ಸಂಪುಟದಲ್ಲಿ ನನಗೆ ಯಾಕೆ ಸಚಿವ ಸ್ಥಾನ ಕೈತಪ್ಪಿತು ಎಂದು ಪೋಸ್ವ್‌ ಮಾರ್ಟಂ ಮಾಡುವುದಿಲ್ಲ ನನಗೆ ಹೆಣ ಕುಯ್ಯುವುದರಲ್ಲಿ ಆಸಕ್ತಿಯೂ ಇಲ್ಲ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ತೀಕ್ಷ್ಣವಾಗಿ ಪ್ರತಿಕ್ರಿಯೆ

 ಮೈಸೂರು (ಆ.05):  ಸಂಪುಟದಲ್ಲಿ ನನಗೆ ಯಾಕೆ ಸಚಿವ ಸ್ಥಾನ ಕೈತಪ್ಪಿತು ಎಂದು ಪೋಸ್ವ್‌ ಮಾರ್ಟಂ ಮಾಡುವುದಿಲ್ಲ. ನನಗೆ ಹೆಣ ಕುಯ್ಯುವುದರಲ್ಲಿ ಆಸಕ್ತಿಯೂ ಇಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್‌. ಯಡಿಯೂರಪ್ಪ ಅವರು ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂದು ಎಂದು ಮೊನ್ನೆ ಹೇಳಿದ್ದರು. ನಿನ್ನಂತವನು ಮಂತ್ರಿ ಆಗಬೇಕು. ಅದಕ್ಕೆ ಪಟ್ಟಿಯಲ್ಲಿ ಹೆಸರು ಸೇರಿಸಿದ್ದೇನೆ ಎಂದಿದ್ದರು. ನಾನು ಮೆರಿಟ್‌ ವಿದ್ಯಾರ್ಥಿ, ಲಾಭಿಯಲ್ಲಿ ನಂಬಿಕೆ ಇಲ್ಲ. ನಿನ್ನೆ ರಾತ್ರಿ ನನಗೆ ದೆಹಲಿಯ ಕೆಲ ನಾಯಕರು, ಸ್ವಾಮೀಜಿಗಳು ಫೋನ್‌ ಕರೆ ಮಾಡಿ ಅಭಿನಂದಿಸುತ್ತಿದ್ದರು. ಆದರೆ ಬೆಳಗ್ಗೆ ಆಗುವುದರಲ್ಲಿ ಎಲ್ಲವೂ ಬದಲಾಗಿದೆ. ನನ್ನದು ಮಿಲಿಟರಿ ಜಾತಿ, ಜನಿವಾರ ಮತ್ತೊಂದು ಚಿಂತೆ ಮಾಡುವುದಿಲ್ಲ ಎಂದು ಹೇಳಿದರು.

ಅವಿಭಜಿತ ಮೈಸೂರು ಜಿಲ್ಲೆಗೆ ಮತ್ತೆ ನಿರಾಶೆ : ಕಾರಣ ಇದೇ!

ನನ್ನ ಅನುಭವದ ಆಧಾರದ ಮೇಲೆ ಕೆ.ಆರ್‌. ಕ್ಷೇತ್ರವನ್ನು ಇಡೀ ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಪೇಜ್‌ ಪ್ರಮುಖ್‌ ಯೋಜನೆ ಮೂಲಕ 15 ಸಾವಿರ ಪೇಜ್‌ ಪ್ರಮುಖರನ್ನು ನೇಮಿಸುತ್ತೇನೆ. ಆ ಮೂಲಕರಾಷ್ಟ್ರ ನಾಯಕರನ್ನು ಮೈಸೂರಿಗೆ ಕರೆಯಿಸಿ ಕಾರ್ಯಕ್ರಮ ಆಯೋಜಿಸುತ್ತೇನೆ. ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡುತ್ತೇನೆ. ನನ್ನ ಕ್ಷೇತ್ರಕ್ಕೆ ಇದು ದುಃಖದ ದಿನವಲ್ಲ. ಬದಲಿಗೆ ಸವಾಲಿನ ದಿನ. ನಾನು ಒಬ್ಬ ಮಿಲಿಟರಿ ಅಧಿಕಾರಿಯ ಮಗ. ನನ್ನ ಮೈಯಲ್ಲಿ ಮಿಲಿಟರಿ ಅಧಿಕಾರಿಯ ರಕ್ತ ಹರಿಯುತ್ತಿದೆ ಎಂದರು.

ಮೈಸೂರು ಜಿಲ್ಲೆಗೆ ಪ್ರಾತಿನಿಧ್ಯ ಸಿಗುತ್ತೆ ಅಂದು ಕೊಂಡೆವು. ಪಕ್ಷವನ್ನು ನಿರಂತರವಾಗಿ ಸಂಘಟಿಸಿದ್ದೇನೆ. ರಾಜ್ಯಕ್ಕೆ ಏನೂ ಕೆಲಸ ಮಾಡಬೇಕು ಎಂದು ಕನಸು ಇಟ್ಟುಕೊಂಡಿದ್ದೆ. ಅದನ್ನು ಈಗ ಕೆ.ಆರ್‌. ಕ್ಷೇತ್ರಕ್ಕೆ ಮಾಡುತ್ತೇನೆ. ಇದು ದುಃಖದ ದಿನವಲ್ಲ. ಸವಾಲಿನ ದಿನವಾಗಿ ಸ್ವೀಕರಿಸಿ ಪಕ್ಷವನ್ನು ಸಂಘಟಿಸುತ್ತೇನೆ. ನಾನು ನೋವಿನಲ್ಲಿ ಇಲ್ಲ. ಮಂತ್ರಿಯ ಸ್ಥಾನ ಇಲ್ಲದಿದ್ದರೂ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.