಿದೆ. ಹೀಗಾಗಿ, ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿದರು.

ಅಧಿಕಾರ ದರ್ಪ ಹೆಚ್ಚು ದಿನ ನಡೆಯಲ್ಲ

ಬಹಳ ದಿನ ಈ ಅಧಿಕಾರದ ದರ್ಪ ನಡೆಯುವುದಿಲ್ಲ. ದರ್ಪ ತೋರಿಸಿದವರು ಹೆಚ್ಚು ದಿನ ಉಳಿಯುವುದಿಲ್ಲ. ನಾನು ಕಾಣದಿರುವ ಅಧಿಕಾರವಲ್ಲ. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಯಾಗಿ, ಈಗ ವಿಧಾನಪರಿಷತ್‌ ಸದಸ್ಯನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಬೇರೆ ಬೇರೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿದ್ದೇನೆ ಎಂದರು.

ಹೋದಲಿ, ಬಂದಲ್ಲಿ ಧಿಕ್ಕಾರ ಕೂಗಿಸುವುದು ಕಷ್ಟವಲ್ಲ

ಅಭಿವೃದ್ಧಿ ವಿಚಾರದಲ್ಲಿ ಚಿಲ್ಲರೆ ರಾಜಕಾರಣ ಮಾಡಬಾರದು ಎಂದು ಸುಮ್ಮನಿದ್ದೇವೆ. ಕಾಂಗ್ರೆಸ್‌ ಶಾಸಕರು ಹೋದಲ್ಲಿ, ಬಂದಲ್ಲಿ ಧಿಕ್ಕಾರ ಕೂಗಿಸುವುದು ಕಷ್ಟದ ಕೆಲಸವಲ್ಲ. ಸಿ.ಟಿ.ರವಿ ಖೋಟಾ ನೋಟು ಚಲಾವಣೆ ರಾಜಕಾರಣಿ ಅಲ್ಲ. ಖೋಟಾ ನೋಟ್‌ನಿಂದ ಗುಬ್ಬಿ ಹಳ್ಳಿಯಲ್ಲಿ ಅಮಾಯಕನ ಸಾವಿಗೆ ಕಾರಣ ಯಾರು ಎಂಬುದು ಜಗತ್ತಿಗೆ ಗೊತ್ತಿದೆ. ನಕಲಿ ಮದ್ಯ ಪೂರೈಕೆ ಮಾಡುತ್ತಿರುವ ಕಿಂಗ್‌ ಪಿನ್‌ಗೆ ಸಹಕಾರ ನೀಡಿ, ಬಡವರ ಮನೆ ಹಾಳು ಮಾಡುತ್ತಿರುವ ಶಾಸಕ ನಾನು ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಯಾರ ಹೆಸರಿನಲ್ಲಿ ಕಾಮಗಾರಿ ಪಟ್ಟಿ ಬಿಡುಗಡೆ

ಕ್ಷೇತ್ರದಲ್ಲಿ ಯಾರು, ಯಾರ ಹೆಸರಿನಲ್ಲಿ ಗುತ್ತಿಗೆ ಪಡೆದು ಕಾಮಗಾರಿ ಮಾಡುತ್ತಿದ್ದಾರೆ ಎಂಬ ಬಗ್ಗೆ ಪಟ್ಟಿ ಬಿಡುಗಡೆ ಮಾಡು ತ್ತೇನೆ. ಬಿಜೆಪಿ ಅವಧಿಯಲ್ಲಿ ಮಂಜೂರು ಮಾಡಿದ ಹಣದಲ್ಲಿ ಇವರಿಗೆ ಕಮಿಷನ್‌ ಸಿಕ್ಕಿದ್ದು, ಅದರಲ್ಲಿ ಮಜಾ ಮಾಡುತ್ತಿದ್ದಾರೆ. 20 ವರ್ಷದ ಶಾಸಕರ ಅವಧಿಯಲ್ಲಿ ಒಂದು ಬಾರ್‌ ಅಂಗಡಿ ತೆರೆಯಲಿಲ್ಲ. ಸಂಬಂಧಿಕರ ಹೆಸರಿನಲ್ಲೂ ಬಾರ್‌ ತೆರೆದಿಲ್ಲ ಎಂದರು.